ಸೋಮವಾರಪೇಟೆ, ಆ. ೧೨: ತಾ. ೧೨.೦೩.೨೦೧೦ರಂದು ಸೋಮವಾರಪೇಟೆ ತಾಲೂಕು ಕಚೇರಿಯಿಂದ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದಿರುವ ಎರಡು ಪ್ರಕರಣಗಳಿಗೆ ಸಂಬAಧಿಸಿದAತೆ ತಾ.೧೦.೦೮.೨೦೨೩ರಂದು ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಮೊಕದ್ದಮೆಗಳು ದಾಖಲಾಗಿವೆ.
ಸುಳ್ಳು ಜಾತಿ ಪ್ರಮಾಣ ಪತ್ರದ ಮೂಲಕ ಸರ್ಕಾರಿ ಮೀಸಲಾತಿಯಡಿ ಹಲವಷ್ಟು ಗುತ್ತಿಗೆಗಳನ್ನು ಪಡೆದು ಪರಿಶಿಷ್ಟ ಜಾತಿಯವರಿಗೆ ಮೀಸಲಾಗಿರುವ ಹಲವಷ್ಟು ಕಾಮಗಾರಿಗಳನ್ನು ನಿರ್ವಹಿಸಿರುವ ಪ್ರಕರಣವೂ ಇದಾಗಿದ್ದು, ಸರ್ಕಾರಕ್ಕೆ ಹಾಗೂ ಪರಿಶಿಷ್ಟ ಜಾತಿಯವರಿಗೆ ವಂಚಿಸಿರುವ ಆರೋಪದ ಮೇರೆ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ವ್ಯಕ್ತಿಗಳು, ಅದನ್ನು ನೀಡಿದ ಅಧಿಕಾರಿಗಳ ವಿರುದ್ಧ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ಕಲಂ ೧೯೭, ೧೯೮, ೪೨೦ ಐಪಿಸಿ, ೩ (೧) (ಕೂ) ಪರಿಶಿಷ್ಟ ಜಾತಿ & ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ತಿದ್ದುಪಡಿ ಕಾಯ್ದೆ ೨೦೧೫ ಮತ್ತು ಕಲಂ ೫(ಬಿ) ಎಸ್ಸಿ/ಎ & ಒಬಿಸಿ ಮೀಸಲಾತಿ ಮತ್ತು ನೇಮಕಾತಿ ಅಧಿನಿಯಮ ೧೯೯೦ ರ ರೀತ್ಯಾ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಮೈಸೂರು ವಿಭಾಗೀಯ ಪೊಲೀಸ್ ಅಧೀಕ್ಷಕರ ಸೂಚನೆ ಮೇರೆ ನಿರ್ದೇಶನಾಲಯದ ಸಬ್ ಇನ್ಸ್ಪೆಕ್ಟರ್ ಎಂ.ವಿ. ಅರ್ಚನಾ ಅವರು ತಾ. ೧೦ರಂದು ಸೋಮವಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮುಂದಿನ ತನಿಖೆಗಾಗಿ ಕಡತವನ್ನು ತಮಗೆ ಹಸ್ತಾಂತರಿಸುವAತೆ ಕೋರಿದ್ದಾರೆ.
ಏನಿದು ಪ್ರಕರಣ?: ೨೦೦೮ರಿಂದ ೨೦೧೦ರವರೆಗೆ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಆಗಿ ಬಿ.ಎಸ್. ಹಿರಿಯಣ್ಣ ಎಂಬವರು ಕಾರ್ಯನಿರ್ವಹಿಸಿದ್ದರು. ಈ ಸಂದರ್ಭ ತಾ. ೧೨.೦೩.೨೦೧೦ರಲ್ಲಿ ತಾಲೂಕಿನ ಹುಲುಗುಂದ ಗ್ರಾಮದ ವಿ. ಸುಬ್ರಮಣಿ ಬಿನ್ ಲೇಟ್ ವೀರಸ್ವಾಮಿ ಹಾಗೂ ವಿ. ಕಣ್ಣಯ್ಯ ಬಿನ್ ಲೇಟ್ ವೀರಸ್ವಾಮಿ ಅವರುಗಳಿಗೆ ಪರಿಶಿಷ್ಟ ಜಾತಿಯ ಭೋವಿ ಸುಳ್ಳು ಜಾತಿ ಪ್ರಮಾಣಪತ್ರವನ್ನು ನೀಡಿದ್ದರು ಎನ್ನಲಾಗಿದೆ.
