ಮಡಿಕೇರಿ, ಆ. ೧೭: ಬಿರುನಾಣಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ನೆಲ್ಲೀರ ಚಲನ್ ಅವರು ಚುನಾಯಿತರಾಗಿದ್ದಾರೆ. ರಾಜಕೀಯವಾಗಿ ತಿರುವು ಪಡೆದು ನಡೆದ ಕೌತುಕದ ಚುನಾವಣೆಯಲ್ಲಿ ಅಧ್ಯಕ್ಷರಾಗಿ ವೀರಾಜಪೇಟೆ ಮಂಡಲ ಬಿಜೆಪಿ ಅಧ್ಯಕ್ಷರಾಗಿರುವ ಚಲನ್ ಆಯ್ಕೆಯಾಗಿದ್ದಾರೆ.
೧೩ ನಿರ್ದೇಶಕ ಸ್ಥಾನವನ್ನು ಸಂಘ ಹೊಂದಿದೆ. ಅವಿರೋಧ ಆಯ್ಕೆಯ ನಿರೀಕ್ಷೆ ಇತ್ತಾದರೂ ಕೊನೆಗಳಿಗೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಬಿಜೆಪಿ ಬೆಂಬಲಿತರಾಗಿರುವ ಚಲನ್ ಹಾಗೂ ಕಾಂಗ್ರೆಸ್ ಬೆಂಬಲಿತರಾಗಿ ಕುಪ್ಪಣಮಾಡ ನಂಜಮ್ಮ ಅವರು ಸ್ಪರ್ಧಿಸಿದ್ದರಿಂದ ಮತದಾನ ನಡೆಯಬೇಕಾಗಿತು.
ಓರ್ವ ನಿರ್ದೇಶಕರಾದ ಸಂಪತ್ ಅವರು ಗೈರು ಹಾಜರಾಗಿದ್ದರು. ಚುನಾವಣಾಧಿಕಾರಿಯಾಗಿದ್ದ ವೀರಾಜಪೇಟೆ ತಾಲೂಕು ಸಹಕಾರ ಅಭಿವೃದ್ಧಿ ಅಧಿಕಾರಿ ಎಂ.ಎಸ್. ಮೋಹನ್ ಅವರ ಉಸ್ತುವಾರಿಯಲ್ಲಿ ನಡೆದ ಮತದಾನ ಪ್ರಕ್ರಿಯೆಯಲ್ಲಿ ಚಲನ್ ೬ ಹಾಗೂ ನಂಜಮ್ಮ ೫ ಮತಗಳಿಸಿದರು. ೧ ಮತ ತಿರಸ್ಕೃತಗೊಂಡಿದೆ. ಉಪಾಧ್ಯಕ್ಷ ಸ್ಥಾನಕ್ಕೆ ಗುಡ್ಡಮಾಡ ಸುಬ್ರಮಣಿ ಅವಿರೋಧವಾಗಿ ಆಯ್ಕೆಗೊಂಡರು. ಜಿದ್ದಾಜಿದ್ದಿನ ಚುನಾವಣೆ ಎದುರಾಗಿದ್ದ ಹಿನ್ನೆಲೆಯಲ್ಲಿ ಡಿಎಆರ್ ಪೊಲೀಸ್ ತುಕಡಿಯೊಂದಿಗೆ ಕುಟ್ಟ ಹಾಗೂ ಶ್ರೀಮಂಗಲ ಠಾಣಾಧಿಕಾರಿಗಳು ಸೂಕ್ತ ಪೊಲೀಸ್ ಬಂದೋಬಸ್ತ್ ಕಲ್ಪಿಸಿದ್ದರು.