ಮಡಿಕೇರಿ, ಆ. ೨೪: ಸಾಮಾಜಿಕ ಪರಿವರ್ತಕ ಹಾಗೂ ಅಭಿವೃದ್ಧಿಯ ಹರಿಕಾರ ಡಿ.ದೇವರಾಜ ಅರಸು ಕಾಲದÀ ನಂತರ ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ದಾಖಲೆಯ ೧೩೫ ಸ್ಥಾನಗಳಲ್ಲಿ ಗೆಲವು ದಾಖಲಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದು, ಅರಸರ ಹಾದಿಯಲ್ಲಿ ಈಗಿನ ಸರ್ಕಾರ ಸಾಗದಿದ್ದಲ್ಲಿ ಪರಿಣಾಮ ಕಷ್ಟವಾಗಬಹುದು ಎಂದು ಮಾಜಿ ಸಚಿವ ಎಂ.ಸಿ.ನಾಣಯ್ಯ ಹೇಳಿದ್ದಾರೆ. ಕೊಡಗು ಜಿಲ್ಲಾ ಅಹಿಂದ ಒಕ್ಕೂಟ ಹಾಗೂ ಸಹಮತ ವೇದಿಕೆ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ನಡೆದ ಡಿ.ದೇವರಾಜ ಅರಸರ ೧೦೮ನೇ ಜನ್ಮ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
೧೯೭೨ ರಲ್ಲಿ ೨೧೬ ವಿಧಾನಸಭಾ ಕ್ಷೇತ್ರಗಳಲ್ಲಿ ೧೬೫ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ದೇವರಾಜ ಅರಸು ಅವರು ಇತಿಹಾಸ ಸೃಷ್ಟಿಸಿದರು. ಇದೀಗ ಕರ್ನಾಟಕದಲ್ಲಿ ಎರಡನೇ ಇತಿಹಾಸ ಸೃಷ್ಟಿಯಾಗಿದ್ದು, ಕಾಂಗ್ರೆಸ್ ಪಕ್ಷ ೧೩೫ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಪ್ರಧಾನಿ ನರೇಂದ್ರಮೋದಿ ಅವರು ರಾಜ್ಯದೆಲ್ಲೆಡೆ ೨೬ ದಿನಗಳ ಕಾಲ ಪ್ರವಾಸ ಕೈಗೊಂಡು ೩೬ ಸಭೆಗಳನ್ನು ನಡೆಸಿದರು. ಆದರೆ ಮೌನವಾಗಿಯೇ ಇದ್ದ ಮತದಾರ ಬದಲಾವಣೆಯನ್ನು ಬಯಸಿ ಕಾಂಗ್ರೆಸ್‌ಗೆ ೧೩೫ ಸ್ಥಾನಗಳನ್ನು ತಂದು ಕೊಟ್ಟಿದ್ದಾರೆ. ಇದೀಗ ಆಡಳಿತದಲ್ಲಿರುವ ಕಾಂಗ್ರೆಸ್ ಸರ್ಕಾರ ದೇವರಾಜ ಅರಸು ಅವರ ಹಾದಿಯಲ್ಲೇ ಸಾಗಬೇಕು. ಜನರು ಕೂಡ ಇದನ್ನೇ ನಿರೀಕ್ಷೆ ಮಾಡುತ್ತಿದ್ದಾರೆ ಎಂದು ನಾಣಯ್ಯ ಅಭಿಪ್ರಾಯಪಟ್ಟರು.
ದೇವರಾಜ ಅರಸು ಅವರ ಹುಟ್ಟಿದ ಮನೆ ಮತ್ತು ಸಮಾಧಿಯನ್ನು ಅಭಿವೃದ್ಧಿಪಡಿಸಿ ಮುಂದಿನ ಪೀಳಿಗೆಗೆ ಸ್ಫೂರ್ತಿಯ ಕ್ಷೇತ್ರವನ್ನಾಗಿಸಬೇಕು. ಈಗಿನ ಕಾಂಗ್ರೆಸ್ ಸರ್ಕಾರ ದೊಡ್ಡ ಮಟ್ಟದಲ್ಲಿ ಸ್ಮಾರಕವನ್ನು ಅಭಿವೃದ್ಧಿಪಡಿಸಿ ಅರಸು ಅವರು ಯುವ ಜನಾಂಗಕ್ಕೆ ಮಾದರಿಯಾಗುವಂತೆ ನೋಡಿಕೊಳ್ಳಬೇಕು. ಆ ಮೂಲಕ ಅರಸು ಹೆಸರು ಅಮರವಾಗಬೇಕು ಎಂದರು.
