ಸೋಮವಾರಪೇಟೆ, ಆ. ೧೩ : ಇಲ್ಲಿನ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಘಟಕದಲ್ಲಿ ಚಿಕಿತ್ಸೆಗೆ ಒಳಪಡುತ್ತಿರುವ ರೋಗಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಘಟಕದ ಸಿಬ್ಬಂದಿಗಳು ಉತ್ತಮವಾಗಿ ಸೇವೆ ನೀಡುತ್ತಿದ್ದರೂ ಸಹ ಡಯಾಲಿಸಿಸ್ ಘಟಕದ ಉಸ್ತುವಾರಿ ಹೊಣೆ ಹೊತ್ತಿರುವ ಕಂಪೆನಿ ನೀಡುತ್ತಿರುವ ಔಷಧಗಳು ರೋಗಿಗಳ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿವೆ.
ಇಲ್ಲಿನ ಘಟಕದಲ್ಲಿ ಒಟ್ಟು ೩೦ ಮಂದಿ ರೋಗಿಗಳು ನಿಯಮಿತವಾಗಿ ಡಯಾಲಿಸಿಸ್ಗೆ ಒಳಪಡುತ್ತಿದ್ದು, ಪ್ರತಿ ದಿನ ಮೂರು ಹಂತಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕೊಲ್ಕತ್ತಾ ಮೂಲಕ ಎಸ್ಕಾಗ್ ಸಂಜೀವನಿ ಪ್ರೆöÊವೇಟ್ ಲಿಮಿಟೆಡ್ ಎಂಬ ಸಂಸ್ಥೆಯು ಕಳೆದ ೨೦೨೧ರಿಂದ ಈ ಘಟಕದ ನಿರ್ವಹಣೆಯ ಟೆಂಡರ್ ಪಡೆದುಕೊಂಡಿದೆ.
ಸೋಮವಾರಪೇಟೆಯ ಡಯಾಲಿಸಿಸ್ ಘಟಕದಲ್ಲಿ ಸೋಮವಾರಪೇಟೆ ವ್ಯಾಪ್ತಿಯವರು ಸೇರಿದಂತೆ ಶನಿವಾರಸಂತೆ, ಕೊಡ್ಲಿಪೇಟೆ, ಮಾದಾಪುರ, ಕುಶಾಲನಗರ, ಶಿರಂಗಾಲ, ಕೂಡಿಗೆ, ತೊರೆನೂರು, ಗೋಣಿಮರೂರು, ಅಬ್ಬೂರುಕಟ್ಟೆ, ಐಗೂರು ಸೇರಿದಂತೆ ಸುತ್ತಮುತ್ತಲಿನಿಂದ ೩೦ ಮಂದಿ ರೋಗಿಗಳು ಡಯಾಲಿಸಿಸ್ಗೆ ಆಗಮಿಸುತ್ತಿದ್ದು, ಘಟಕದಲ್ಲಿನ ಅವ್ಯವಸ್ಥೆಯಿಂದ ಆತಂಕದಲ್ಲೇ ಚಿಕಿತ್ಸೆಗೆ ಒಳಪಡುತ್ತಿದ್ದಾರೆ.
ಸಂಜೀವನಿ ಕಂಪೆನಿಯು ಈವರೆಗೆ ಓಸಿಸ್ ಬ್ರಾಂಡ್ನ ಡಯಾಲಿಸಿಸ್ ಔಷಧವನ್ನು ನೀಡುತ್ತಿದ್ದು, ಕಳೆದ ತಾ. ೪ರಿಂದ ನೆಪ್ರೋಕ್ಸಾ ಕಂಪೆನಿಯ ಪಾರ್ಟ್ ಎ. ಮತ್ತು ಪಾರ್ಟ್ ಬಿ. ಔಷಧವನ್ನು ಸರಬರಾಜು ಮಾಡುತ್ತಿದೆ. ಈ ಪೌಡರ್ ಮೂಲಕ ಡಯಾಲಿಸಿಸ್ಗೆ ಒಳಪಡುವ ರೋಗಿಗಳು ಕೇವಲ ಒಂದು ಗಂಟೆಯಲ್ಲೇ ಅಸಾಧ್ಯ ನೋವಿನಿಂದ ಬಳಲುತ್ತಿರುವುದು ಕಂಡುಬAದಿದೆ.
