ವೀರಾಜಪೇಟೆ, ಆ. ೧೫: ಮುಂದಿನ ದಿನಗಳಲ್ಲಿ ಪ್ರತಿ ಹೋಬಳಿಗಳಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆಯನ್ನು ಉಸ್ತುವಾರಿ ಸಚಿವರು, ಶಾಸಕರು ಹಾಗೂ ಉನ್ನತ ಅಧಿಕಾರಿಗಳ ಸಮ್ಮುಖದಲ್ಲಿ ನಡೆಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜ್ ಭರವಸೆ ನೀಡಿದರು.
ಬಿಟ್ಟಂಗಾ¯ದ ಹೆಗ್ಗಡೆ ಸಮಾಜದ ಸಭಾಂಗಣದಲ್ಲಿ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ನಡೆದ ಕಾರ್ಯಕರ್ತರುಗಳ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಸಚಿವರು, ಸಾಮಾನ್ಯ ಜನರಿಗೆ ಸರ್ಕಾರದ ಸೌಲಭ್ಯಗಳು ತಲುಪಬೇಕು. ನಮ್ಮ ಸರಕಾರಕ್ಕೆ ಬಡವರ ಬಗ್ಗೆ ಕಾಳಜಿ ಇದೆ. ಇಲ್ಲಿನ ಸಾಮಾನ್ಯ ಜನತೆಯ ಸಮಸ್ಯೆಗಳನ್ನು ಹಂತಹAತವಾಗಿ ಪರಿಹರಿಸಲಾಗುವುದು ಎಂದರು.
ಇಡೀ ರಾಜ್ಯದಲ್ಲಿ ಜನತೆ ಬದಲಾವಣೆ ಬಯಸಿ ಸಿದ್ದರಾಮಯ್ಯ ನಾಯಕತ್ವದಲ್ಲಿ ಬದಲಾವಣೆ ಬಂದಿದೆ. ಬಿಜೆಪಿಯ ಭದ್ರಕೋಟೆ ಎನಿಸಿದ ಕೊಡಗು ಜಿಲ್ಲೆಯ ಎರಡು ಕ್ಷೇತ್ರಗಳನ್ನು ಕಾಂಗ್ರೆಸ್ ಯುವ ನಾಯಕರು ಭೇದಿಸಿ ದೊಡ್ಡ ಬದಲಾವಣೆ ತಂದಿದ್ದಾರೆ. ಕೊಡಗಿನಲ್ಲಿ ಆದ್ಯತೆ ಮೇರೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಬೇಕಿದೆ. ಕೊಡಗಿನಲ್ಲಿ ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ, ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ಹಂತಹAತವಾಗಿ ಸಂಬAಧಿಸಿದ ಇಲಾಖೆಗೆ ಸೂಚಿಸಿ ಮಾಡಲಾಗುವುದು. ಈ ಸಂಬAಧ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಮುಖ್ಯಮಂತ್ರಿಗಳಿಗೆ ಕೊಡಗಿನ ಬಗ್ಗೆ ವಿಶೇಷ ಒಲವಿದೆ. ಈ ಬಾರಿ ಕೊಡಗಿಗೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕೆಲಸ ಕೈಗೊಳ್ಳಲಾಗುತ್ತದೆ. ಯಾರಿಗೂ ಕೂಡ ಮೂಲಭೂತ ಸೌಲಭ್ಯಗಳ ಕೊರತೆಯಾಗಬಾರದು ಎನ್ನುವುದೇ ನಮ್ಮ ಸರಕಾರದ ಗುರಿ ಎಂದರಲ್ಲದೆ, ಸರಕಾರ ನೀಡಿದ ಭರವಸೆಯಂತೆ ಗ್ಯಾರಂಟಿ ಯೋಜನೆ ತಂದಿದ್ದು ಸಿದ್ದರಾಮಯ್ಯ ಸರಕಾರ. ಎಲ್ಲಾ ಯೋಜನೆಗಳು ಜನತೆಗೆ ತಲುಪಿದೆ. ನಮ್ಮ ಸರಕಾರ ನುಡಿದಂತೆ ನಡೆದಿದೆ ಎಂದರು.
ಶಾಸಕ ಪೊನ್ನಣ್ಣ ಅವರಿಗೆ ಗ್ರಾಮ ಮಟ್ಟದಲ್ಲಿ ಏನೇನು ಅಭಿವೃದ್ಧಿ ಆಗಬೇಕು ಎನ್ನುವ ಚಿಂತನೆ ಇದೆ. ಈಗಾಗಲೇ ೧೫೦ ಕೋಟಿಯ ಪ್ರಸ್ತಾವನೆ ನಮ್ಮ ಮುಂದಿಟ್ಟಿದ್ದಾರೆ. ಹಂತಹAತವಾಗಿ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗುವುದು. ಲೋಕಸಭೆ, ತಾಲೂಕು, ಜಿಲ್ಲಾ ಪಂಚಾಯಿತಿ ಚುನಾವಣೆ ನಮ್ಮ ಮುಂದಿದೆ. ಅದನ್ನು ಎದುರಿಸಲು ಕಾರ್ಯಕರ್ತರು ಸಿದ್ಧತೆ ಮಾಡಿಕೊಳ್ಳಬೇಕಿದೆ. ಪಕ್ಷ ಸಂಘಟನೆ ಆಗಬೇಕು. ಅದಕ್ಕಾಗಿ ಗ್ರಾಮ ಮಟ್ಟದಲ್ಲಿ ಜನತೆಯ ಅಭಿಪ್ರಾಯ ಸಂಗ್ರಹಿಸಬೇಕು. ಅಭಿವೃದ್ಧಿಯ ಮೂಲಕ ಜನರ ಚಿತ್ತ ಗೆಲ್ಲಬೇಕಿದೆ. ಅದೇ ನಮ್ಮ ಮೂಲಮಂತ್ರವಾ ಗಬೇಕು ಎಂದು ಹೇಳಿದರು.
