ಸೋಮವಾರಪೇಟೆ, ಆ. ೨೧: ವಿಶ್ವ ಸ್ತನ್ಯಪಾನ ದಿನಾಚರಣೆ ಅಂಗವಾಗಿ ಇನ್ನರ್ ವೀಲ್ ಕ್ಲಬ್‌ನಿಂದ ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಬಾಣಂತಿಯರಿಗೆ ಹೊದಿಕೆಗಳನ್ನು ವಿತರಿಸಲಾಯಿತು.
ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಅವರು, ಮಗು ಹುಟ್ಟಿದ ತಕ್ಷಣದಿಂದಲೇ ತಾಯಿಯ ಎದೆಹಾಲು ಕುಡಿಸಬೇಕು. ಸ್ತನ್ಯಪಾನವು ಅಮೃತಕ್ಕೆ ಸಮಾನವಾಗಿದ್ದು, ಮಗುವಿನ ಬೆಳವಣಿಗೆಗೆ ತಳಪಾಯವಾಗಿದೆ ಎಂದರು.
ಮಗುವಿನ ಆರೋಗ್ಯವನ್ನು ಕಾಪಾಡುವಲ್ಲಿ ಸ್ತನ್ಯಪಾನ ಮಹತ್ವದ ಪಾತ್ರ ವಹಿಸುತ್ತದೆ. ಬಾಣಂತಿಯರು ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು. ಪೌಷ್ಠಿಕಾಂಶಯುಕ್ತ ಆಹಾರವನ್ನು ಸೇವಿಸಬೇಕು. ಆರೋಗ್ಯ ಇಲಾಖೆಯಿಂದ ನೀಡುವ ನಿರ್ದೇಶನಗಳನ್ನು ತಪ್ಪದೇ ಪಾಲಿಸಬೇಕು ಎಂದು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶಸ್ತç ಚಿಕಿತ್ಸಕ ಡಾ. ಸತೀಶ್‌ಕುಮಾರ್ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಇನ್ನರ್‌ವೀಲ್‌ನ ಅಧ್ಯಕ್ಷೆ ಸಂಧ್ಯಾರಾಣಿ, ಕ್ಲಬ್‌ನಿಂದ ಹತ್ತು ಹಲವು ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಾಗಿದೆ. ಆಸ್ಪತ್ರೆಯಲ್ಲಿರುವ ಬಾಣಂತಿಯರಿಗೆ ಸ್ತನ್ಯಪಾನದ ಮಹತ್ವದ ಬಗ್ಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡಲಾಗಿದೆ. ಬಾಣಂತಿಯರು ಹಾಗೂ ಮಕ್ಕಳಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಹೊದಿಕೆಗಳನ್ನು ನೀಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ತನ್ಮಯಿ ಪ್ರವೀಣ್, ಎಡಿಟರ್ ಸುವಿನ ಕೃಪಾಲ್, ಈಎಸ್‌ಓ ಚಿತ್ರಾ ಬೋಜರಾಜು, ಸದಸ್ಯರಾದ ಲತಾ ನಾಗೇಶ್, ನಂದಿನಿ ಗೋಪಾಲ್, ಅನಿತಾ ಶುಭಾಕರ್, ಹಿರಿಯ ಶುಷ್ರೂಷಕಿ ಅನಿತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.