“ಸಾಧಾರಣವಾಗಿ ೪ ಗಂಟೆಗಳ ಕಾಲ ಡಯಾಲಿಸಿಸ್ ಮಾಡಿದರೆ ಮೂರು ದಿನಗಳ ಕಾಲ ಸುಧಾರಿಸಿಕೊಳ್ಳಬಹುದು. ಆದರೆ ನೆಪ್ರೋಕ್ಸಾ ಔಷಧಿಯ ಮೂಲಕ ಡಯಾಲಿಸಿಸ್ಗೆ ಒಳಪಟ್ಟರೆ ಕೇವಲ ಒಂದರಿAದ ಒಂದೂವರೆ ಗಂಟೆಗಳ ಕಾಲ ಮಾತ್ರ ಮಲಗಬಹುದು. ನಂತರ ಕೈಕಾಲು ಸೆಳೆತ, ಕಡಿಮೆ ರಕ್ತದೊತ್ತಡ ಆಗುತ್ತಿದ್ದು, ಅಸಾಧ್ಯ ನೋವು ಅನುಭವಿಸುವಂತಾಗಿದೆ. ಹೀಗೆ ಮುಂದುವರೆದರೆ ಬೇಗನೇ ನಾವುಗಳು ಸಾಯಬೇಕಾಗುತ್ತದೆ” ಎಂದು ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಆತಂಕ ವ್ಯಕ್ತಪಡಿಸಿದ್ದಾರೆ.
‘ಈ ಹಿಂದೆ ನೀಡುತ್ತಿದ್ದ ಓಸಿಸ್ ಔಷಧಿಯ ಬದಲಿಗೆ ಇದೀಗ ನೆಪ್ರೋಕ್ಸಾ ನೀಡುತ್ತಿರುವುದರಿಂದಲೇ ಸಮಸ್ಯೆ ಎದುರಾಗಿದೆ. ರೋಗಿಗಳು ಡಯಾಲಿಸಿಸ್ಗೆ ಒಳಪಟ್ಟ ಸಂದರ್ಭ ಕೈಕಾಲುಗಳು ಚಲನಶೀಲತೆ ಇಲ್ಲದಂತಾಗುವುದು, ಸೆಳೆತ, ವಾಂತಿ, ಬಿಪಿ ಕಡಿಮೆಯಾಗುವುದು ಸೇರಿದಂತೆ ಇನ್ನಿತರ ಅಡ್ಡಪರಿಣಾಮಗಳು ಉಂಟಾಗುತ್ತಿವೆ. ಜೀವವನ್ನು ಕೈಯಲ್ಲಿಡಿದುಕೊಂಡು ಚಿಕಿತ್ಸೆಗೆ ಒಳಪಡಬೇಕಿದೆ’ ಎಂದು ಐಗೂರಿನ ಶಶಿ ಅವರು ಅಳಲು ತೋಡಿಕೊಂಡಿದ್ದಾರೆ.
“ನನ್ನ ಪತಿಯನ್ನು ನಿಯಮಿತವಾಗಿ ಇಲ್ಲಿಗೆ ಕರೆತರುತ್ತಿದ್ದು, ಕಳೆದ ಒಂದು ವಾರದಿಂದ ಡಯಾಲಿಸಿಸ್ಗೆ ಬರಲೂ ಹೆದರಿಕೆಯಾಗುತ್ತಿದೆ. ಅಡ್ಡಪರಿಣಾಮದಿಂದ ಪತಿಯವರ ಆರೋಗ್ಯ ಹದಗೆಡುತ್ತಿದೆ. ಈ ಬಗ್ಗೆ ಕಂಪೆನಿಯ ಸಿಬ್ಬಂದಿಗೆ ಕರೆ ಮಾಡಿದರೆ ಬೇಕಿದ್ರೆ ನೀವು ಬೇರೆ ಕಡೆ ತೋರಿಸಿಕೊಳ್ಳಿ ಎಂದು ಉಡಾಫೆಯ ಉತ್ತರ ನೀಡುತ್ತಿದ್ದಾರೆ. ಖಾಸಗಿಯಾಗಿ ಒಂದು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳಲು ಎರಡರಿಂದ ಎರಡೂವರೆ ಸಾವಿರ ವೆಚ್ಚ ತಗಲುತ್ತದೆ. ವಾರಕ್ಕೆ ಎರಡರಿಂದ ಮೂರು ಬಾರಿ ಡಯಾಲಿಸಿಸ್ ಮಾಡಿಸಿಕೊಳ್ಳಬೇಕಿದೆ. ಅಷ್ಟೊಂದು ಹಣವನ್ನು ಕೊಟ್ಟು ನಮ್ಮಂತ ಬಡವರು ಬದುಕುಳಿಯಲು ಸಾಧ್ಯವೇ?” ಎಂದು ಕುಶಾಲನಗರದ ರೋಗಿಯೋರ್ವರ ಪತ್ನಿ ‘ಶಕ್ತಿ’ಯೊಂದಿಗೆ ಅಳಲು ತೋಡಿಕೊಂಡಿದ್ದಾರೆ.
