ಕೂಡಿಗೆ, ಆ. ೧೬: ಜಿಲ್ಲೆಯ ಸಣ್ಣ ಪ್ರಮಾಣದ ಎರಡನೇ ಅಣೆಕಟ್ಟೆಯಾದ ಚಿಕ್ಲಿಹೊಳೆ ಅಣೆಕಟ್ಟೆಯ ಮುಖ್ಯ ನಾಲೆಯಲ್ಲಿ ಈಗಾಗಲೇ ಚಿಕ್ಲಿಹೊಳೆ ಜಲಾಶಯದಿಂದ ನೀರನ್ನು ನಾಲೆಯ ಮೂಲಕ ಹರಿಸುತ್ತಿರುವುದರಿಂದ ಅಚ್ಚುಕಟ್ಟು ಪ್ರದೇಶದ ರೈತರು ಭೂಮಿ ಉಳುಮೆಯ ಸಿದ್ಧತೆಯನ್ನು ಮಾಡಿಕೊಂಡಿದ್ದ ಗದ್ದೆಗಳಲ್ಲಿ ಈಗಾಗಲೇ ಭತ್ತದ ನಾಟಿ ಕಾರ್ಯವನ್ನು ಆರಂಭಿಸಿದ್ದಾರೆ.
ಅಚ್ಚುಕಟ್ಟು ಪ್ರದೇಶಗಳಾದ ನಂಜರಾಯಪಟ್ಟಣ, ಹೊಸ ಪಟ್ಟಣ, ರಂಗಸಮುದ್ರ ವ್ಯಾಪ್ತಿಗೆ ಸೇರಿದ ಅನೇಕ ಉಪ ಗ್ರಾಮಗಳಲ್ಲಿ ಈಗಾಗಲೇ ಕೃಷಿ ಇಲಾಖೆಯ ವತಿಯಿಂದ ಪರಿಷ್ಕೃತಗೊಂಡದ ಬಿತ್ತನೆ ಬೀಜದ ಭತ್ತದ ಸಸಿಮಡಿಗಳನ್ನು ಸಿದ್ಧತೆ ಮಾಡಿಕೊಂಡಿರುವ ಅಚ್ಚುಕಟ್ಟು ಪ್ರದೇಶದ ರೈತರು ಈಗಾಗಲೇ ಸಾವಯವ ಗೊಬ್ಬರವನ್ನು ಬಳಕೆ ಮಾಡಿಕೊಂಡು ಭತ್ತದ ನಾಟಿ ಮಾಡಲು ಆರಂಭ ಮಾಡಿರುತ್ತಾರೆ.
ಚಿಕ್ಲಿಹೊಳೆ ಜಲಾಶಯದ ನೀರಿನ ಸಾಮರ್ಥ್ಯ ೦.೧೮ ಟಿಎಂಸಿ ಇದ್ದು, ನಾಲೆಯ ಅಚ್ಚುಕಟ್ಟು ಪ್ರದೇಶ ೨೧೩೭ ಎಕರೆ, ೧೦೦೦ ಎಕರೆಗಳಷ್ಟು ಪ್ರದೇಶದಲ್ಲಿ ಜಲಾಶಯದ ನಾಲೆಯ ನೀರಿನ ಬಳಕೆ ಮಾಡಿಕೊಂಡು ಭತ್ತದ ನಾಟಿಯನ್ನು ಮಾಡಲು ಈಗಾಗಲೇ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.
ಹಾರಂಗಿ ನೀರಾವರಿ ಇಲಾಖೆಯ ಉಸ್ತುವಾರಿಯಲ್ಲಿ ಚಿಕ್ಲಿಹೊಳೆ ಜಲಾಶಯ ಉಸ್ತುವಾರಿಯು ನಡೆಯುತ್ತಿವೆ. ಈ ಸಾಲಿನಲ್ಲಿ ಮಳೆಯ ಕೊರತೆ ನಡುವೆಯು ಕಳೆದ ತಿಂಗಳಲ್ಲಿ ಬಿದ್ದ ಮಳೆಯ ನೀರನ್ನು ಸಂಗ್ರಹಿಸಿ ಪ್ರಮುಖವಾಗಿ ರೈತರ ಬೇಸಾಯಕ್ಕೆ ಅನುಕೂಲ ಮಾಡಿಕೊಡಲಾಗುತ್ತಿದೆ, ಜಲಾಶಯದ ನೀರಿನ ಸಾಮರ್ಥ್ಯದ ಅನುಗುಣವಾಗಿ ನಾಲೆಯ ಮೂಲಕ ನೀರನ್ನು ಹರಿಸಲಾಗುತ್ತಿದೆ ಎಂದು ಸಹಾಯಕ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ ತಿಳಿಸಿದ್ದಾರೆ.
ಈ ವ್ಯಾಪ್ತಿಯ ರೈತರು ಆಧುನಿಕ ತಂತ್ರಜ್ಞಾನದ ಅಡಿಯಲ್ಲಿ ಎತ್ತುಗಳಲ್ಲಿ ಉಳುಮೆ ಮಾಡುವುದನ್ನು ಬಿಟ್ಟು, ಟ್ರಾಕ್ಟರ್ ಟಿಲ್ಲರ್ ಮೂಲಕ ಉಳುಮೆ ಮಾಡಿದ್ದಾರೆ. ಕೊನೆಯದಾಗಿ ನಾಟಿ ಮಾಡುವ ಗದ್ದೆಗಳನ್ನು ಸಮತಟ್ಟಾಗಿರಿಸಲು ಎತ್ತುಗಳಿಂದ ಸಮತಟ್ಟು ಹಲಗೆಯ ಮೂಲಕ ಮರಹೊಡೆಯಲಾಗುತ್ತಿದೆ.
ಭತ್ತದ ನಾಟಿ ಮಾಡಲು ಈ ತಿಂಗಳು ಉತ್ತಮವಾಗಿದ್ದು, ಮುಂದಿನ ದಿನಗಳಲ್ಲಿ ಹೈಬ್ರೀಡ್ ಭತ್ತದ ತಳಿಯ ಬೆಳೆಯು ಕೊಯ್ಲಿಗೆ ಬರುವ ಸಂದರ್ಭದಲ್ಲಿ ಉತ್ತಮವಾದ ಕಾಳು ಕಟ್ಟಲು ಹವಾಮಾನವು ಅನುಕೂಲವಾಗುವುದು, ಚಳಿಗಾಲ ಆರಂಭವಾಗುವ ಮುನ್ನ ಭತ್ತದ ಬೆಳೆಯ ತೆನೆ ಕಟ್ಟಲು ಆರಂಭವಾದಲ್ಲಿ ಭತ್ತವು ಜೊಳ್ಳು ಬೀಳಲಿದೆ ಎಂದು ಈ ವ್ಯಾಪ್ತಿಯ ಅನುಭವಿ ರೈತರು ತಿಳಿಸಿದ್ದಾರೆ.
ಕೆ. ಕೆ. ನಾಗರಾಜಶೆಟ್ಟಿ