ಕೂಡಿಗೆ, ಆ. ೨೨: ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಸಹಕಾರಿಯಾದ ಕ್ರೀಡೆ ನಮ್ಮ ಜೀವನದ ಪ್ರಮುಖ ಭಾಗವಾಗಿದ್ದು, ವಿದ್ಯಾರ್ಥಿ ಗಳು ಕ್ರೀಡಾ ಮನೋಭಾವ ಬೆಳೆಸಿ ಕೊಳ್ಳುವ ಮೂಲಕ ಉತ್ತಮ ನಾಯಕತ್ವ, ವ್ಯಕ್ತಿತ್ವ ಮೈಗೂಡಿಸಿ ಕೊಂಡು ಉತ್ತಮ ಭವಿಷ್ಯ ರೂಪಿಸಿ ಕೊಳ್ಳಬೇಕು ಎಂದು ಸೋಮವಾರ ಪೇಟೆ ತಾಲೂಕು ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್ ಕರೆ ನೀಡಿದರು. ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಕೂಡ್ಲೂರು ಗ್ರಾಮದಲ್ಲಿರುವ ಯೂನಿಕ್ ಅಕಾಡೆಮಿ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಕುಶಾಲನಗರ ಪ್ರೌಢಶಾಲಾ 'ಎ ವಲಯ ಮಟ್ಟದ ಕ್ರೀಡಾಕೂಟಕ್ಕೆ ಕ್ರೀಡಾಜ್ಯೋತಿ ಬೆಳಗಿಸಿ ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ. ಸದಾಶಿವಯ್ಯ ಎಸ್. ಪಲ್ಲೇದ್ ಮಾತನಾಡಿ, ಕ್ರೀಡಾಳುಗಳು ಸೋಲು-ಗೆಲವಿನ ಕಡೆಗೆ ಗಮನ ಕೊಡದೇ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮನೋಭಾವ ಬೆಳೆಸಬೇಕು. ಇದರಿಂದ ಮಕ್ಕಳಲ್ಲಿ ಭವಿಷ್ಯದ ಬದುಕು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ವ್ಯವಸ್ಥಾಪಕ ರವಿ ತೊರೆನೂರು ಮಾತನಾಡಿ, ಮಕ್ಕಳು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದರಿಂದ ಪರಸ್ಪರ ಪ್ರೀತಿ-ವಿಶ್ವಾಸ ಸಹಕಾರ ಮನೋ ಭಾವನೆ ಬೆಳೆಯುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಕೂಡಿಗೆ ಕ್ರೀಡಾ ಶಾಲೆ ಮುಖ್ಯೋಪಾಧ್ಯಾಯ ದೇವ ಕುಮಾರ್, ಕ್ರೀಡಾ ಕೂಟದ ವಲಯ ಕಾರ್ಯದರ್ಶಿ ಬೋಜೇಗೌಡ, ಶಾಲಾ ಮುಖ್ಯೋಪಾಧ್ಯಾಯ ಹರೀಶ್, ದೈಹಿಕ ಶಿಕ್ಷಣ ಶಿಕ್ಷಕ ಲೋಹಿತ್ ಕುಮಾರ್ ಸೇರಿದಂತೆ ವಲಯದ ೧೧, ಶಾಲೆಯ ವಿದ್ಯಾರ್ಥಿಗಳು, ವಿವಿಧ ಶಾಲಾ ದೈಹಿಕ ಶಿಕ್ಷಕರು ಭಾಗವಹಿಸಿದ್ದರು. ಇದಕ್ಕೂ ಮೊದಲು ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್ ಕ್ರೀಡಾ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭ ಮಕ್ಕಳ ಪಥಸಂಚಲನವು ಆಕರ್ಷಣೀಯವಾಗಿತ್ತು. ನಂತರ ಮಕ್ಕಳಿಗೆ, ವಾಲಿ ಬಾಲ್, ಥ್ರೋಬಾಲ್, ಕಬಡ್ಡಿ, ಬ್ಯಾಡ್ ಮಿಂಟನ್ ಇನ್ನಿತರ ಪಂದ್ಯಾಟಗಳು ಕ್ರೀಡಾ ಶಾಲೆಯ ಕ್ರೀಡಾಂಗಣದಲ್ಲಿ ನಡೆದವು.