ಗೋಣಿಕೊಪ್ಪಲು, ಆ. ೧೧: ಸಾಲದ ಸುಳಿಗೆ ಸಿಲುಕಿ ಕೃಷಿಕ ಆತ್ಮಹತ್ಯೆ ಮಾಡಿಕೊಂಡ ಘಟನೆ ತಿತಿಮತಿಯಲ್ಲಿ ನಡೆದಿದೆ. ತಿತಿಮತಿಯ ನೊಖ್ಯ ನಿವಾಸಿ ವಿ.ಎನ್. ಪ್ರದೀಪ್ (೩೯) ಮೃತ ದುರ್ದೈವಿ.
ಪ್ರದೀಪ್ ಹೆತ್ತವರು ಕೆಲ ವರ್ಷಗಳ ಹಿಂದೆ ಮೃತಪಟ್ಟಿದ್ದರು. ಸಾಯುವ ಮುನ್ನ ಇರುವ ಕೃಷಿ ಭೂಮಿಯ ಮೇಲೆ ತಾಯಿ ಸುಮಾರು ರೂ. ೨.೬೫ ಲಕ್ಷ ಸಾಲ ಮಾಡಿದ್ದರು ಎನ್ನಲಾಗಿದೆ. ಮಾಡಿದ ಸಾಲದೊಂದಿಗೆ ಮಗ ಪ್ರದೀಪ್ ಒಂದಷ್ಟು ಕೈಸಾಲ, ಆಭರಣ ಸಾಲ ಮಾಡಿ ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದ್ದ ಎಂದು ಕುಟುಂಬಸ್ಥರು ಹೇಳಿಕೊಂಡಿದ್ದಾರೆ.
ತಿತಿಮತಿಯ ಕೃಷಿಕ ದಿ.ನಿಂಗಣ್ಣ ಇಬ್ಬರು ಪುತ್ರರಿಗೆ ಕೃಷಿ ಭೂಮಿಯನ್ನು ಸಮಪಾಲು ಮಾಡಿಕೊಟ್ಟಿದ್ದರು. ಅಣ್ಣ ಪ್ರವೀಣ್ ಹಾಗೂ ತಮ್ಮ ಪ್ರದೀಪ್ ಅಲ್ಲಿಯೇ ವಾಸವಾಗಿದ್ದರು. ಮೃತಪಟ್ಟ ವ್ಯಕ್ತಿ ಪ್ರದೀಪ್ ನ ಪತ್ನಿ ತನ್ನ ಎರಡು ಮಕ್ಕಳನ್ನು ತಂದೆಯ ಮನೆಯಲ್ಲಿ ವಿದ್ಯಾಭ್ಯಾಸ ನೀಡುತ್ತಾ, ಆಗಿಂದಾಗ್ಗೆ ತಿತಿಮತಿ ಮನೆಗೆ ಬಂದು ಹೋಗುತ್ತಿದ್ದರು.
(ಮೊದಲ ಪುಟದಿಂದ) ಪ್ರದೀಪ್ ತನ್ನ ಪತ್ನಿಯಾದ ಸುಧಾರಾಣಿಯ ಚಿನ್ನಾಭರಣವನ್ನು ಪಡೆದು ಬ್ಯಾಂಕಿನಲ್ಲಿ ಅಡಮಾನವಿಟ್ಟು ಸಾಲ ಪಡೆದಿದ್ದ. ಸುಮಾರು ರೂ. ೪ ಲಕ್ಷ ಆಭರಣ ಸಾಲವನ್ನು ಪಡೆದಿರುವುದಾಗಿ ಪ್ರದೀಪ್ ಸಹೋದರ ಪ್ರವೀಣ್ ಮಾಹಿತಿ ಒದಗಿಸಿದ್ದಾರೆ. ಬ್ಯಾಂಕ್‌ನಲ್ಲಿ ಇಟ್ಟಿದ್ದ ಚಿನ್ನವನ್ನು ಬಿಡಿಸಿಕೊಳ್ಳಲು ಪ್ರದೀಪ್ ತುಂಬಾ ಕಷ್ಟಪಡುತ್ತಿದ್ದ. ಗೋಣಿಕೊಪ್ಪ ನಗರದಲ್ಲಿ ಕೆಲಸಕ್ಕೂ ಸೇರಿದ್ದ. ಈ ಮಧ್ಯೆ ಶುಂಠಿ ಕೃಷಿ ಮಾಡಿ ಅದರಲ್ಲೂ ನಷ್ಟ ಅನುಭವಿಸಿದ್ದ.