ವಿ. ಸುಬ್ರಮಣಿ ಹಾಗೂ ವಿ. ಕಣ್ಣಯ್ಯ ಅವರುಗಳು ಮೂಲತಃ ತಮಿಳುನಾಡಿನವರಾಗಿದ್ದು, ಪರಿಶಿಷ್ಟ ಜಾತಿಯ ಭೋವಿ ಸುಳ್ಳು ಜಾತಿ ಪ್ರಮಾಣಪತ್ರವನ್ನು ಪಡೆದುಕೊಂಡು ವಂಚಿಸಿರುತ್ತಾರೆ. ಈ ಬಗ್ಗೆ ದೂರುಗಳು ಬಂದ ಹಿನ್ನೆಲೆ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳು ಸುಬ್ರಮಣಿ ಮತ್ತು ಕಣ್ಣಯ್ಯ ಅವರಿಗೆ ನೀಡಿದ್ದ ಜಾತಿ ಪ್ರಮಾಣ ಪತ್ರವನ್ನು ರದ್ದುಗೊಳಿಸುವಂತೆ ಸೂಚಿಸಿದ್ದರು.
ಈರ್ವರ ಜಾತಿ ಬಗ್ಗೆ ಈಗಾಗಲೇ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ, ಮೈಸೂರು ಪ್ರಾದೇಶಿಕ ಕಚೇರಿಯಲ್ಲಿ ವಿಚಾರಣೆ ಮಾಡಿದ್ದು, ಈ ಸಂದರ್ಭ ಇವರುಗಳು ಮೂಲತಃ ತಮಿಳುನಾಡಿನವರಾಗಿರುವ ಬಗ್ಗೆ ತಿಳಿದುಬಂದಿದೆ. ಆದರೂ ಸೋಮವಾರಪೇಟೆ ತಹಶೀಲ್ದಾರ್ರಿಂದ ತಾವುಗಳು ಪರಿಶಿಷ್ಟ ಜಾತಿಗೆ ಸೇರಿದ ಭೋವಿ ಜಾತಿಯವರೆಂದು ಸುಳ್ಳು ಜಾತಿ ಪ್ರಮಾಣಪತ್ರ ಪಡೆದು ಮೀಸಲಾತಿಯಡಿಯಲ್ಲಿ, ಸರ್ಕಾರಿ ಗುತ್ತಿಗೆಗಳನ್ನು ಮಾಡಿಸಿ ಪರಿಶಿಷ್ಟ ಜಾತಿಯವರಿಗೆ ಹಾಗೂ ಸರ್ಕಾರಕ್ಕೆ ವಂಚಿಸಿರು ತ್ತಾರೆ ಎಂದು ಇನ್ಸ್ಪೆಕ್ಟರ್ ಎಂ.ವಿ. ಅರ್ಚನ ಅವರು ನೀಡಿರುವ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
(ಮೊದಲ ಪುಟದಿಂದ) ಸುಳ್ಳು ಜಾತಿ ಪ್ರಮಾಣಪತ್ರವನ್ನು ಪಡೆದಿರುವ ಬಗ್ಗೆ ತಾ. ೨೫.೧೧.೨೦೨೦ ಹಾಗೂ ೦೯.೦೨.೨೦೨೧ ರಂದು ಕೊಡಗು ಜಿಲ್ಲಾ ಜಾತಿ ಪರಿಶೀಲನಾ ಸಮಿತಿಯಲ್ಲಿ ಚರ್ಚಿಸಿ, ವಿ. ಕಣ್ಣಯ್ಯ ಮತ್ತು ವಿ. ಸುಬ್ರಮಣಿ ಅವರುಗಳು ಪಡೆದಿದ್ದ ಪರಿಶಿಷ್ಟ ಜಾತಿಯ ಭೋವಿ ಜಾತಿ ಪ್ರಮಾಣಪತ್ರವನ್ನು ರದ್ದುಪಡಿಸುವಂತೆ ತಹಶೀಲ್ದಾರ್ಗೆ ಸೂಚನೆ ನೀಡಿದ್ದು, ಅದರಂತೆ ತಹಶೀಲ್ದಾರರು ಭೋವಿ ಜಾತಿ ಪ್ರಮಾಣಪತ್ರವನ್ನು ರದ್ದು ಪಡಿಸಿದ್ದಾರೆ.