ಸಹಮತ ವೇದಿಕೆಯ ಅಧ್ಯಕ್ಷ ಹಾಗೂ ಅಹಿಂದ ಒಕ್ಕೂಟದ ಸ್ಥಾಪಕ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ದೇವರಾಜ ಅರಸು ಅವರು ಸಾಮಾಜಿಕ ನ್ಯಾಯವನ್ನು ನೀಡಿದರು, ಸಿದ್ಧಾಂತ ಮತ್ತು ಮೌಲ್ಯ ಇದ್ದರೆ ಮಾತ್ರ ಜನಸಾಮಾನ್ಯರಿಗೆ ಸಹಾಯ ಮಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಸಾಮಾಜಿಕ ನ್ಯಾಯದ ನೆಲೆಗಟ್ಟಿನಲ್ಲಿ ಈ ರಾಷ್ಟç ನಿರ್ಮಾಣಗೊಂಡಿದ್ದು, ಮೇಲು, ಕೀಳು ಎನ್ನುವ ಮನೋಭಾವನೆಯಿಂದ ದೂರ ಉಳಿದು ನಾವೆಲ್ಲರೂ ಭಾರತೀಯರು ಎಂದು ಒಗ್ಗಟ್ಟಿನಿಂದ ಬದುಕಿದರೆ ಉತ್ತಮ ಸಮಾಜ ನಿರ್ಮಾಣಗೊಳ್ಳುತ್ತದೆ. ದೇವರಾಜು ಅರಸು ಅವರು ಸಾಮಾಜಿಕ ನ್ಯಾಯ ನೀಡಿದ ಕಾರಣ ಇಂದಿಗೂ ಅವರ ಹೆಸರು ಚಿರವಾಗಿದೆ. ಸಂಘರ್ಷವನ್ನು ಬಿಟ್ಟು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿದ ಅವರು ದುರ್ಬಲರ ಶಕ್ತಿಯಾಗಿದ್ದರು. ಸಂಘರ್ಷದಿAದ ನ್ಯಾಯ ಸಿಗಲು ಸಾಧ್ಯವಿಲ್ಲ, ಪ್ರತಿಯೊಬ್ಬರು ಸಮಾಜಮುಖಿಯಾಗಿ ಕೆಲಸ ಮಾಡಬೇಕು. ದೇವರಾಜ ಅರಸು ಅವರ ವಿಚಾರಧಾರೆಗಳನ್ನು ಪ್ರತಿಪಾದಿಸಬೇಕು ಎಂದು ರಮೇಶ್ ಕರೆ ನೀಡಿದರು.
ಸನ್ಮಾನ : ಮಹಿಳೋದಯ ಮಹಿಳಾ ಒಕ್ಕೂಟದ ಸಂಯೋಜಕಿ ಜಾಯ್ಸ್ ಮೆನೇಜಸ್, ತನಲ್ ವೃದ್ಧಾಶ್ರಮದ ಮೇಲ್ವಿಚಾರಕಿ ಬಿ.ಕೆ. ಶಶಿಕಲಾ, ಕೂರ್ಗ್ ಬ್ಲಡ್ ಫೌಂಡೇಶನ್ ನÀ ಪದಾಧಿಕಾರಿ ಎಂ. ಸಮೀರ್ ಹಾಗೂ ಸಮಾಜ ಸೇವಕ ಬಾಬುಚಂದ್ರ ಉಳ್ಳಾಗಡ್ಡಿ ಅವರುಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ನಗರಸಭಾ ಸದಸ್ಯ ಬಿ.ವೈ. ರಾಜೇಶ್, ಕೆ. ನಿಡುಗಣೆ ಗ್ರಾ.ಪಂ. ಸದಸ್ಯ ಜಾನ್ಸನ್ ಪಿಂಟೋ ಹಾಗೂ ಸಮಾಜ ಸೇವಕ ಎಂ.ಎA. ಯಾಕುಬ್ ಸನ್ಮಾನಿತರನ್ನು ಪರಿಚಯಿಸಿದರು. ಸಹಮತ ವೇದಿಕೆಯ ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್ ಉಪಸ್ಥಿತರಿದ್ದರು. ವೇದಿಕೆಯ ಪ್ರಮುಖ ಲಿಯಾಕತ್ ಆಲಿ ಪ್ರಾರ್ಥಿಸಿ, ಅಹಿಂದ ಒಕ್ಕೂಟದ ಅಧ್ಯಕ್ಷ ಟಿ.ಎಂ. ಮುದ್ದಯ್ಯ ಸ್ವಾಗತಿಸಿ, ರೇವತಿ ರಮೇಶ್ ನಿರೂಪಿಸಿ, ಕಾರ್ಯಾಧ್ಯಕ್ಷ ಕೆ.ಟಿ.ಬೇಬಿ ಮ್ಯಾಥ್ಯು ವಂದಿಸಿದರು.