ಮಡಿಕೇರಿ, ಆ. ೨೩: ಮಾನಸಿಕ ಒತ್ತಡ ಕಡಿಮೆ ಮಾಡಿ ಕ್ರಿಯಾ ಶೀಲತೆಯನ್ನು ಹೆಚ್ಚಿಸುವ ಶಕ್ತಿ ಸಂಗೀತಕ್ಕಿದ್ದು, ಭಾವನಾತ್ಮಕವಾಗಿ ಒಗ್ಗೂಡಿಸುವ ಅದ್ಭುತ ಕಲೆ ಸಂಗೀತವಾಗಿದೆ ಎಂದು ಮಡಿಕೇರಿ ತಾಲೂಕು ಜಾನಪದ ಪರಿಷತ್ ಅಧ್ಯಕ್ಷ ಅನಿಲ್ ಎಚ್.ಟಿ. ಹೇಳಿದ್ದಾರೆ.
ನಗರದ ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಶತಮಾನೋತ್ಸವ ಸಭಾಂಗಣ ದಲ್ಲಿ ಮುಳಿಯ ಜ್ಯುವೆಲ್ಲರ್ಸ್ ಸಂಸ್ಥೆಯ ವತಿಯಿಂದ ಆಯೋಜಿತ ಗಾನರಥ ಸಂಗೀತ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಅನಿಲ್, ಮನಸ್ಸನ್ನು ಉಲ್ಲಾಸಗೊಳಿಸುವ, ಜಗತ್ತನ್ನು ಲವಲವಿಕೆಯಿಂದ ಇರಿಸುವ ಅಪೂರ್ವ ಶಕ್ತಿ ಸಂಗೀತಕ್ಕಿದೆ. ಅನೇಕ ಕಾಯಿಲೆಗಳ ನಿವಾರಣೆಗೂ ಸಂಗೀತ ಮದ್ದಾಗಿದೆ. ಮ್ಯೂಸಿಕ್ ತೆರಪಿ ಜಗತ್ತಿನಾದ್ಯಂತ ಆರೋಗ್ಯ ಕ್ಷೇತ್ರದಲ್ಲಿ ಜನಪ್ರಿಯವಾಗುತ್ತಿದೆ. ಮನರಂಜನೆಯ ಪ್ರಮುಖ ಅಂಶವಾಗಿರುವ ಸಂಗೀತ ಕಲೆ, ನಮ್ಮ ಸಂಸ್ಕೃತಿಯ ಪ್ರತಿಬಿಂಬ ವಾಗಿ ಕೂಡ ಗುರುತಿಸಲ್ಪಟ್ಟಿದೆ ಎಂದು ಸಂಗೀತ ಕ್ಷೇತ್ರದ ಹಿರಿಮೆಯನ್ನು ವರ್ಣಿಸಿದರು.
ಮುಳಿಯ ಸಂಸ್ಥೆಯ ವಹಿವಾಟು ಚಿನ್ನಾಭರಣಗಳ ಮಾರಾಟವಾಗಿದ್ದರೂ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳ ಸಾಂಸ್ಕೃತಿಕ ರಾಯಭಾರಿಗಳಂತೆ ಗಾನರಥ ಕಾರ್ಯಕ್ರಮದ ಮೂಲಕ ದಕ್ಷಿಣ ಕನ್ನಡ, ಕೊಡಗು ಜಿಲ್ಲೆಗಳ ಅನೇಕ ಯುವ ಕಲಾವಿದರನ್ನು ಬೆಳಕಿಗೆ ತರುವ ಪ್ರಯತ್ನವನ್ನು ಮಾಡುತ್ತಿ ರುವುದು ಶ್ಲಾಘನೀಯ ಎಂದು ಹೇಳಿದ ಅನಿಲ್, ವಾಣಿಜ್ಯ ಲೋಕದಾಚೆಗೆ ಸಾಂಸ್ಕೃತಿಕವಾಗಿಯೂ ಜನಮನ ಬೆಸೆಯುವ ಕಾರ್ಯಕ್ರಮ ಗಾನರಥವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು.
