ಕೂಡಿಗೆ, ಆ. ೧೬: ಕುಶಾಲನಗರ ತಾಲೂಕು ವ್ಯಾಪ್ತಿಯು ಅರೆ ಮಲೆನಾಡು ಪ್ರದೇಶವಾಗಿದ್ದು, ಈ ವ್ಯಾಪ್ತಿಯಲ್ಲಿ ನೂರಾರು ಎಕರೆಗಳಷ್ಟು ಪ್ರದೇಶದಲ್ಲಿ ಬೇಸಾಯ ಮಾಡುವ ರೈತರು ಮಳೆಯನ್ನೇ ಅವಲಂಬಿಸಿರುತ್ತಾರೆ. ಅದರೆ ಈ ಸಾಲಿನಲ್ಲಿ ಮಳೆಯು ನಿರೀಕ್ಷಿತ ಪ್ರಮಾಣದಲ್ಲಿ ಬೀಳದೆ ಇರುವುದರಿಂದಾಗಿ ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ಬೆಳೆದ ಬೆಳೆಯು ಒಣಗುತ್ತಿರುವುದು ಕಂಡುಬರುತ್ತಿದೆ.
ತಾಲೂಕು ವ್ಯಾಪ್ತಿಯ ತೊರೆನೂರು, ಶಿರಂಗಾಲ, ಅಳುವಾರ, ಬಾಣವಾರ, ಹೆಬ್ಬಾಲೆ, ಸೀಗೆಹೊಸೂರು, ಭುವನಗಿರಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ನೂರಾರು ಎಕರೆಗಳಷ್ಟು ಪ್ರದೇಶದಲ್ಲಿ ಮೆಕ್ಕೆಜೋಳ, ಸಿಹಿ ಗೆಣಸು, ಶುಂಠಿ, ಕೆಸ ಸೇರಿದಂತೆ ಅನೇಕ ಉಪ ಬೆಳೆಗಳನ್ನು ಮಳೆಯನ್ನು ನಂಬಿ ವರ್ಷಂಪ್ರತಿಯAತೆ ಈ ಬಾರಿ ಬೇಸಾಯ ಮಾಡಲಾಗಿದೆ. ಆದರೆ ಕಳೆದ ಎರಡು ತಿಂಗಳುಗಳ ಹಿಂದೆ ಬಿದ್ದ ಮಳೆಯಿಂದಾಗಿ ಜಮೀನಿನ್ನು ಉಳುಮೆ ಮಾಡಿ ಮಳೆಯ ಅವಲಂಬಿತವಾಗಿರುವ ಮೆಕ್ಕೆಜೋಳದ ಬಿತ್ತನೆಯನ್ನು ನೂರಾರು ಎಕರೆಗಳಷ್ಟು ಪ್ರದೇಶದಲ್ಲಿ ಬೆಳೆಯಲಾಗಿದೆ. ಆದರೆ ಈ ಮೆಕ್ಕೆಜೋಳ ಬೆಳೆಯು ಈಗಾಗಲೇ ೪ ಅಡಿಗಳಷ್ಟು ಎತ್ತರ ಬೆಳೆದು ಹೂ ಬಿಟ್ಟು ತೆನೆ ಕಟ್ಟುವ ಸಮಯವಾಗಿದೆ. ಆದರೆ ಈ ವ್ಯಾಪ್ತಿಯಲ್ಲಿ ಮಳೆಯಿಲ್ಲದೆ ಮೆಕ್ಕೆಜೋಳ ಸೇರಿದಂತೆ ಇತರೆ ಬೆಳೆಗಳು ಸಹ ನೀರಿಲ್ಲದೆ ಒಣಗುತ್ತಿವೆ.
ಜಮೀನಿನಲ್ಲಿ ಕೊಳವೆ ಬಾವಿಯನ್ನು ಕೊರೆಸಿಕೊಂಡಿದ್ದರೂ ಸಹ, ವಿದ್ಯುತ್ ವೋಲ್ಟೇಜ್‌ನ ಸಮಸ್ಯೆಯಿಂದಾಗಿ ನೀರಿನ ಸಮಸ್ಯೆಯು ಉಂಟಾಗಿದೆ. ಈ ಭಾಗಗಳಲ್ಲಿ ವಿದ್ಯುತ್ ಸರಬರಾಜು ಸಮರ್ಪಕವಾಗಿ ಇಲ್ಲದೆ ಇರುವುದರಿಂದಾಗಿ ಒಣಗುತ್ತಿರುವ ಬೆಳೆಯನ್ನು ರಕ್ಷಿಸಲು ಸಾಧ್ಯವಾಗುತ್ತಿಲ್ಲ ಎಂದು ಈ ಭಾಗದ ರೈತರ ಅಳಲಾಗಿದೆ,
ನೂರಾರು ಎಕರೆಗಳಷ್ಟು ಪ್ರದೇಶದಲ್ಲಿ ಬೆಳೆಸಲಾಗಿರುವ ಮೆಕ್ಕೆಜೋಳದ ಬೆಳೆ ಮಳೆ ಇಲ್ಲದೆ ಇರುವುದರಿಂದಾಗಿ ಮೆಕ್ಕೆಜೋಳ ಕಾಳು ಕಟ್ಟಲು ಗೊಬ್ಬರ ಕೊಡುವ ಸಮಯವಾದರೂ ಸಹ ಮಳೆಯಿಲ್ಲದೆ ನೀರಿನ ಸಮಸ್ಯೆಯಿಂದಾಗಿ ಈ ವ್ಯಾಪ್ತಿಯ ನೂರಾರು ಎಕರೆ ಪ್ರದೇಶದಲ್ಲಿ ವಿವಿಧ ಬೆಳೆಗಳು ಒಣಗುತ್ತಿವೆ.
- ಕೆ.ಕೆ. ನಾಗರಾಜಶೆಟ್ಟಿ.