ಇದರೊAದಿಗೆ ಡಯಾಲಿಸಿಸ್ ಕೇಂದ್ರದ ಬೆಡ್ಗಳು, ಬೆಡ್ ಶೀಟ್ಗಳೂ ಸಹ ಸಮರ್ಪಕವಾಗಿಲ್ಲ. ನಾವುಗಳೇ ಮನೆಯಿಂದ ಬೆಡ್ಶೀಟ್, ದಿಂಬುಗಳನ್ನು ತರಬೇಕಿದೆ. ಬಿ.ಪಿ. ಕಡಿಮೆಯಾದರೆ ಕಾಲುಗಳನ್ನು ಮೇಲೆತ್ತಿ ಇಡಲು ಸೂಕ್ತವಾದ ಬೆಡ್ ಇಲ್ಲ. ಡಬ್ಬಗಳನ್ನು ಇಟ್ಟುಕೊಳ್ಳಬೇಕಾದ ಸ್ಥಿತಿಯಿದೆ ಎಂದು ರೋಗಿಗಳು ವಿವರಿಸಿದ್ದಾರೆ.
ಡಯಾಲಿಸಿಸ್ ಘಟಕದ ಅವ್ಯವಸ್ಥೆ ಬಗ್ಗೆ ‘ಶಕ್ತಿ’ ಶಾಸಕರ ಕಚೇರಿಗೆ ಮಾಹಿತಿ ನೀಡಿದ್ದು, ಆಪ್ತ ಸಹಾಯಕ ಕಿರಣ್ ಅವರು ಆಗಮಿಸಿ ಪರಿಶೀಲಿಸಿದರು. ಶೀಘ್ರದಲ್ಲಿಯೇ ಶಾಸಕರು ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ ಎಂದು ತಿಳಿಸಿದ ಅವರು, ನಂತರ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಶಿವಪ್ರಸಾದ್ ಅವರೊಂದಿಗೆ ಮಾತುಕತೆ ನಡೆಸಿದರು. ಪ್ರಭಾರ ವೈದ್ಯಾಧಿಕಾರಿ ಡಾ. ಸತೀಶ್ಕುಮಾರ್ ಅವರು ಡಯಾಲಿಸಿಸ್ ಘಟಕಕ್ಕೆ ಭೇಟಿ ನೀಡಿ, ತಕ್ಷಣ ಹೊಸದಾಗಿ ಒಂದು ಬೆಡ್ ಮತ್ತು ೧೦ ಬೆಡ್ಶೀಟ್ಗಳನ್ನು ಒದಗಿಸಲು ಕ್ರಮಕೈಗೊಂಡರು.‘ಸರ್ಕಾರಿ ಆಸ್ಪತ್ರೆಯ ಕಟ್ಟಡದಲ್ಲಿರುವ ಡಯಾಲಿಸಿಸ್ ಘಟಕದ ನಿರ್ವಹಣೆಯ ಸಂಪೂರ್ಣ ಜವಾಬ್ದಾರಿ ಟೆಂಡರ್ ಪಡೆದ ಸಂಸ್ಥೆಯದ್ದಾಗಿದೆ. ಸಣ್ಣಪುಟ್ಟ ವ್ಯವಸ್ಥೆಗಳನ್ನು ನಾವುಗಳು ಕಲ್ಪಿಸಬಹುದು. ಸರ್ಕಾರದಿಂದ ಟೆಂಡರ್ ಪಡೆದಿರುವ ಕಂಪೆನಿಗೆ ಹಣ ಸಂದಾಯವಾಗುತ್ತಿದ್ದು, ಇದೀಗ ಬಂದಿರುವ ಔಷಧಗಳನ್ನು ಬದಲಾಯಿಸಲು ಸೂಚನೆ ನೀಡಲಾಗಿದೆ’ ಎಂದು ಡಾ. ಸತೀಶ್ಕುಮಾರ್ ಅವರು ‘ಶಕ್ತಿ’ಗೆ ತಿಳಿಸಿದ್ದಾರೆ. - ವಿಜಯ್ ಹಾನಗಲ್