ಗಾನರಥದ ಮೂಲಕ ಕೊಡಗಿನ ವಿವಿಧೆಡೆಗಳ ಹಲವಾರು ಹಾಡು ಗಾರರಿಗೆ ಪ್ರೋತ್ಸಾಹ ದೊರಕಿರುವುದು ಹೆಮ್ಮೆ ತರುವ ವಿಚಾರ, ಓರ್ವ ಕೂಲಿ ಕಾರ್ಮಿಕನೂ ಗಾನರಥದ ವೇದಿಕೆಯಲ್ಲಿ ತನ್ನಲ್ಲಿರುವ ಸಂಗೀತದ ಅದ್ಭುತ ಪ್ರತಿಭೆ ಪ್ರದರ್ಶಿಸುತ್ತಾನೆ ಎಂಬುದು ಗಾನರಥದ ಸಫಲತೆಗೆ ಸಾಕ್ಷಿಯಾಗಿದೆ ಎಂದು ಅನಿಲ್ ಎಚ್.ಟಿ. ಬಣ್ಣಿಸಿದರು. ಕಾರ್ಯಕ್ರಮ ಉದ್ಘಾಟಿಸಿದ ಹಿರಿಯ ಸಾಹಿತಿ, ಕಲಾವಿದೆ ಮೊಣ್ಣಂಡ ಶೋಭಾ ಸುಬ್ಬಯ್ಯ, ಅನೇಕ ವರ್ಷಗಳಿಂದ ಮುಳಿಯ ಸಂಸ್ಥೆಯವರು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಕೊಡಗು ಜಿಲ್ಲೆ ಪ್ಲಾಸ್ಟಿಕ್ ಮುಕ್ತವಾಗುವ ನಿಟ್ಟಿನಲ್ಲಿಯೂ ಮುಳಿಯ ಸಂಸ್ಥೆಯವರು ವಿನೂತನವಾದ ಕಾರ್ಯ ಯೋಜನೆ ಹಮ್ಮಿಕೊಳ್ಳಲಿ ಎಂದು ಆಶಿಸಿದರು.
ಮುಳಿಯ ಸಂಸ್ಥೆಯ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಮಾತನಾಡಿ, ಬೆಳ್ತಂಗಡಿಯಿAದ ಪ್ರಾರಂಭವಾದ ಗಾನರಥ ಎಂಬ ಸಾಂಸ್ಕೃತಿಕ ತೇರು ಕೊಡಗಿನಲ್ಲಿಯೂ ಎರಡನೇ ವರ್ಷಕ್ಕೆ ಕಾಲಿರಿಸಿದೆ. ಗಾನರಥದ ಮೂಲಕ ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳ ನೂರಾರು ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸಿದ ಹೆಮ್ಮೆ ನಮ್ಮದಾಗಿದೆ. ಮುಂದಿನ ವರ್ಷಗಳಲ್ಲಿಯೂ ಜಿಲ್ಲೆಗಳ ತಾಲೂಕು ಮಟ್ಟದಲ್ಲಿ ಆಯ್ಕೆ ಪ್ರಕ್ರಿಯೆ ಕೈಗೊಂಡು ಗಾನರಥದ ಮೂಲಕ ಮತ್ತಷ್ಟು ಗಾಯಕರನ್ನು ಬೆಳಕಿಗೆ ತರಲಾಗುತ್ತದೆ ಎಂದು ಹೇಳಿದರು.
ಮುಳಿಯ ಸಂಸ್ಥೆಯ ಗೌರವ ಸಲಹೆಗಾರ ವೇಣುಶರ್ಮ, ಶಾಖಾ ಪ್ರಬಂಧಕರಾದ ತೀತಿಮಾಡ ಸೋಮಣ್ಣ, ಬಿ.ಎಸ್. ಕಿಶೋರ್, ಸಂಜೀವ ಹಾಜರಿದ್ದರು. ಬಾಳೆಯಡ ದಿವ್ಯ ಮಂದಪ್ಪ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭ ಗಾನರಥ ಕಾರ್ಯಕ್ರಮದ ಮೂಲಕ ಸಾಂಸ್ಕೃತಿಕ ಕ್ಷೇತ್ರಕ್ಕೆ ಪ್ರೋತ್ಸಾಹ ನೀಡುತ್ತಿರುವ ಮುಳಿಯ ಸಂಸ್ಥೆಯ ಅಧ್ಯಕ್ಷ ಕೇಶವ ಪ್ರಸಾದ್ ಮುಳಿಯ ಅವರನ್ನು ಮಡಿಕೇರಿ ತಾಲೂಕು ಜಾನಪದ ಪರಿಷತ್ ಪರವಾಗಿ ಅಧ್ಯಕ್ಷ ಅನಿಲ್ ಎಚ್.ಟಿ., ನಿರ್ದೇಶರಾದ ಕೆ. ಜಯಲಕ್ಷಿö್ಮ, ಪ್ರತಿಮಾ ರೈ, ರೀನಾ ಅನಿಲ್ ಸನ್ಮಾನಿಸಿದರು. ಜಿಲ್ಲೆಯ ವಿವಿಧೆಡೆಗಳಿಂದ ಕಲಾವಿದರು ಗಾನರಥದಲ್ಲಿ ಪಾಲ್ಗೊಂಡಿದ್ದರು.