ಸೋಮವಾರಪೇಟೆ, ಆ. ೨೩: ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಣಣಾಧಿಕಾರಿಗಳ ಕಚೇರಿ, ಗೌಡಳ್ಳಿ ಬಿಜಿಎಸ್ ಪಬ್ಲಿಕ್ ಸ್ಕೂಲ್ ಆಶ್ರಯದಲ್ಲಿ ಎ ವಲಯ ಮಟ್ಟದ ಪ್ರೌಢಶಾಲಾ ವಿಭಾಗದ ಕ್ರೀಡಾಕೂಟ ಗೌಡಳ್ಳಿ ಶಾಲಾ ಮೈದಾನದಲ್ಲಿ ನಡೆಯಿತು.
ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಗೌಡಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್ ಅಜ್ಜಳ್ಳಿ, ಕ್ರೀಡೆ ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ. ಕ್ರೀಡೆಯಿಂದ ಮಾನಸಿಕ, ದೈಹಿಕ ಆರೋಗ್ಯ ವೃದ್ಧಿಸುತ್ತದೆ. ಆರೋಗ್ಯ ವಂತ ಮಕ್ಕಳು ದೇಶದ ಸಂಪತ್ತಾಗಿದ್ದು, ಕ್ರೀಡೆಗೂ ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಹೇಳಿದರು.
ಗೌಡಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಹೆಚ್.ಆರ್. ಸುರೇಶ್ ಮಾತನಾಡಿ, ಪ್ರಪಂಚದ ಮುಂದುವರಿದ ದೇಶಗಳು ಭಾರತವನ್ನು ಗಮನಿಸುತ್ತಿವೆ ಎಂದರೆ, ದೇಶದ ಕ್ರೀಡಾಪಟುಗಳ ಸಾಧನೆಯೂ ಕಾರಣವಿದೆ. ಆದರೆ ಕೊಡಗಿನಲ್ಲಿ ಕ್ರೀಡಾ ಪ್ರತಿಭೆಗಳಿಗೆ ಸುಸಜ್ಜಿತ ಮೈದಾನಗಳೆ ಇಲ್ಲ. ಪಾಳುಬಿದ್ದ ಮೈದಾನಗಳಲ್ಲಿ ಮಕ್ಕಳು ಆಟವಾಡಬೇಕಾದ ಅನಿವಾರ್ಯತೆ ಇದೆ ಎಂದು ಬೇಸರ ವ್ಯಕ್ತಪಡಿಸಿದರು. ಇನ್ನಾದರೂ ಜನಪ್ರತಿನಿಧಿಗಳು ತಾಲೂಕಿನ ಸರ್ಕಾರಿ ಶಾಲೆಗಳ ಮೈದಾನಗಳ ದುರಸ್ತಿಗೆ ಅನುದಾನ ಕಲ್ಪಿಸಬೇಕು ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ದೈಹಿಕ ಶಿಕ್ಷಣ ಪರಿವೀಕ್ಷಕಿ ಸುಕುಮಾರಿ, ಪ್ರೌಢಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ರತ್ನಕುಮಾರ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ವಿರೂಪಾಕ್ಷ, ಬಿಜಿಎಸ್ ಶಾಲಾ ಆಡಳಿತ ಮಂಡಳಿ ಸದಸ್ಯರಾದ ಜಿ.ಎಂ.ಹೂವಯ್ಯ, ವೀರಭದ್ರಪ್ಪ, ಮುಖ್ಯ ಶಿಕ್ಷಕಿ ಎಚ್.ಎನ್.ರತ್ನಮ್ಮ, ವಿಶ್ವಮಾನವ ಕುವೆಂಪು ಶಾಲೆಯ ಮುಖ್ಯಶಿಕ್ಷಕಿ ಮಿಲ್ಗ್ರೆಡ್ ಗೋನ್ಸಾಲ್ವೆಸ್, ಮಸಗೋಡು ಶಾಲೆಯ ಮುಖ್ಯ ಶಿಕ್ಷಕ ಸಂತೋಷ್ ಕುಮಾರ್ ಇದ್ದರು.
ತೀರ್ಪುಗಾರರಾಗಿ ಗೌಡಳ್ಳಿ ಪ್ರವೀಣ್, ಸುನಿಲ್, ಬಸವರಾಜು, ಇಂದಿರಾ, ವಸಂತಿ, ಆದರ್ಶ್, ಅಮೃತ್, ಮಂಜುನಾಥ್, ಗಣೇಶ್, ಸಂತೋಷ್ ಕಾರ್ಯನಿರ್ವಹಿಸಿದರು. ವಲಯದ ಎಂಟು ಶಾಲೆಗಳು ಭಾಗವಹಿಸಿದ್ದವು. ದೈಹಿಕ ಶಿಕ್ಷಣ ಶಿಕ್ಷಕರನ್ನು ಸನ್ಮಾನಿಸಲಾಯಿತು. ಕ್ರೀಡಾಪಟುಗಳಿಂದ ಪಥಸಂಚಲನ ನಡೆಯಿತು.