ಸಿದ್ದಾಪುರ, ಆ. ೨೪: ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ (ಎಸ್‌ಎನ್‌ಡಿಪಿ) ಯೋಗಂ ಕೊಡಗು ಯೂನಿಯನ್ ವತಿಯಿಂದ ೧೬೯ನೇ ವರ್ಷದ ಶ್ರೀ ನಾರಾಯಣ ಗುರು ಜಯಂತಿ ಆಚರಣೆ ತಾ. ೩೧ ರಂದು ನಡೆಯಲಿದೆ.

ಎಸ್.ಎನ್.ಡಿ.ಪಿ ಕೊಡಗು ಯೂನಿಯನ್ ಅಧ್ಯಕ್ಷ ವಿ.ಕೆ. ಲೋಕೇಶ್ ಹೇಳಿದರು. ಸಿದ್ದಾಪುರದ ಜಿಲ್ಲಾ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಎಸ್.ಎನ್.ಡಿ.ಪಿ ಕೊಡಗು ಯೂನಿಯನ್, ಜಯಂತಿ ಆಚರಣಾ ಸಮಿತಿ ಹಾಗೂ ಎಸ್.ಎನ್.ಡಿ.ಪಿ ಶಾಖೆಗಳ ಸಂಯುಕ್ತ ಆಶ್ರಯದಲ್ಲಿ ಶ್ರೀ ನಾರಾಯಣ ಗುರು ಜಯಂತಿಯು ಸಿದ್ದಾಪುರದ ಸ್ವರ್ಣಮಾಲ ಕಲ್ಯಾಣ ಮಂಟಪದಲ್ಲಿ ಜರುಗಲಿದೆ. ಕಾರ್ಯಕ್ರಮದ ಅಂಗವಾಗಿ ರೂ. ೩೭ ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದ ನೂತನ ಎಸ್.ಎನ್.ಡಿ.ಪಿ ಕಟ್ಟಡದ ಉದ್ಘಾಟನೆ ಹಾಗೂ ಗಣಪತಿ ಹೋಮ ನಡೆಯಲಿದೆ. ಗುರು ಜಯಂತಿ ಕಾರ್ಯಕ್ರಮದ ಧ್ವಜಾರೋಹಣವನ್ನು ಬೆಳೆಗಾರ ಟಿ.ಆರ್. ಸೋಮನಾಥ್ ನೆರವೇರಿಸಲಿದ್ದಾರೆ. ನಂತರ ಶ್ರೀ ನಾರಾಯಣ ಗುರುಗಳ ಮೂರ್ತಿಯ ಅಲಂಕೃತ ಮಂಟಪದ ಮೆರವಣಿಗೆ ಸಿದ್ದಾಪುರದ ಬೆಳೆಗಾರ ಟಿ.ಎಸ್. ಸಜೀವ ಚಾಲನೆ ನೀಡಲಿದ್ದಾರೆ. ಕೇರಳದ ವಾದ್ಯ ಮೇಳಗಳೊಂದಿಗೆ, ಸಾಂಪ್ರದಾಯಿಕ ಉಡುಗೆ ಧರಿಸಿದ ಮಹಿಳೆಯರು ಕಳಸದೊಂದಿಗೆ ಹಾಗೂ ಕರ್ನಾಟಕದ ಸಾಂಪ್ರದಾಯಿಕ ಉತ್ಸವ ಕುಣಿತಗಳ ತಂಡವು ಸಿದ್ದಾಪುರದ ಅಯ್ಯಪ್ಪ ದೇವಸ್ಥಾನದಿಂದ ಮುಖ್ಯ ಬೀದಿಗಳಲ್ಲಿ ಮೆರವಣಿಗೆಯ ಮೂಲಕ ತೆರಳಿ ಸಭಾಂಗಣಕ್ಕೆ ತಲುಪಲಿದೆ. ವೇದಿಕೆ ಕಾರ್ಯಕ್ರಮವನ್ನು ವೀರಾಜಪೇಟೆ ವಿಧಾನ ಸಭಾ ಕ್ಷೇತ್ರದ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಹೆಗಾರ ಎ.ಎಸ್. ಪೊನ್ನಣ್ಣ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಎನ್.ಡಿ.ಪಿ ಕೊಡಗು ಯೂನಿಯನ್ ಅಧ್ಯಕ್ಷ ವಿ.ಕೆ. ಲೋಕೇಶ್ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಡಿಕೇರಿ ವಿಧಾನ ಸಭಾ ಕ್ಷೇತ್ರದ ಶಾಸಕ ಡಾ ಮಂಥರ್ ಗೌಡ, ಎಂಎಲ್‌ಸಿ ಸುಜಾ ಕುಶಾಲಪ್ಪ, ಮಾಜಿ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಎಂ.ಪಿ. ಅಪ್ಪಚ್ಚು ರಂಜನ್, ಹಿಂದು ಮಲಯಾಳಿ ಸಮಾಜದ ಅಧ್ಯಕ್ಷ ವಿ.ಎಂ. ವಿಜಯನ್, ಬಿಲ್ಲವ ಸಮಾಜದ ಜಿಲ್ಲಾಧ್ಯಕ್ಷ ರಘು ಆನಂದ್, ಉದ್ಯಮಿ ಟಿ.ಎಲ್. ಪ್ರವೀಣ್ ಭಾಗವಹಿಸಲಿದ್ದಾರೆ.

ಗುರು ಜಯಂತಿ ಪ್ರಯುಕ್ತ ೨೦೨೨-೨೩ನೇ ಸಾಲಿನ ಪಿಯುಸಿ ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ದೇಶ ಸೇವೆ ಸಲ್ಲಿಸಿದ ಮಾಜಿ ಸೈನಿಕರನ್ನು ಸನ್ಮಾನಿಸಿ ಗೌರವಿಸಲಾಗುವುದು. ಅಲ್ಲದೆ ವಿಶೇಷವಾಗಿ ೫೦ ವರ್ಷಗಳ ದಾಂಪತ್ಯ ಜೀವನವನ್ನು ಪೂರೈಸಿದ ಸಮಾಜದ ದಂಪತಿಗಳನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದರು. ಕಾರ್ಯಕ್ರಮದ ಅಂಗವಾಗಿ ಕೇರಳದ ಕ್ಯಾಲಿಕಟ್ ಸೂರ್ಯ ಕಮ್ಯೂನಿಕೇಷನ್ ತಂಡದ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಹಾಗೂ ಆಗಮಿಸುವ ಸರ್ವರಿಗೂ ಓಣಂ ಹಬ್ಬದ ಸದ್ಯ (ಊಟ)ದ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಯೂನಿಯನ್ ಉಪಾಧ್ಯಕ್ಷ ಆರ್. ರಾಜನ್, ಕಾರ್ಯದರ್ಶಿ ಪ್ರೇಮಾನಂದ, ಆಚರಣಾ ಸಮಿತಿ ಅಧ್ಯಕ್ಷ ಆರ್. ಗಿರೀಶ್, ಕಾರ್ಯದರ್ಶಿ ರೀಶಾ ಸುರೇಂದ್ರ, ಯೂನಿಯನ್ ಕೌನ್ಸಿಲರ್ ಪಾಪಯ್ಯ ಟಿ ಆರ್, ನಾರಾಯಣ ಗುರು ಸಹಕಾರ ಸಂಘದ ನಿರ್ದೇಶಕ ಎಂ.ಎ. ಆನಂದ ಹಾಜರಿದ್ದರು.