ಕೂಡಿಗೆ, ಆ. ೧೮: ಈಗಾಗಲೇ ಹಾರಂಗಿ ಮುಖ್ಯ ನಾಲೆಯ ಮೂಲಕ ರೈತರ ಖಾರೀಫ್ ಬೆಳೆಗಳಿಗೆ ಅನುಕೂಲವಾಗುವಂತೆ ಹಾರಂಗಿ ಅಚ್ಚುಕಟ್ಟಿನ ಪ್ರದೇಶದ ರೈತರು ಜಮೀನಿಗೆ ನೀರು ಹರಿಸುವ ಸಭೆಯ ತೀರ್ಮಾನದಂತೆ ನೀರನ್ನು ಹರಿಸಲಾಗುತ್ತಿದೆ. ಆದರೆ ರೈತರು ಈ ಸಾಲಿನಲ್ಲಿ ಅಲ್ಪಾವಧಿಯ ಬೆಳೆಗಳನ್ನು ಬೆಳೆಯುವಂತೆ ಹಾರಂಗಿ ನೀರಾವರಿ ಇಲಾಖೆಯ ಅಭಿಯಂತರರು ತಿಳಿಸಿದ್ದಾರೆ.
ಈ ಸಾಲಿನಲ್ಲಿ ಮುಂಗಾರು ಮಳೆಯು ವಾಡಿಕೆಯಂತೆ ಸುರಿಯದೆ ಮಳೆಯಿಂದ ಹಾರಂಗಿ ಜಲಾಶಯಕ್ಕೆ ಒಳಹರಿವಿನ ಪ್ರಮಾಣದಲ್ಲಿ ಭಾರೀ ಕುಸಿತ ಕಂಡಿದೆ. ಜುಲೈ ತಿಂಗಳಲ್ಲಿ ವಾರಗಳ ಕಾಲ ಉಂಟಾದ ಮಳೆಯಿಂದ ಭರ್ತಿಯಾದ ಹಾರಂಗಿ ಜಲಾಶಯ ಆಗಸ್ಟ್ ತಿಂಗಳಲ್ಲಿ ಮಳೆಯ ಕೊರತೆ ಕಾರಣ ಒಳಹರಿವಿನಲ್ಲಿ ಇಳಿಮುಖಗೊಂಡಿದೆ. ಇದು ಹಾರಂಗಿ ಅಚ್ಚುಕಟ್ಟು ಪ್ರದೇಶದ (೧,೩೪,೮೯೫ ಎಕರೆ ವಿಸ್ತೀರ್ಣ) ರೈತರಲ್ಲಿ ಆತಂಕ ಉಂಟುಮಾಡಿದ್ದು, ಭತ್ತ ಸೇರಿದಂತೆ ದೀರ್ಘಾವಧಿ ಬೆಳೆಗಳಿಗೆ ನೀರಿನ ಅಭಾವ ತಲೆದೋರಿದೆ. ನಿಗದಿತ ಅಲ್ಪಾವಧಿ ಬೆಳೆಗಳನ್ನು ಹೊರತುಪಡಿಸಿ ಇತರೆ ಪ್ರಮುಖ ಬೆಳೆಗಳನ್ನು ಬೆಳೆದು ನೀರಿನ ಅಭಾವ ಉಂಟಾದಲ್ಲಿ ಬೆಳೆ ನಷ್ಟಕ್ಕೆ ಇಲಾಖೆ ಜವಾಬ್ದಾರಿಯಾಗುವುದಿಲ್ಲ ಎಂಬ ಸೂಚನೆಯನ್ನು ಅಚ್ಚುಕಟ್ಟು ವ್ಯಾಪ್ತಿಯ ರೈತರಿಗೆ ನೀಡಲಾಗಿದೆ ಎಂದು ಅಭಿಯಂತರ ಕೆ.ಕೆ. ರಘುಪತಿ ತಿಳಿಸಿದ್ದಾರೆ.
ಸಲಹಾ ಸಮಿತಿ ಸಭೆಯಲ್ಲಿ ಹಾರಂಗಿ ಯೋಜನೆಯಡಿ ೨೦೨೩ ರ ಖಾರೀಫ್ ಬೆಳೆಗಳಿಗೆ ನಾಲೆಗಳಲ್ಲಿ ನೀರು ಹರಿಸುವ ಸಂಬAಧ ಹಾರಂಗಿ ಜಲಾಶಯ ನೀರಾವರಿ ಸಲಹಾ ಸಮಿತಿ ಸಭೆ ನಡೆಯಿತು. ಮಳೆಯ ಕೊರತೆ ಕಾರಣ ಕೇವಲ ಕೆರೆಕಟ್ಟೆಗಳನ್ನು ತುಂಬಿಸುವುದು, ಕುಡಿವ ನೀರಿಗೆ ಹಾಗೂ ಅಲ್ಪಾವಧಿ ಅರೆ ನೀರಾವರಿ ಬೆಳೆಗಳಿಗೆ ಮಾತ್ರ ನೀರು ಹರಿಸಲು ಸಮಿತಿ ನಿರ್ಣಯ ಕೈಗೊಂಡಿದೆ.
