ಪ್ರಧಾನಿ ಮೋದಿಗೆ ಗ್ರೀಸ್‌ನ ಅತ್ಯುನ್ನತ ನಾಗರಿಕ ಪ್ರಶಸ್ತಿ

ಅಥೆನ್ಸ್, ಆ. ೨೫: ಪ್ರಧಾನಿ ಮೋದಿಯವರಿಗೆ ಗ್ರೀಸ್ ತನ್ನ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯನ್ನು ನೀಡಿದೆ. ಅಥೆನ್ಸ್ನಲ್ಲಿ ಗ್ರೀಸ್ ಅಧ್ಯಕ್ಷೆ ಕಟರೀನಾ ಸಕೆಲ್ಲರೊಪೌಲೌ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ಗ್ರ‍್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ಆನರ್ ಪ್ರಶಸ್ತಿ ಪ್ರದಾನ ಮಾಡಿದರು. ಈ ಅತ್ಯುನ್ನತ ಗೌರವಕ್ಕಾಗಿ ಪ್ರಧಾನಿ ಮೋದಿ ಟ್ವೀಟ್ ಮಾಡುವ ಮೂಲಕ ಗ್ರೀಸ್‌ಗೆ ಧನ್ಯವಾದ ತಿಳಿಸಿದ್ದಾರೆ. ನಾನು ಅಧ್ಯಕ್ಷೆ ಕಟರೀನಾ ಅವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ಗ್ರೀಸ್ ಸರ್ಕಾರ ಮತ್ತು ಜನರಿಗೆ ಧನ್ಯವಾದಗಳು. ಇದು ಗ್ರೀಸ್ ಜನತೆಗೆ ಭಾರತದ ಬಗೆಗಿನ ಗೌರವವನ್ನು ತೋರಿಸುತ್ತದೆ ಎಂದು ಟ್ವೀಟ್ ಮಾಡಿದ್ದಾರೆ. ಗ್ರೀಕ್-ಭಾರತೀಯ ಸ್ನೇಹದ ಕಾರ್ಯತಂತ್ರದ ಪ್ರಚಾರದಲ್ಲಿ ಪ್ರಧಾನಿ ಮೋದಿಯವರ ನಿರ್ಣಾಯಕ ಕೊಡುಗೆಯನ್ನು ಗುರುತಿಸಿ ಗ್ರೀಸ್ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಭೇಟಿಯ ಸಂದರ್ಭದಲ್ಲಿ ಗ್ರೀಕ್ ರಾಜ್ಯವು ಭಾರತದ ಪ್ರಧಾನ ಮಂತ್ರಿಯನ್ನು ಗೌರವಿಸುತ್ತದೆ ಎಂದು ಗ್ರೀಸ್ ಹೇಳಿದೆ.

ರಾಷ್ಟçಪತಿ ಆಡಳಿತ ಜಾರಿಗೊಳಿಸಬೇಕೇ?: ಪಂಜಾಬ್ ಸಿಎಂಗೆ ರಾಜ್ಯಪಾಲರ ಎಚ್ಚರಿಕೆ

ಚಂಡೀಗಢ, ಆ. ೨೫: ಪಂಜಾಬ್ ಗವರ್ನರ್ ಬನ್ವಾರಿಲಾಲ್ ಪುರೋಹಿತ್ ಮತ್ತು ಮುಖ್ಯಮಂತ್ರಿ ಭಗವಂತ್ ಮಾನ್ ನಡುವಿನ ಜಗಳ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ತಮ್ಮ ಪತ್ರಗಳಿಗೆ ಉತ್ತರಿಸದಿದ್ದರೆ ರಾಜ್ಯದಲ್ಲಿ ರಾಷ್ಟçಪತಿ ಆಳ್ವಿಕೆಗೆ ಶಿಫಾರಸು ಮಾಡುವುದಾಗಿ ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ರಾಜ್ಯಪಾಲರು ಶುಕ್ರವಾರ ಸಿಎಂಗೆ ಬಹಿರಂಗವಾಗಿ ಎಚ್ಚರಿಕೆ ನೀಡಿದ್ದಾರೆ. ಸಿಎಂ ಮಾನ್‌ಗೆ ಇತ್ತೀಚೆಗೆ ಬರೆದ ಪತ್ರದಲ್ಲಿ, ರಾಜ್ಯಪಾಲ ಪುರೋಹಿತ್ ಅವರು ಈ ಹಿಂದಿನ ತಮ್ಮ ಪತ್ರಗಳಿಗೆ ಯಾವುದೇ ಉತ್ತರ ನೀಡದ ಸಿಎಂ ಬಗ್ಗೆ ತೀವ್ರ ಅಸಮಾಧಾನಗೊಂಡಿದ್ದು, ಸಾಂವಿಧಾನಿಕ ಕಾರ್ಯವಿಧಾನದ ವೈಫಲ್ಯದ ಬಗ್ಗೆ ರಾಷ್ಟçಪತಿಗಳಿಗೆ ವರದಿ ನೀಡುವುದಾಗಿ ಎಚ್ಚರಿಸಿದ್ದಾರೆ. ಸಂವಿಧಾನದ ೩೫೬ನೇ ವಿಧಿ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್ ೧೨೪ ರ ಅಡಿಯಲ್ಲಿ ಈ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳುವ ಮೊದಲು ಕ್ರಮ ಕೈಗೊಳ್ಳುವಂತೆ ಪುರೋಹಿತ್ ಅವರು ಸಿಎಂ ಮಾನ್ ಅವರಿಗೆ ಸಲಹೆ ನೀಡಿದ್ದಾರೆ.

