ಕುಶಾಲನಗರ, ಆ.೧೮: ಮಣಿಪುರದ ಜನಾಂಗೀಯ ಗಲಭೆಗಳು ತಾರಕಕ್ಕೆ ಏರಲು ಈ ಹಿಂದೆ ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರದ ದಿವ್ಯ ನಿರ್ಲಕ್ಷವೇ ಪ್ರಮುಖ ಕಾರಣ ಎಂದು ಯುವ ಬ್ರಿಗೇಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕುಶಾಲನಗರದ ಗಾಯತ್ರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಪ್ರಜ್ಞ ಕಾವೇರಿ ಆಶ್ರಯದಲ್ಲಿ ನಡೆದ ಉರಿಯುತ್ತಿದೆ ಮಣಿಪುರ ಏನಿದಕ್ಕೆ ಪರಿಹಾರ' ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು..

ಜಾತಿ ಹೆಸರನ್ನು ಬಳಸಿ ದೇಶ ವಿಭಜನೆ ಆಗುವ ರೀತಿಯ ಜಾತಿವಾರು ವರದಿ ಹೊರ ಬಿದ್ದ ಬೆನ್ನಲ್ಲೇ ಮಣಿಪುರದಲ್ಲಿ ಆತಂಕಕಾರಿ ಬೆಳವಣಿಗೆ ಕಂಡು ಬಂದಿದೆ.

ಪ್ರಯೋಗ ಶಾಲೆಯನ್ನಾಗಿ ಮಣಿಪುರವನ್ನು ಬಳಸುವ ಪ್ರಯತ್ನ ಕೆಲವರಿಂದ ನಡೆದಿದ್ದು ಇದೇ ರೀತಿ ಮುಂದುವರಿದಲ್ಲಿ ದೇಶದ ವಿವಿಧೆಡೆ ಅಂತಹ ಘಟನೆಗಳು ಮರುಕಳಿಸುವ ಆತಂಕ ವ್ಯಕ್ತಪಡಿಸಿದರು.

ಮಣಿಪುರದ ಮೈತೇಯಿ - ಕುಕೀ ಸಮುದಾಯಗಳ ನಡುವೆ ನಾಗರಿಕ ಹೋರಾಟ ಸಂಘರ್ಷಕ್ಕೆ ನಾಂದಿಯಾಗಿದ್ದು ಹಿಂದಿನ ರಾಜಕೀಯ ಪಕ್ಷಗಳು ಘಟನೆಯನ್ನು ಓಟ್ ಬ್ಯಾಂಕ್ ಆಗಿ ಪರಿವರ್ತನೆ ಮಾಡುವಲ್ಲಿ ಯಶಸ್ವಿಯಾಗಿವೆ ಎಂದು ಆರೋಪಿಸಿದ ಸೂಲಿಬೆಲೆ ಅವರು ಕುಕ್ಕೀ ಸಮುದಾಯಕ್ಕೆ ಅಕ್ರಮ ವೋಟರ್ ಮತ್ತು ಆಧಾರ್ ಕಾರ್ಡ್ಗಳನ್ನು ನೀಡುವ ಪ್ರಕರಣಗಳು ನಿರಂತರವಾಗಿ ಅಲ್ಲಿ ನಡೆದಿದೆ ಎಂದರು. ಇದರಿಂದ ಗಲಭೆ ಕೋರರಾದ ಕುಕಿಗಳ ಸಮುದಾಯದ ಪ್ರಮಾಣದ ಸಂಖ್ಯೆ ಏರಿಕೆಯಾಗಲು ಕಾರಣವಾಯಿತು. ಇದು ಅಲ್ಲಿನ ಎರಡು ಸಮುದಾಯಗಳ ನಡುವೆ ಸಂಘರ್ಷಕ್ಕೆ ಪ್ರಮುಖ ಕಾರಣವಾಗಿದೆ ಎಂದರು.

ಅರಣ್ಯ ನಾಶ ಅಕ್ರಮ ಕಟ್ಟಡ ನಿರ್ಮಾಣ, ಮಾದಕ ವಸ್ತುಗಳ ಸಾಗಾಟ ಮಾರಾಟ ಅಧಿಕವಾದ ಬೆನ್ನಲ್ಲೆ ಕುಕಿ ಸಮುದಾಯದ ಜನರು ಶ್ರೀಮಂತಿಕೆಯನ್ನು ಸಾಧಿಸಿ ಪ್ರಸಕ್ತ ಅಲ್ಲಿನ ಬಹುಸಂಖ್ಯಾತ ಸಮುದಾಯವಾಗಿರುವ ಮೈತೆಯಿ ಜನಾಂಗದ ಮೇಲೆ ದೌರ್ಜನ್ಯ ನಡೆಸುತ್ತಿದ್ದಾರೆ ಎಂದು ಹೇಳಿದರು.