ಕಟ್ಟು ನೀರಿನ ಪದ್ಧತಿಯಾಗಿರುವ ಹಿನ್ನೆಲೆಯಲ್ಲಿ ಹಾರಂಗಿ ಜಲಾಶಯದಲ್ಲಿ ಪ್ರಸ್ತುತ ನೀರಿನ ಸಂಗ್ರಹಣೆ, ಈ ಸಾಲಿನ ಆಗಸ್ಟ್ ತಿಂಗಳಿAದ ನವೆಂಬರ್ ತಿಂಗಳವರೆಗೆ ಬರಬಹುದಾದ ನೀರಿನ ಒಳಹರಿವು (ಕಳೆದ ೨೦ ವರ್ಷಗಳ ಸರಾಸರಿ ಒಳಹರಿವಿನ ಆಧಾರದಲ್ಲಿ) ಆಧರಿಸಿ ಆಗಸ್ಟ್ ೧೩ ರಿಂದ ಹಾರಂಗಿ ಎಡ ಮತ್ತು ಬಲದಂಡೆ ನಾಲೆಗಳ ಮೂಲಕ ತಿಂಗಳಲ್ಲಿ ೧೫ ದಿನ ಮಾತ್ರ ಕಟ್ಟು ನೀರಿನ ಪದ್ದತಿ (ಆನ್ ಅಂಡ್ ಆಫ್) ಅಡಿಯಲ್ಲಿ ನೀರು ಹರಿಸಲು ಕ್ರಮಕೈಗೊಳ್ಳಲಾಗಿದೆ. ೧೫ ದಿನಗಳ ಕಾಲ ನೀರು ಹರಿಸಿದರೆ ಮುಂದಿನ ೧೫ ದಿನಗಳ ಕಾಲ ನೀರನ್ನು ಬಂದ್ ಮಾಡುವ ಮೂಲಕ ಇರುವ ನೀರಿನ ಪ್ರಮಾಣದ ಮಿತ ಬಳಕೆ ಮಾಡಿಕೊಳ್ಳಲು ಕೋರಲಾಗಿದೆ.
ಈ ಸಾಲಿನಲ್ಲಿ ಅಣೆಕಟ್ಟೆಯಲ್ಲಿ ನೀರಿನ ಪ್ರಮಾಣ ಕಡಿಮೆ ಇರುವುದರಿಂದ ನೀರಿನ ಒಳ ಹರಿವಿನ ಸಾಮರ್ಥ್ಯವನ್ನು ನೋಡಿಕೊಂಡು ಅದರ ಅನುಗುಣವಾಗಿ ನಾಲೆಗಳಿಗೆ ನೀರನ್ನು ಹರಿಸಲಾಗುವುದು, ಅಚ್ಚುಕಟ್ಟಿನ ರೈತರು ನೀರನ್ನು ಮಿತವಾಗಿ ಬಳಸುವಿಕೆಯ ಮೂಲಕ ಅದಕ್ಕೆ ಅನುಕೂಲಕರವಾದ ಬೆಳೆಗಳನ್ನು ಬೆಳೆಯುವಂತೆ ಅಭಿಯಂತರು ಮನವಿಯಲ್ಲಿ ತಿಳಿಸಿದ್ದಾರೆ.
ಕೊಡಗಿನ ಗಡಿ ಪ್ರದೇಶದವರೆಗೆ ನೀರು ಹರಿಸಲು ರೈತರ ಒತ್ತಾಯ
ಕೊಡಗಿನ ಹಾರಂಗಿ ಅಚ್ಚುಕಟ್ಟಿನ ಪ್ರದೇಶವು ಗಡಿ ಭಾಗವಾಗಿರುವ ಶಿರಂಗಾಲದವರೆಗೆ ಇರುವುದರಿಂದಾಗಿ ಮತ್ತು ಗಡಿ ಭಾಗದಲ್ಲಿ ತಡೆಗೋಡೆಯು ಇರುವ ಹಿನ್ನೆಲೆಯಲ್ಲಿ ಮುಖ್ಯ ನಾಲೆ ಮತ್ತು ಎಡ ದಂಡದ ನಾಲೆಯಲ್ಲಿ ಶಿರಂಗಾಲದವರೆಗೆ ೧೫ ದಿನಗಳ ನಂತರ ಸಣ್ಣ ಪ್ರಮಾಣದ ನೀರನ್ನು ಹರಿಸುವಂತೆ ನೀರಾವರಿ ಇಲಾಖೆಯ ಅಧಿಕಾರಗಳನ್ನು ಈ ಭಾಗದ ರೈತರು ಒತ್ತಾಯ ಮಾಡಿರುತ್ತಾರೆ. ಅಲ್ಲದೇ ಹಾರಂಗಿಯ ಅಣೆಕಟ್ಟೆಯ ಮುಂಭಾಗದ ನಾಲೆಯಿಂದ ೧೦ ಕಿಲೋಮೀಟರ್ ದೂರದವರಗಿನ ಜಮೀನುಗಳು ಶೀತಗೊಂಡ ಜಮೀನು ಆಗಿರುವುದರಿಂದಾಗಿ ಬೇರೆ ಬೆಳೆಗಳನ್ನು ಬೆಳೆಯಲು ಸಾಧ್ಯವಿಲ್ಲ. ಆದ್ದರಿಂದಾಗಿ ಕೊಡಗಿನ ಗಡಿ ಪ್ರದೇಶದವರೆಗೆ ಭತ್ತದ ನಾಟಿ ಮಾಡಲು ನೀರಿನ ಸೌಲಭ್ಯವನ್ನು ಒದಗಿಸುವಂತೆ ಈ ವ್ಯಾಪ್ತಿಯ ರೈತರು ಆಗ್ರಹಿಸಿದ್ದಾರೆ.
- ಕೆ.ಕೆ. ನಾಗರಾಜಶೆಟ್ಟಿ