ಶಾಸಕ ಪೊನ್ನಣ್ಣ ಅವರು ಕಾರ್ಯಕರ್ತರ ಸಮಸ್ಯೆಗಳನ್ನು ಆಲಿಸಿ ಮಾತನಾಡಿ, ಆನೆ - ಮಾನವ ಸಂಘರ್ಷ ಇಂದು ನಿನ್ನೆಯದಲ್ಲ. ಅರಣ್ಯ ಇಲಾಖೆ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದೇನೆ. ಯೋಜನೆಗಳನ್ನು ರೂಪಿಸುವುದರ ಮೂಲಕ ಹಂತಹAತವಾಗಿ ಪರಿಹಾರ ಮಾಡಲಾಗುವುದು. ವೀರಾಜ ಪೇಟೆಯ ಸಾರ್ವಜನಿಕ ಆಸ್ಪತ್ರೆಯ ಬಗ್ಗೆ ಸಾರ್ವಜನಿಕ ದೂರುಗಳು ಸಾಕಷ್ಟು ಬಂದಿದ್ದರಿAದ ಆಡಳಿತಾಧಿಕಾರಿಯನ್ನು ವರ್ಗಾವಣೆ ಮಾಡಿ ಅಲ್ಲಿನ ವೈದ್ಯರನ್ನು ಪ್ರಭಾರ ನೇಮಕ ಮಾಡಲಾಗಿದೆ. ಕುಂದುಕೊರತೆಗಳನ್ನು ಸದ್ಯದಲ್ಲೇ ಪರಿಹರಿಸಲಾಗುವುದು. ಜನಸಾಮಾನ್ಯರಿಗೆ ದಿನದ ೨೪ ಗಂಟೆಯೂ ಉತ್ತಮ ಸೇವೆ ಲಭಿಸುವಂತೆ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.
ಜನಸಾಮಾನ್ಯರ ವಿವಿಧ ಸಮಸ್ಯೆಗಳ ಬಗ್ಗೆ ಪ್ರಸ್ತಾಪಿಸಿ ಕಳೆದ ೨೦ ವರ್ಷಗಳ ಅವಧಿಯಲ್ಲಿ ಉಂಟಾದ ಸಮಸ್ಯೆಗೆ ೩ತಿಂಗಳಲ್ಲಿ ಪರಿಹಾರವಾಗಬೇಕು ಎಂದರೆ ಕಷ್ಟಸಾದ್ಯ. ನಮ್ಮ ಸರಕಾರ ಕಾಯೋನ್ಮುಖವಾಗಿ ಕೆಲಸ ಮಾಡ್ತಾ ಇದೆ. ಸರಕಾರ ಘೋಷಣೆ ಮಾಡಿದ ಗ್ಯಾರಂಟಿಗಳು ಜಾರಿಯಾಗಿವೆ. ಬಹುಶಃ ಪ್ರಪಂಚದಲ್ಲೇ ಇಂಥ ಘೋಷಣೆಗಳನ್ನು ಮಾಡಲು ಸಾದ್ಯವಿಲ್ಲ. ಅದನ್ನು ಸಿದ್ದರಾಮಯ್ಯ ಸರಕಾರ ಮಾಡಿ ತೋರಿಸಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ ಮಾತನಾಡಿ ಕಳೆದ ೨೦ ವರ್ಷಗಳಿಂದ ನಮ್ಮ ಶಾಸಕರಿಲ್ಲದೆ ಅಭಿವೃದ್ದಿ ಕುಂಠಿತವಾಗಿತ್ತು. ರಾಜ್ಯದಲ್ಲಿ ನಮ್ಮ ಸರಕಾರವಿದ್ದರೂ ಶಾಸಕರು ನಮ್ಮವರು ಇರಲಿಲ್ಲ. ಇದೀಗ ಶಾಸಕರು, ಸರಕಾರ ಎರಡೂ ನಮ್ಮದೇ ಇದೆ. ಸಮಯಕ್ಕೆ ಸರಿಯಾಗಿ ಎಲ್ಲರಿಗೂ ಸೂಕ್ತ ರೀತಿಯಲ್ಲಿ ಸ್ಪಂದಿಸುವ ಉತ್ತಮ ಶಾಸಕ ನಮ್ಮೊಂದಿಗೆ ಇದ್ದಾರೆ. ಮುಂದಿನ ಚುನಾವಣೆ ಎದುರಿಸಲು ಕಾರ್ಯಕರ್ತರು ಶಾಸಕರೊಂದಿಗೆ ಸ್ಪಂದಿಸಿ ಕಾರ್ಯಪ್ರವೃತ್ತರಾಗಬೇಕಿದೆ ಎಂದರು.
