ಸಿದ್ದಾಪುರ, ಆ. ೧೩: ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್. ಬೋಸರಾಜು ಭೇಟಿ ನೀಡಿ, ಕಾಡಾನೆ ಧಾಳಿಯಿಂದ ಮೃತ ವ್ಯಕ್ತಿಯ ಕುಟುಂಬಕ್ಕೆ ತ್ವರಿತವಾಗಿ ಪರಿಹಾರ ಧನ ಬಿಡುಗಡೆಗೊಳಿಸುವಂತೆ ಅರಣ್ಯ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲೆಯಲ್ಲಿ ಸಚಿವರು ಇದ್ದ ಹಿನ್ನೆಲೆ ಮಡಿಕೇರಿ ಶಾಸಕ ಮಂಥರ್‌ಗೌಡ ಅವರೊಡನೆ ಆಸ್ಪತ್ರೆಗೆ ಭೇಟಿ ನೀಡಿ ಅರೆಕಾಡಿನಲ್ಲಿ ನಡೆದ ಕಾಡಾನೆ ಧಾಳಿಯಿಂದ ಮೃತಪಟ್ಟ ವ್ಯಕ್ತಿ ಕುಟುಂಬಕ್ಕೆ ಸಾಂತ್ವನ ಹೇಳಿದರು. ಅರಣ್ಯ ಇಲಾಖೆಯ ಬೇಜ ವಾಬ್ದಾರಿಯಿಂದ ಜಿಲ್ಲೆಯಲ್ಲಿ ವನ್ಯ ಜೀವಿ ದಾಳಿ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಸ್ಥಳದಲ್ಲಿದ್ದ ಅರಣ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಎರಡು ಮೂರು ದಿನದೊಳಗೆ ಪೂರ್ಣ ಪರಿಹಾರ ಮೊತ್ತ ಕುಟುಂಬಕ್ಕೆ ಸೇರಬೇಕು ಎಂದು ಸಚಿವರು ತಾಕೀತು ಮಾಡಿ ದರು. ಇದಕ್ಕೆ ಉತ್ತರಿಸಿದ ಅಧಿಕಾರಿ ಗಳು ತಾ. ೧೪ ರೊಳಗೆ ಅರ್ಧ ಪರಿಹಾರ ಹಣವನ್ನು ನೀಡಲಾಗುವುದು ಎಂದು ಉತ್ತರಿಸಿದರು.
ಜಿಲ್ಲೆಯಲ್ಲಿ ರೈಲ್ವೇ ಬ್ಯಾರಿಕೇಡ್ ಅಳವಡಿಕೆಗೆ ಕ್ರಮವಹಿಸಲಾಗುವುದು ನಾಡಿನೊಳಗೆ ಬೀಡುಬಿಟ್ಟಿರುವ ಕಾಡಾನೆಗಳನ್ನು ಓಡಿಸುವ ಕಾರ್ಯಾಚರಣೆ ಕೈಗೆತ್ತಿಕೊಳ್ಳಬೇಕು ಎಂದು ಸೂಚಿಸಿದರು.