ಮೂರು ಮಕ್ಕಳೊಂದಿಗೆ ಬಾವಿಗೆ ಹಾರಿದ್ದ ತಾಯಿಯ ರಕ್ಷಣೆ : ಮಕ್ಕಳು ನೀರುಪಾಲು!

ಬಾಗಲಕೋಟೆ, ಆ. ೨೫: ಮೂವರು ಮಕ್ಕಳೊಂದಿಗೆ ತಾಯಿ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಹೃದಯವಿದ್ರಾವಕ ಘಟನೆ ನಡೆದಿದೆ. ಬಾಗಲಕೋಟೆ ಜಿಲ್ಲೆಯ ಕುಂಬಾರಹಳ್ಳ ಗ್ರಾಮದ ತೋಟದ ಮನೆಯಲ್ಲಿ ಈ ದುರ್ಘಟನೆ ನಡೆದಿದ್ದು ಈ ವೇಳೆ ಕುಂಬಾರಹಳ್ಳ ಗ್ರಾಮದ ೨೮ ವರ್ಷದ ಸಂಗೀತಾ ಬದುಕುಳಿದಿದ್ದಾಳೆ. ಆದರೆ ಮೂವರು ಮಕ್ಕಳೂ ನೀರುಪಾಲಾಗಿದ್ದಾರೆ. ಮೃತ ಮಕ್ಕಳಲ್ಲಿ ೧೭ ದಿನದ ಹೆಣ್ಣು ಮಗುವೂ ಸೇರಿದೆ. ಇನ್ನುಳಿದಂತೆ ೬ ವರ್ಷದ ಮಗ ಶ್ರೀಶೈಲ ಹಾಗೂ ನಾಲ್ಕು ವರ್ಷದ ಹೆಣ್ಣು ಮಗು ಶ್ರಾವಣಿ ಮೃತಪಟ್ಟಿದ್ದಾಳೆ. ಜಮಖಂಡಿ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಿದ್ದ ಜೀಪ್: ೯ ಸಾವು

ವಯನಾಡ್, ಆ. ೨೫: ಕೇರಳದ ವಯನಾಡ್ ಜಿಲ್ಲೆಯ ಮಾನಂದ ವಾಡಿಯಲ್ಲಿ ತೋಟದ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಜೀಪ್ ಕಂದಕಕ್ಕೆ ಉರುಳಿಬಿದ್ದು ೯ ಮಂದಿ ಮೃತಪಟ್ಟಿರುವ ದಾರುಣ ಘಟನೆ ಶುಕ್ರವಾರ ನಡೆದಿದೆ. ಮಧ್ಯಾಹ್ನ ೩.೩೦ರ ಸುಮಾರಿಗೆ ತಲಪ್ಪುಳ ಕನ್ನೋತ್ಮಾಲಾ ಬಳಿ ಈ ಭೀಕರ ಅಪಘಾತ ಸಂಭವಿಸಿದ್ದು, ಆರು ಮಹಿಳೆಯರು ಸೇರಿದಂತೆ ೯ ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂವರು ಗಂಭೀರವಾಗಿ ಗಾಯ ಗೊಂಡಿದ್ದು, ಅವರನ್ನು ವಯನಾಡ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಜೀಪ್ ಅಪಘಾತದಲ್ಲಿ ಒಂಬತ್ತು ಮಂದಿ ಸಾವಿಗೀ ಡಾಗಿದ್ದಾರೆ ಮತ್ತು ಚಾಲಕ ಸೇರಿದಂತೆ ಗಾಯಗೊಂಡ ಮೂವರ ಸ್ಥಿತಿ ಚಿಂತಾಜನಕವಾಗಿದೆ ಎಂದು ವಯನಾಡ್ ಕಲೆಕ್ಟರ್ ರೇಣು ರಾಜ್ ಅವರು ತಿಳಿಸಿದ್ದಾರೆ. ದೀಪು ಟೀ ಟ್ರೇಡಿಂಗ್ ಕಂಪೆನಿಗೆ ಸೇರಿದ ೧೨ ಮಂದಿ ಕಾರ್ಮಿಕರು ಪ್ರಯಾಣಿಸುತ್ತಿದ್ದ ಜೀಪ್ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ೩೦ ಮೀಟರ್ ಆಳದ ಕಂದಕಕ್ಕೆ ಬಿದ್ದು ದುರ್ಘಟನೆ ಸಂಭವಿಸಿದೆ.