ಮಡಿಕೇರಿ, ಆ. ೨೨ : ಆಟೋಗಳನ್ನು ಅಕ್ರಮ ಚಟುವಟಿಕೆಗಳಿಗೆ ಬಳಸಿಕೊಂಡು ಸಿಕ್ಕಿ ಬಿದ್ದರೆ ಅಂತಹ ಚಾಲಕರ ಪರವಾನಗಿಯನ್ನು ರದ್ದು ಮಾಡಿ ಎಂದು ಆಟೋ ಚಾಲಕರ ಹಾಗೂ ಮಾಲೀಕರ ಸಂಘದ ಪದಾಧಿಕಾರಿಗಳು ಮಡಿಕೇರಿ ಸಂಚಾರಿ ಠಾಣಾಧಿಕಾರಿ ಶ್ರೀಧರ್ ಅವರಿಗೆ ಮನವಿ ಮಾಡಿದರು.
ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ನಡೆದ ಆಟೋ, ಟ್ಯಾಕ್ಸಿ, ಬಸ್ ಹಾಗೂ ಜೀಪು ಚಾಲಕರ ಸಭೆಯಲ್ಲಿ ಮಾತನಾಡಿದ ಆಟೋ ಚಾಲಕರ ಸಂಘದ ಪದಾಧಿಕಾರಿಗಳಾದ ಮೇದಪ್ಪ ಹಾಗೂ ಅರುಣ್ ಮತ್ತಿತರರು ಆಟೋ ಚಾಲಕರುಗಳು ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಸಿಕ್ಕಿ ಬಿದ್ದಾಗ ಅಂತವರನ್ನು ಬಂಧಿಸಲಾಗುತ್ತದೆ; ಬಂಧಿತರು ಬಿಡುಗಡೆ ಆದ ನಂತರ ಪುನಃ ಅಕ್ರಮ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಬಂಧಿತರ ಪರವಾನಗಿಯನ್ನು ಕನಿಷ್ಟ ಒಂದು ವರ್ಷದ ಮಟ್ಟಿಗೆ ರದ್ದುಗೊಳಿಸಲು ಪೊಲೀಸ್ ಇಲಾಖೆ ಕ್ರಮಕೈಗೊಳ್ಳಬೇಕು. ಹಾಗಾದಾಗ ಮಾತ್ರ ಆಟೋ ಚಾಲಕರು ಅಕ್ರಮ ಚಟುವಟಿಕೆಗಳಲ್ಲಿ ತೊಡಗದಂತೆ ತಡೆಯಲು ಸಾಧ್ಯ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಆಸ್ಪತ್ರೆ ಹಾಗೂ ಶಾಲೆಗಳ ವ್ಯಾಪ್ತಿಯಲ್ಲಿ ತುರ್ತು ಸಂದರ್ಭಗಳಿಗೆ ಮಾತ್ರ ಸೀಮಿತವಾಗಿ ಆಟೋಗಳನ್ನು ನಿಲ್ಲಿಸಲು ಅವಕಾಶ ಕಲ್ಪಿಸಬೇಕೆಂದು ಮನವಿ ಮಾಡಿದರು.
ಪ್ರವಾಸಿ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ತೆಕ್ಕಡ ಸಂತು ಕಾರ್ಯಪ್ಪ ಮಾತನಾಡಿ, ಟ್ಯಾಕ್ಸಿಗಳ ನಿಲುಗಡೆ ಪ್ರದೇಶದಲ್ಲಿ ಖಾಸಗಿ ವಾಹನಗಳನ್ನು ಕೂಡ ನಿಲ್ಲಿಸಲಾಗುತ್ತಿದ್ದು, ಇದರಿಂದ ತೊಂದರೆಯಾಗುತ್ತಿದೆ. ಈ ಬಗ್ಗೆ ಗಮನ ಹರಿಸುವಂತೆ ಕೋರಿದರು. ಜೀಪು ಚಾಲಕರ ಸಂಘದ ಅಧ್ಯಕ್ಷ ಉಣ್ಣಿಕೃಷ್ಣ ಮಾತನಾಡಿ, ಶುಲ್ಕ ಸಹಿತ ಪಾರ್ಕಿಂಗ್ ವ್ಯವಸ್ಥೆ ಜಾರಿ ಮಾಡಿದರೆ ವಾಹನಗಳ ದಟ್ಟಣೆಯಿಂದ ಉಂಟಾಗುವ ಸಮಸ್ಯೆಗಳನ್ನು ಬಗೆ ಹರಿಸಬಹುದು ಎಂದು ಸಲಹೆಯಿತ್ತರು. ಅಹವಾಲು ಗಳನ್ನು ಆಲಿಸಿದ ಬಳಿಕ ಮಾತನಾಡಿದ ಸಂಚಾರಿ ಠಾಣಾಧಿಕಾರಿ ಶ್ರೀಧರ್ ಅವರು ಮಡಿಕೇರಿ ನಗರ ವ್ಯಾಪ್ತಿಯಲ್ಲಿ ಸಂಚಾರಿ ವ್ಯವಸ್ಥೆಯನ್ನು ಸುಗಮ ಗೊಳಿಸುವ ನಿಟ್ಟಿನಲ್ಲಿ ಸರ್ವರ ಸಹಕಾರ ಅಗತ್ಯವಾಗಿದ್ದು, ಒಂದು ವಾರದ ಒಳಗಾಗಿ ಸುಗಮ ಸಂಚಾರ ವ್ಯವಸ್ಥೆಗೆ ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಹೇಳಿದರು.
ಸಭೆಯಲ್ಲಿ ಸಹಾಯಕ ಠಾಣಾಧಿಕಾರಿ ನಂದ ಉಪಸ್ಥಿತರಿದ್ದರು.