ಪೊನ್ನಂಪೇಟೆ, ಆ. ೧೮ : ಕೊಡವ ಮುಸ್ಲಿಂ ಅಸೋಸಿಯೇಷನ್ (ಕೆ.ಎಂ.ಎ.) ವತಿಯಿಂದ ಜನಾಂಗದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗಾಗಿ ಪ್ರತಿ ವರ್ಷ ನೀಡಲಾಗುವ ಕೆಎಂಎ ಪ್ರತಿಭಾ ಪುರಸ್ಕಾರದ ನೂತನ ಲಾಂಛನವನ್ನು ಅನಾವರಣಗೊಳಿಸಲಾಯಿತು. ವೀರಾಜಪೇಟೆಯಲ್ಲಿರುವ ಕೆ.ಎಂ.ಎ. ಪ್ರಧಾನ ಕಚೇರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ದುದ್ದಿಯಂಡ ಹೆಚ್. ಸೂಫಿ ಹಾಜಿ ಅವರು ಕೆಎಂಎ ಪ್ರತಿಭಾ ಪುರಸ್ಕಾರದ ಲಾಂಛನವನ್ನು ವಿದ್ಯುಕ್ತವಾಗಿ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಸೂಫಿ ಹಾಜಿ, ಯಾವುದೇ ಕಾರ್ಯಕ್ರಮಗಳ ಪ್ರಮುಖ ಆಶಯಗಳನ್ನು ಜನರು ಬಹುಬೇಗ ಗುರುತಿಸಲು ಅದರ ಪ್ರತ್ಯೇಕ ಲಾಂಛನಗಳು ಸಹಕಾರಿಯಾಗುತ್ತದೆ. ಕೆಲವೊಮ್ಮೆ ಕಾರ್ಯಕ್ರಮಗಳ ಹೆಸರು ಮತ್ತು ಶೀರ್ಷಿಕೆಗಳಿಗಿಂತ ಲಾಂಛನಗಳು ಜನರನ್ನು ಬಹುಬೇಗ ಆಕರ್ಷಿಸುತ್ತವೆ. ಲಾಂಛನಗಳು ಕಾರ್ಯಕ್ರಮಗಳ ಉದ್ದೇಶವನ್ನು ಸಹ ಪ್ರತಿ ಬಿಂಬಿಸುತ್ತವೆ. ಈ ಹಿನ್ನೆಲೆಯಲ್ಲಿ ಕೆಎಂಎ ವತಿಯಿಂದ ವಾರ್ಷಿಕವಾಗಿ ನಡೆಯುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಪ್ರತ್ಯೇಕವಾಗಿ ಲಾಂಛನವನ್ನು ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದರು. ಕೆಎಂಎ ಪ್ರತಿಭಾ ಪುರಸ್ಕಾರದ ನೂತನ ಲಾಂಛನವನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರಫೀಕ್ ತೂಚಮಕೇರಿ ಅವರ ಪರಿಕಲ್ಪನೆಯಲ್ಲಿ ವಿನ್ಯಾಸಗೊಳಿಸಲಾಗಿದೆ ಎಂದು ಸೂಫಿ ಹಾಜಿ ಇದೇ ವೇಳೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಹಿರಿಯ ಉಪಾಧ್ಯಕ್ಷ ಆಲೀರ ಅಹಮದ್ ಹಾಜಿ, ಪದಾಧಿಕಾರಿಗಳಾದ ಪೇನತಂಡ ಅಬ್ದುಲ್ ರಹಿಮಾನ್, ಕುವೇಂಡ ವೈ. ಆಲಿ, ಚಿಮ್ಮಿಚ್ಚಿರ ಕೆ. ಇಬ್ರಾಹಿಂ, ಕರ್ತೊರೆರ ಕೆ. ಮುಸ್ತಫಾ, ಕುಪ್ಪೋಡಂಡ ಅಬ್ದುಲ್ ರಶೀದ್, ಪುದಿಯಾಣೆರ ಎ. ಹನೀಫ್, ಮೀತಲತಂಡ ಎಂ. ಇಸ್ಮಾಯಿಲ್, ಪುಡಿಯಂಡ ಹನೀಫ್, ಪೊಯಕೆರ ಎಸ್. ಮೊಹಮ್ಮದ್ ರಫೀಕ್, ಮಂಡೇಡ ಎ. ಮೊಯ್ದು, ಈತಲತಂಡ ರಫೀಕ್ ತೂಚಮಕೇರಿ ಮೊದಲಾದವರು ಉಪಸ್ಥಿತರಿದ್ದರು.