ಸ್ನೇಹಿತರ ಬಳಿಯೂ ಕೈ ಸಾಲವನ್ನು ಪಡೆದಿದ್ದ. ಆದರೆ ಪಡೆದ ಸಾಲ ತೀರಿಸಲು ಪ್ರದೀಪ್‌ಗೆ ಕಷ್ಟವಾಗಿತ್ತು. ಇತ್ತ ಇರುವ ಜಮೀನಿನ ಮೇಲೆ ಸಾಲ ಮಾಡೋಣವೆಂದರೆ, ಹೆತ್ತವರ ಹೆಸರಿನಿಂದ ಮಕ್ಕಳಿಬ್ಬರ ಹೆಸರಿಗೆ ಆಸ್ತಿಯ ಖಾತೆ ವರ್ಗಾವಣೆ ಆಗಿರಲಿಲ್ಲ. ಒಂದೆಡೆ ತಾಯಿ ದಿ.ಲಕ್ಷಿö್ಮÃ ಮಾಡಿದ ಕೃಷಿ ಸಾಲ, ತಾನು ಮಾಡಿದ ಕೈ ಸಾಲ, ಪತ್ನಿಯ ಚಿನ್ನವನ್ನು ಅಡವಿಟ್ಟು ಪಡೆದ ಸಾಲ ತೀರಿಸಲಾಗದೇ ತಾನೊಬ್ಬನೆ ಕೊರಗುತ್ತಿದ್ದ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಮಧ್ಯಾಹ್ನದಿಂದ ನಾಪತ್ತೆ
ಗುರುವಾರ ಮಧ್ಯಾಹ್ನ ವೇಳೆ ಮನೆಯ ಬಳಿ ಕಾಣಿಸಿಕೊಂಡಿದ್ದ ಪ್ರದೀಪ್ ನನ್ನು ಇವರ ದೊಡ್ಡಪ್ಪ ಸತೀಶ್ ಊಟಕ್ಕೆ ಕರೆದಿದ್ದರು. ಆದರೆ ಊಟ ಬೇಡ ಎಂದು ಪ್ರದೀಪ್ ಹೇಳಿದ್ದ. ನಂತರ ಯಾರ ಕಣ್ಣಿಗೂ ಕಾಣಿಸಿಕೊಂಡಿರಲಿಲ್ಲ. ಗುರುವಾರ ಸಂಜೆಯ ವೇಳೆ ಪ್ರದೀಪ್ ಎಲ್ಲಿಯೂ ಕಾಣದಿದ್ದಾಗ ಸಹಜವಾಗಿಯೇ ಮನೆಯವರು ಎಲ್ಲಾ ಕಡೆ ಹುಡುಕಾಟ ನಡೆಸಿದರು. ಮೊಬೈಲ್ ಗೂ ಕರೆ ಮಾಡಿದರೂ ಕರೆ ಸ್ವೀಕರಿಸುತ್ತಿರಲಿಲ್ಲ.
ಹುಡುಕಾಟ ನಡೆಸಿದಾಗ ಶುಕ್ರವಾರ ಮನೆಯ ಹಿಂಭಾಗದಲ್ಲಿರುವ ತೋಟದ ಮರಕ್ಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.
ಪ್ರದೀಪ್ ಆತ್ಮಹತ್ಯೆ ಮಾಡಿಕೊಂಡ ವಿಚಾರವಾಗಿ ಪೊನ್ನಂಪೇಟೆ ತಾಲೂಕು ತಹಶೀಲ್ದಾರ್ ಪ್ರಶಾಂತ್ ಪ್ರತಿಕ್ರಿಯೆ ನೀಡಿ, ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಬಗ್ಗೆ ಮನೆಯವರು ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಸಂಬAಧಿಸಿದ ಇಲಾಖೆಯ ಅಧಿಕಾರಿಗಳೊಂದಿಗೆ ಸತ್ಯಸತ್ಯತೆ ಬಗ್ಗೆ ಮಾಹಿತಿ ಕಲೆ ಹಾಕಿ ಹಿರಿಯ ಅಧಿಕಾರಿಗಳಿಗೆ ವರದಿ ನೀಡಲಾಗುತ್ತದೆ ಎಂದರು.
ಗೋಣಿಕೊಪ್ಪ ಪೋಲಿಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳ ಪರಿಶೀಲನೆ ನಡೆಸಿದರು. ನಂತರ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. - ಹೆಚ್.ಕೆ.ಜಗದೀಶ್