ಮಡಿಕೇರಿ, ಆ. ೨೨ : ಕೊಡಗು ಜಿಲ್ಲಾ ಕೇಂದ್ರ ಮಡಿಕೇರಿಯ ಜನರಲ್ ತಿಮ್ಮಯ್ಯ ವೃತ್ತ, ನಗರದ ಪ್ರಮುಖ ಸ್ಥಳವಾಗಿದ್ದು ಇಲ್ಲಿ ನಿನ್ನೆ ಅವಘಡದಲ್ಲಿ ಹಾನಿಗೀಡಾದ ತಿಮ್ಮಯ್ಯ ಅವರ ಪ್ರತಿಮೆಯನ್ನು ಅದೇ ಸ್ಥಳದಲ್ಲಿ ವ್ಯವಸ್ಥಿತವಾಗಿ ಮರು ಅಳವಡಿಸಲು ತ್ವರಿತ ಕ್ರಮವಹಿಸಬೇಕೆಂದು ಜಿಲ್ಲಾ ಮಾಜಿ ಸೈನಿಕರ ಸಂಘ ಒತ್ತಾಯಿಸಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಸಂಘದ ಅಧ್ಯಕ್ಷ ನಿವೃತ್ತ ಮೇ. ಜ. ಬಿ.ಎ. ಕಾರ್ಯಪ್ಪ, ಕಾರ್ಯದರ್ಶಿ ಮೇಜರ್ ಓ.ಎಸ್. ಚಿಂಗಪ್ಪ ಅವರುಗಳು ತಿಮ್ಮಯ್ಯ ಅವರು ರಾಷ್ಟçದ ಆಸ್ತಿಯಾಗಿದ್ದರು. ಅಲ್ಲದೆ ಸೇನಾ ಪರಂಪರೆಗೆ ಅವರು ಯಾವತ್ತೂ ಮಾದರಿಯ ವ್ಯಕ್ತಿಯಾಗಿದ್ದು ಇವರ ಪ್ರತಿಮೆ ಯುವ ಪೀಳಿಗೆಗೆ ಆದರ್ಶಪ್ರಾಯವಾಗಿರಲಿದೆ. ಈ ಕಾರಣದಿಂದ ಅವರ ಪ್ರತಿಮೆ ಇರಲೇಬೇಕು. ಭವಿಷ್ಯದಲ್ಲಿ ಮತ್ತೆ ನಿನ್ನೆ ನಡೆದಂತಹ ದುರಂತಗಳು ನಡೆಯದ ರೀತಿ ಯೋಜನೆ ರೂಪಿಸಿ ಪ್ರತಿಮೆಯನ್ನು ಅಳವಡಿಸಬೇಕು. ಜಿಲ್ಲಾಡಳಿತ, ನಗರಸಭೆಗೆ ಸಂಘದಿAದ ಅಗತ್ಯ ಸಹಕಾರ ನೀಡಲಾಗುವುದು ಎಂದು ತಿಳಿಸಿದ್ದಾರೆ.