ಕೆಪಿಸಿಸಿ ಸದಸ್ಯ ಶಿವು ಮಾದಪ್ಪ ಮಾತನಾಡಿ, ಕಂದಾಯ ಇಲಾಖೆ ಹಾಗೂ ಭೂಮಾಪನ ಇಲಾಖೆಯಲ್ಲಿನ ಕೆಲವು ಸಮಸ್ಯೆಗಳ ಬಗ್ಗೆ ಶಾಸಕರು ಹಾಗೂ ಉಸ್ತುವಾರಿ ಸಚಿವರ ಗಮನ ಸೆಳೆದರು. ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ಪೋರೆರ ಬಿದ್ದಪ್ಪ ಅವರು ಕೊಡಗಿನಲ್ಲಿರುವ ಭತ್ತ ಕೃಷಿಕರಿಗೆ ಸರಕಾರದಿಂದ ಏಕರೆಗೆ ೧೦,೦೦೦ ರೂ. ಪ್ರೋತ್ಸಾಹಧನ ನೀಡುವಂತೆ ಮನವಿ ಮಾಡಿದರು. ತೆನ್ನಿರಾ ಮೈನಾ ಪರಿಶಿಷ್ಟ ವರ್ಗದವರಿಗೆ ಉಂಟಾಗುತ್ತಿರುವ ಆಧಾರ್ ಕಾರ್ಡ್ ಸಮಸ್ಯೆ ಸೇರಿದಂತೆ ಇತರ ವಿಚಾರಗಳನ್ನು ಸಚಿವರ ಮುಂದಿಟ್ಟರು.
ನರೇಂದ್ರ ಕಾಮತ್, ಮರ್ವಿನ್ ಲೋಬೋ, ಗೋಪಾಲಕೃಷ್ಣ ಹಾಗೂ ಇತರರು ಕೊಡಗಿನ ಜ್ವಲಂತ ಸಮಸ್ಯೆಗಳಾದ ಆನೆ ಮಾನವ ಸಂಘರ್ಷ, ಜಾಗದ ಪರಿವರ್ತನೆ ಸಮಸ್ಯೆ, ಕಂದಾಯ ನಿಗದಿಗೊಳಿಸುವಿಕೆ, ಆನ್‌ಲೈನ್ ತಂತ್ರಜ್ಞಾನ ಸಮಸ್ಯೆಯಾಗುತ್ತಿರುವ ಬಗ್ಗೆ, ವೀರಾಜಪೇಟೆ ಸಾರ್ವಜನಿಕ ಆಸ್ಪತ್ರೆಯಲ್ಲಿನ ವೈದ್ಯರ ಕೊರತೆ ಹಾಗೂ ಸರಿಯಾಗಿ ವೈದ್ಯರು ಕರ್ತವ್ಯ ನಿರ್ವಹಿಸದೆ ಇರುವ ಬಗ್ಗೆ ಶಾಸಕರು ಹಾಗೂ ಉಸ್ತುವಾರಿ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು. ಶಾಸಕರು ಇದಕ್ಕೆ ಪ್ರತಿಕ್ರಿಯಿಸಿ ಮುಂದಿನ ದಿನಗಳಲ್ಲಿ ಸರಕಾರದ ಮಟ್ಟದಲ್ಲಿ ಚರ್ಚಿಸಿ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂದು ತೀರ್ಮಾನಿಸುವುದಾಗಿ ಭರವಸೆ ನೀಡಿದರು.
ವೇದಿಕೆಯಲ್ಲಿ ಡಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಸುರಯ್ಯಾ ಅಬ್ರಾರ್, ನಾಪೋಕ್ಲು ಬ್ಲಾಕ್ ಅಧ್ಯಕ್ಷ ಇಸ್ಮಾಯಿಲ್, ಕಾಂಗ್ರೆಸ್ ಪ್ರಮುಖರಾದ ಕೆ.ಬಿ. ಶಾಂತಪ್ಪ, ಮಳವಂಡ ಅರವಿಂದ್ ಕುಟ್ಟಪ್ಪ, ಕೊಡಗು ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಹನೀಫ್, ನಗರ ಕಾಂಗ್ರೆಸ್ ಅಧ್ಯಕ್ಷ ಮಾದಂಡ ತಿಮ್ಮಯ್ಯ, ಕಾರ್ಯದರ್ಶಿ ಶಶಿಧರನ್, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಜಾನ್ಸನ್, ಜೋಕಿಂ, ವಿ.ಕೆ. ಗೋಪಾಲಕೃಷ್ಣ, ವಿ.ಕೆ. ಸತೀಶ್ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರುಗಳು, ಮಹಿಳಾ ಘಟಕಗಳ ಪದಾಧಿಕಾರಿಗಳು ಇದ್ದರು.