ಮಡಿಕೇರಿ, ಆ. ೧೭: ಕೊಡಗು ಪ್ರೆಸ್ ಕ್ಲಬ್ ಬೆಳ್ಳಿಮಹೋತ್ಸವ ಅಂಗವಾಗಿ ತಾ. ೧೯ ರಂದು (ನಾಳೆ) ಮಡಿಕೇರಿಯ ಗಾಂಧಿ ಭವನದಲ್ಲಿ ವಿಶ್ವ ಛಾಯಾಗ್ರಹಣ ದಿನಾಚರಣೆ ನಡೆಯಲಿದೆ ಎಂದು ಬೆಳ್ಳಿಮಹೋತ್ಸವ ಸಾಂಸ್ಕೃತಿಕ ಸಮಿತಿ ಸಂಚಾಲಕ ಐಮಂಡ ಗೋಪಾಲ್ ಸೋಮಯ್ಯ ಹಾಗೂ ಕಾರ್ಯಕ್ರಮ ಸಂಚಾಲಕ ಮಂದನೆರವAಡ ಯುಗ ದೇವಯ್ಯ ತಿಳಿಸಿದ್ದಾರೆ.

ಬೆಳಿಗ್ಗೆ ೯.೩೦ ಗಂಟೆಗೆ ಆರಂಭವಾಗಲಿರುವ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕನ್ನಡ ಚಿತ್ರರಂಗದ ಖ್ಯಾತ ಛಾಯಾಗ್ರಾಹಕ, ನಿರ್ದೇಶಕ, ನಿರ್ಮಾಪಕ ಮುಂಗಾರು ಮಳೆ ಕೃಷ್ಣ ಆಗಮಿಸಲಿದ್ದಾರೆ. ಇವರೊಂದಿಗೆ ಹಿರಿಯ ಸುದ್ದಿ ವಾಚಕ ಗೌರೀಶ್ ಅಕ್ಕಿ ಹಾಗೂ ಟಿವಿ೯ ಹೀಗೂ ಉಂಟೆ ಖ್ಯಾತಿಯ ಛಾಯಾ ಗ್ರಾಹಕ ಗುರುಚರಣ್ ಸಿಂಗ್ ಕೂಡ ವಿಶೇಷ ಆಹ್ವಾನಿತರಾಗಿ ಆಗಮಿಸುತ್ತಿದ್ದಾರೆ.

ಛಾಯಾಗ್ರಹಣ ದಿನಾಚರಣೆ ಪ್ರಯುಕ್ತ ಸಾರ್ವಜನಿಕರಿಗೆ ಏರ್ಪಡಿಸಲಾಗಿದ್ದ ರೀಲ್ಸ್ ಸ್ಪರ್ಧೆ, ಪತ್ರಕರ್ತರಿಗೆ ಫೋಟೋಗ್ರಫಿ ಹಾಗೂ ವೀಡಿಯೋಗ್ರಫಿಯ ಪ್ರದರ್ಶನ ಮತ್ತು ತೀರ್ಪುಗಾರಿಕೆ ನಡೆಯಲಿದೆ. ಇದೇ ಸಂದರ್ಭ ಗೌರೀಶ್ ಅಕ್ಕಿ ಅವರಿಂದ ನವ ಮಾಧ್ಯಮಗಳಲ್ಲಿ ಛಾಯಾಗ್ರಾಕರ ಭವಿಷ್ಯ ಮತ್ತು ಸವಾಲುಗಳು ಹಾಗೂ ಬಲ್ಲಚಂಡ ಭಜನ್ ಬೋಪಣ್ಣ ಅವರಿಂದ ಆಧುನಿಕ ಜಗತ್ತಿನಲ್ಲಿ ರೀಲ್ಸ್ ಟ್ರೆಂಡ್-ಸಾಧಕ ಬಾಧಕಗಳು ಎಂಬ ವಿಷಯದ ವಿಚಾರ ಸಂಕಿರಣ ನಡೆಯಲಿದೆ ಎಂದು ಆಯೋಜಕರು ತಿಳಿಸಿದ್ದಾರೆ.

ಮಾಧಪುರಾಣ ಕಿರುಚಿತ್ರ ಪ್ರದರ್ಶನ

ಕಾರ್ಯಕ್ರಮದಲ್ಲಿ ರಿಷಬ್ ಶೆಟ್ಟಿ ಫಿಲಂಸ್ ನಿರ್ಮಾಣದ ಕೊಡಗಿನ ಮಾಲೆರ ಪ್ರಮೋದ್ ಬೋಪಣ್ಣ ಅಭಿನಯದ ಮಾಧಪುರಾಣ ಕಿರು ಸಿನಿಮಾದ ಪ್ರದರ್ಶನ ಕೂಡ ಆಯೋಜಿಸಲಾಗಿದೆ.

ಸಮಾರಂಭದಲ್ಲಿ ಕೊಡಗು ಪ್ರೆಸ್ ಕ್ಲಬ್ ಬೆಳ್ಳಿಮಹೋತ್ಸವ ಆಚರಣಾ ಸಮಿತಿ ಅಧ್ಯಕ್ಷ ಜಿ ರಾಜೇಂದ್ರ, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ, ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ಚೆಟ್ಟಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಉಪಸ್ಥಿತರಿರಲಿದ್ದಾರೆ ಎಂದು ತಿಳಿಸಿದ್ದಾರೆ