ಈರ್ವರು ಅರ್ಜಿದಾರರು ಮೂಲತಃ ತಮಿಳುನಾಡು ರಾಜ್ಯಕ್ಕೆ ಸೇರಿದವರೆಂದು ಗೊತ್ತಿದ್ದರೂ ಅವರಿಗೆ ಉದ್ದೇಶ ಪೂರ್ವಕವಾಗಿ ಸಹಾಯ ಮಾಡುವ ಕಾರಣದಿಂದ ಸುಳ್ಳು ಜಾತಿ ಪ್ರಮಾಣಪತವನ್ನು ವಿತರಿಸಿದ ಅಂದಿನ ತಹಶೀಲ್ದಾರ್, ವರದಿ ನೀಡಿರುವ ಅಂದಿನ ರಾಜಸ್ವ ನಿರೀಕ್ಷಕರು ಹಾಗೂ ಅಂದಿನ ಗ್ರಾಮ ಲೆಕ್ಕಾಧಿಕಾರಿಗಳ ವಿರುದ್ಧ ಕ್ರಿಮಿನಲ್ ಪ್ರಕರಣವನ್ನು ದಾಖಲಿಸುವಂತೆ ದೂರು ನೀಡಿದ ಮೇರೆ, ಸೋಮವಾರಪೇಟೆ ಠಾಣೆಯಲ್ಲಿ ಎರಡು ಪ್ರತ್ಯೇಕ ಮೊಕದ್ದಮೆಗಳು ದಾಖಲಾಗಿದೆ.
ಪ್ರಸ್ತಾವಿತ ಜಾತಿ ಪ್ರಮಾಣ ಪತ್ರ ವಿತರಿಸಿದ ಸಂದರ್ಭ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಆಗಿ ಬಿ.ಎಸ್. ಹಿರಿಯಣ್ಣ (೧೦.೧೧.೨೦೦೮ ರಿಂದ ೧೮.೦೬.೨೦೧೦ರವರೆಗೆ ಸೇವೆ) ಅವರು ಕರ್ತವ್ಯ ನಿರ್ವಹಿಸಿದ್ದು, ೧೮.೦೬.೨೦೧೦ರಂದು ಇಲ್ಲಿಂದಲೇ ನಿವೃತ್ತಿಯಾಗಿದ್ದಾರೆ. ಉಳಿದಂತೆ ರಾಜಸ್ವ ನಿರೀಕ್ಷಕರು ಹಾಗೂ ಗ್ರಾಮ ಲೆಕ್ಕಾಧಿಕಾರಿಗಳ ವಿರುದ್ಧವೂ ಮೊಕದ್ದಮೆ ದಾಖಲಾಗಿದ್ದು, ತನಿಖೆ ಪ್ರಗತಿಯಲ್ಲಿದೆ.