ಕೂಡಿಗೆ, ಆ. ೨೩: ಇಲ್ಲಿಗೆ ಸಮೀಪದ ತೊರೆನೂರಿನ ಸೂರ್ಯೋದಯ ಪುರುಷರ ಸ್ವಸಹಾಯ ಸಂಘದ ವತಿಯಿಂದ ಶಾಲೆಯಲ್ಲಿ ಕಳೆದ ಸಾಲಿನಲ್ಲಿ ಶೇ. ೧೦೦ ಫಲಿತಾಂಶ ಪಡೆದ ತೊರೆನೂರು ಸರಕಾರಿ ಪ್ರೌಢಶಾಲಾ ಶಿಕ್ಷಕ ವೃಂದದವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಪ್ರೌಢಶಾಲಾ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರು, ಶಾಲೆಯ ಶಿಕ್ಷಕವೃಂದ, ಸಿಬ್ಬಂದಿ ವರ್ಗದವರು ಸೇರಿದಂತೆ ಸಹಕಾರ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಸೋಮಾಚಾರಿ, ಸೋಮಶೇಖರ್, ಅಂರ‍್ರಾಷ್ಟಿçÃಯ ಕ್ರೀಡಾಪಟು ಗಣೇಶ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭ ಮಾತನಾಡಿದ ಸಂಘದ ಪ್ರಮುಖ ಕೆ.ಎಸ್. ಕೃಷ್ಣೇಗೌಡ, ಪುರುಷರ ಸ್ವಸಹಾಯ ಸಂಘ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ದೈನಂದಿನ ಕೆಲಸಗಳ ಒತ್ತಡದಿಂದ ಮಕ್ಕಳ ಶೈಕ್ಷಣಿಕ ಅಭಿವೃದ್ಧಿಯತ್ತ ಗಮನಹರಿಸಲು ಪೋಷಕರಿಗೆ ಸಮಯ ದೊರೆಯುವುದಿಲ್ಲ. ಆದ್ದರಿಂದ ವಿದ್ಯಾರ್ಥಿಗಳ ಬಗ್ಗೆ ಶಿಕ್ಷಕವೃಂದ ವಿಶೇಷ ಕಾಳಜಿ ವಹಿಸಿ ಅವರ ಸರ್ವತೋಮುಖ ಬೆಳವಣಿಗೆಗೆ ಪ್ರಾಮಾಣಿಕ ಪ್ರಯತ್ನ ನಡೆಸಬೇಕಿದೆ. ಶೈಕ್ಷಣಿಕವಾಗಿ ಉತ್ತಮ ಫಲಿತಾಂಶಕ್ಕೆ ಕಾರಣರಾದ ಶಿಕ್ಷಕ ವೃಂದವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಟಿ.ಬಿ. ಜಗದೀಶ್ ಮಾತನಾಡಿ, ಬಸ್ ಸೌಕರ್ಯವಿಲ್ಲದೆ ಆಟೋದಲ್ಲಿ ಸಂಚರಿಸುತ್ತಿದ್ದ ಪ್ರೌಢಶಾಲಾ ವಿದ್ಯಾರ್ಥಿಗಳು ಅಪಘಾತಕ್ಕೆ ಒಳಗಾಗಿ ಚಿಕಿತ್ಸೆಯಲ್ಲಿರುವುದು ತೀವ್ರ ವಿಷಾದಕರ ಸಂಗತಿ ಎಂದ ಅವರು, ಗಾಯಾಳು ವಿದ್ಯಾರ್ಥಿಗಳು ಶೀಘ್ರವಾಗಿ ಚೇತರಿಸಿಕೊಳ್ಳಲು ಅವರು ಹಾರೈಸಿದರು. ಅಪಘಾತದ ಬಳಿಕ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸಾರಿಗೆ ಬಸ್ ವ್ಯವಸ್ಥೆ ಒದಗಿಸಿದ ಕ್ಷೇತ್ರ ಶಾಸಕರ ಕಾಳಜಿಗೆ ಅಭಿನಂದಿಸಿದರು.

ಸAಘದ ಸದಸ್ಯ ಟಿ.ಕೆ. ಪಾಂಡುರAಗ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಸಹಾಯ ಸಂಘದ ಕಾರ್ಯಚಟುವಟಿಕೆ ಬಗ್ಗೆ ಮಾಹಿತಿ ಒದಗಿಸಿದರು.

ಈ ಸಂದರ್ಭ ಗ್ರಾಪಂ ಉಪಾಧ್ಯಕ್ಷೆ ರೂಪಾ ಮಹೇಶ್, ಸಂಘದ ಕಾರ್ಯದರ್ಶಿ ಟಿ.ಹೆಚ್. ಸೋಮಾಚಾರ್, ಸದಸ್ಯರಾದ ಹೆಚ್.ಬಿ. ಚಂದ್ರಪ್ಪ, ಟಿ.ಪಿ. ಮಂಜುನಾಥ್, ಟಿ.ಎಸ್. ರಾಜಶೇಖರ್, ಟಿ.ಬಿ. ಚಿದಾನಂದ, ಡಿ.ಆರ್. ಪ್ರೇಮ್‌ಕುಮಾರ್, ಟಿ.ಜೆ. ಶೇಷಪ್ಪ, ಟಿ.ಸಿ. ತ್ರಿನೇಶ್, ಟಿ.ಪಿ. ಸೋಮಶೇಖರ್, ಪ್ರೌಢಶಾಲಾ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಕಾಮಾಕ್ಷಿ, ಸತ್ಯನಾರಾಯಣ ಸೇರಿದಂತೆ ಶಿಕ್ಷಕ ವೃಂದದವರು ಇದ್ದರು.