ಶನಿವಾರಸಂತೆ, ಆ.೨೦: ಸಮೀಪದ ದುಂಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೂಜಗೇರಿ, ಮಾದ್ರೆ, ದುಂಡಳ್ಳಿ, ದೊಡ್ಡಬಿಳಾಹ ಇತರ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ತಡೆಗಟ್ಟಲು ಹಾಗೂ ಕೂಜಗೇರಿ ಗ್ರಾಮದ ೧೭ ಎಕರೆ ಊರುಗುಪ್ಪೆ ಜಾಗದಲ್ಲಿ ಇರುವ ಕಾಡು ಮರಗಳನ್ನು ಕೆಲವು ಗ್ರಾಮಸ್ಥರು ಕಡಿದು ನಾಶ ಮಾಡುತ್ತಿರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಕೂಜಗೇರಿ ಗ್ರಾಮಸ್ಥರು ಶನಿವಾರಸಂತೆ ವಲಯ ಅರಣ್ಯಾಧಿಕಾರಿ ಪ್ರಫುಲ್ ಶೆಟ್ಟಿ ಅವರಿಗೆ ಮನವಿ ಸಲ್ಲಿಸಿದರು.

ಗ್ರಾಮದ ಪ್ರಗತಿಪರ ಕೃಷಿಕ ಕೆ.ಟಿ.ಹರೀಶ್ ಮಾತನಾಡಿ, ‘ಕಾಡಾನೆಗಳ ದಾಂಧಲೆಯಿAದ ರೈತರು ಗದ್ದೆಗಳಲ್ಲಿ ನಾಟಿ ಮಾಡಲು ಹಿಂಜರಿಯುತ್ತಿದ್ದಾರೆ. ಗ್ರಾಮಸ್ಥರು ಭಯಭೀತರಾಗಿದ್ದಾರೆ. ಪ್ರತಿದಿನ ಸಂಜೆಯಾಗುತ್ತಿದ್ದAತೆ ನೆರೆಯ ಯಸಳೂರು ಮೀಸಲು ಅರಣ್ಯದಿಂದ ಆನೆಗಳು ಗ್ರಾಮಕ್ಕೆ ಆಗಮಿಸಿ ತೋಟಗಳಿಗೆ ಲಗ್ಗೆ ಇಟ್ಟು ಕಾಫಿ, ಬಾಳೆ, ಅಡಿಕೆ ಮರಗಳನ್ನು ಎಳೆದು ಹಾಕಿ ನಾಶಪಡಿಸುತ್ತಿವೆ. ಗದ್ದೆಗಳಲ್ಲಿ ನಾಟಿಗಾಗಿ ಬೆಳೆದಿರುವ ಭತ್ತದ ಸಸಿಮಡಿಗಳನ್ನು ತುಳಿದು ಹಾನಿಪಡಿಸಿವೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕೂಜಗೇರಿ ಗ್ರಾಮದ ೧೭ ಎಕರೆ ಊರುಗುಪ್ಪೆ ಜಾಗದಲ್ಲಿ ಇರುವ ಕಾಡು ಮರಗಳನ್ನು ಕೆಲವು ಗ್ರಾಮಸ್ಥರು ಕಡಿದು ನಾಶ ಮಾಡಿದ್ದು ಜಾಗ ಒತ್ತುವರಿ ಮಾಡಿ ಕೃಷಿ ಮಾಡುವ ಯೋಜನೆ ರೂಪಿಸಿದ್ದಾರೆ. ಈ ವ್ಯಾಪ್ತಿಯಲ್ಲೂ ಕಾಡಾನೆಗಳು ಬೀಡುಬಿಟ್ಟಿವೆ, ನೆರೆಯ ಸಕಲೇಶಪುರ ತಾಲೂಕಿನ ಯಸಳೂರು ಮೀಸಲು ಅರಣ್ಯದಿಂದ ಇಲಾಖೆಯವರು ಹಾಗೂ ರೈತರು ಆನೆ ಗೇಟ್ ಮೂಲಕ ದುಂಡಳ್ಳಿ ಪಂಚಾಯಿತಿ ಭಾಗಕ್ಕೆ ಅಟ್ಟುತ್ತಿದ್ದಾರೆ. ಈ ಭಾಗಕ್ಕೆ ಅರಣ್ಯದ ಅಂಚಿನಲ್ಲಿ ಕಂದಕ ನಿರ್ಮಿಸಿದರೆ ಗ್ರಾಮಸ್ಥರು ನಿರ್ಭೀತಿಯಿಂದ ಜೀವನ ಸಾಗಿಸಬಹುದು ಹಾಗೂ ಅರಣ್ಯದ ಕಾಡು ಮರಗಳನ್ನು ಉಳಿಸಬಹುದು ಎಂದು ಮಾಹಿತಿ ನೀಡಿದ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಮನವಿ ಸ್ವೀಕರಿಸಿದ ಅರಣ್ಯಾಧಿಕಾರಿ ಪ್ರಫುಲ್ ಶೆಟ್ಟಿ ಮಾತನಾಡಿ, ಗ್ರಾಮಸ್ಥರ, ರೈತರ ಸಂಕಷ್ಟಕ್ಕೆ ಸ್ಪಂದಿಸುವ ಹಾಗೂ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಈ ಸಂದರ್ಭ ಕೂಜಗೇರಿ ಗ್ರಾಮ ಅಧ್ಯಕ್ಷ ಕೆ.ಬಿ.ದಿವ್ಯೇಶ್, ಪ್ರಮುಖರಾದ ಕೆ.ಕೆ.ಕಿರಣ್, ಕೆ.ಎಂ.ನಾಗರಾಜ್, ಕೆ.ಕೆ.ಜಗದೀಶ್, ಶಿವಾನಂದ್ ಇದ್ದರು.