ಕೇಂದ್ರ ಸರ್ಕಾರ ಮಣಿಪುರದಲ್ಲಿ ಮತ್ತೆ ಗಲಭೆ ಸಂಭವಿಸದAತೆ ಕಾರ್ಯಯೋಜನೆ ರೂಪಿಸುತ್ತಿದೆ. ಆದರೆ, ಮಣಿಪುರದ ಗಡಿಭಾಗದ ದೇಶಗಳ ಜೊತೆ ಕೇಂದ್ರ ಸರ್ಕಾರ ಚರ್ಚಿಸಿ ನುಸುಳುಕೋರರು ಗಡಿಭಾಗದಿಂದ ನುಗ್ಗಿ ಗಲಭೆ ನಡೆಸದಂತೆ ಎಚ್ಚರಿಕೆಯ ಕ್ರಮ ಕೈಗೊಳ್ಳಬೇಕಾಗಿದೆ ಎಂದರು.

ಮಣಿಪುರದ ಪ್ರಮುಖರಾದ ಮೋತಿಮಾಲ ಗ್ಯಾಂಗಮ್ ಅವರು ಮಾತನಾಡಿ, ಮಣಿಪುರದ ಪ್ರಸಕ್ತ ಪರಿಸ್ಥಿತಿಯನ್ನು ಅವಲೋಕಿಸಿ ಮಾತನಾಡಿದರು. ಮಹಿಳೆಯರ ಮೇಲೆ ಅತ್ಯಾಚಾರ, ಮೃಗೀಯ ವರ್ತನೆ ನಿರಂತರವಾಗಿ ನಡೆಯುತ್ತಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.

ಸಭೆಯಲ್ಲಿ ಪಾಲ್ಗೊಂಡಿದ್ದ ಇನ್ನೋರ್ವ ಅತಿಥಿ ಡಾ. ಉಮ್ಮಿ ಮಾಯಿಬಾನೆ ಮಣಿಪುರದ ಸ್ಥಿತಿಗತಿಗಳ ಬಗ್ಗೆ ವಿವರ ನೀಡಿ ಪ್ರತಿ ಮನೆಯಲ್ಲಿ ಮಹಿಳೆಯರು ರಕ್ಷಣೆಗಾಗಿ ನಿತ್ಯ ಪರಿತಪಿಸುವಂತಾಗಿದೆ. ಶಾಂತಿ ನೆಮ್ಮದಿಗಾಗಿ ನಾಗರಿಕರು ಹಾತೊರೆಯುವಂತಾಗಿದೆ ಎಂದರು. ಮೈತೇಯಿ ಸಮುದಾಯಕ್ಕೆ ಸೇರಿದ ತಾವುಗಳು ಶ್ರೀ ಕೃಷ್ಣನ ಭಕ್ತರಾಗಿದ್ದು, ಹಲವು ಹಬ್ಬ ಹರಿ ದಿನಗಳನ್ನು ಆಚರಿಸುತ್ತಿದ್ದೇವೆ. ಮೈತೇಯಿ ಜನಾಂಗ ಮಣಿಪುರದ ಪರವಾಗಿ ಕೆಲಸ ಮಾಡುತ್ತಿದೆ. ಮತಾಂತರ ನಿರಂತರವಾಗಿ ನಡೆಯುತ್ತಿದ್ದು ಕುಕೀ ಜನಾಂಗ ಜನಾಂಗೀಯ ಕಲಹವನ್ನು ಸುದೀರ್ಘವಾಗಿ ಮಾಡುತ್ತಾ ಬಂದಿದೆ ಎಂದರು.

ನೆರೆಯ ಮಯನ್ಮಾರ್ ನಿಂದ ನುಸುಳಿ ಬರುವ ನಾಗ ಕುಕೀ ನಾಗರಿಕರು ತಮ್ಮ ಮೇಲೆ ನಿರಂತರ ದೌರ್ಜನ್ಯ ಮಾಡುತ್ತಿರುವುದು ಇತ್ತೀಚಿನ ಬೆಳವಣಿಗೆಯಾಗಿದೆ ಎಂದರು. ಪ್ರಜ್ಞ ಕಾವೇರಿ ಅಧ್ಯಕ್ಷರಾದ ಮಡಿಕೇರಿಯ ಜಿ.ಟಿ. ರಾಘವೇಂದ್ರ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.