ಮಡಿಕೇರಿ, ಆ. ೧೬: ಬಾಣಂತಿಯ ಯೋಗಕ್ಷೇಮ ವಿಚಾರಿಸಲು ತೆರಳಿದ ಸಂದರ್ಭ ಆರೋಗ್ಯ ಇಲಾಖೆ ಸಿಬ್ಬಂದಿ ಮೇಲೆ ಸಾಕುನಾಯಿ ದಾಳಿ ಮಾಡಿದ ಘಟನೆ ಪಾರಾಣೆ ಗ್ರಾಮದಲ್ಲಿ ನಡೆದಿದೆ. ದಾಳಿಗೊಳಗಾದ ಪಾರಾಣೆಯ ಕಮ್ಯುನಿಟಿ ಹೆಲ್ತ್ ಆಫೀಸರ್ ಭವ್ಯ ಅವರು ಗಂಭೀರ ಗಾಯಗೊಂಡು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪಾರಾಣೆಯಲ್ಲಿ ಕರ್ತವ್ಯಕ್ಕೆ ಆಶಾ ಕಾರ್ಯಕರ್ತೆಯೊಂದಿಗೆ ಬಾಣಂತಿ ಮನೆಗೆ ತೆರಳಿ ಹಿಂತಿರುಗುವ ಸಂದರ್ಭ ಗ್ರಾಮದ ಮಾಚಯ್ಯ ಎಂಬವರಿಗೆ ಸೇರಿದ ರಾಟ್ ವೀಲರ್ ನಾಯಿ ಭವ್ಯರ ಮೇಲೆ ದಾಳಿ ಮಾಡಿ ದೇಹದ ನಾನಾ ಭಾಗಗಳನ್ನು ಕಚ್ಚಿದೆ. ತೀವ್ರ ರಕ್ತಸ್ರಾವಗೊಂಡ ಗಾಯಾಳುವನ್ನು ನಾಪೋಕ್ಲಿಗೆ ಕರೆತಂದು ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾಸ್ಪತ್ರೆಗೆ ರವಾನಿಸಲಾಯಿತು. ಚಿಕಿತ್ಸೆ ಪಡೆಯುತ್ತಿರುವ ಭವ್ಯ ಸ್ವಲ್ಪಮಟ್ಟಿಗೆ ಚೇತರಿಸಿಕೊಂಡಿದ್ದಾರೆ.