ಮಡಿಕೇರಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಮೂರ್ನಾಡು ಪ್ರಾಥಮಿಕ ಆರೋಗ್ಯ ಕೇಂದ್ರ ಇವರ ಸಹಯೋಗದೊಂದಿಗೆ ಸ್ತನ್ಯಪಾನ ಸಪ್ತಾಹ ಮತ್ತು ಶಿಶು ಪ್ರದರ್ಶನ ಕಾರ್ಯಕ್ರಮ ಎಂ. ಬಾಡಗ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು.
ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಅವರು ಸ್ತನ್ಯಪಾನ ಸಪ್ತಾಹವನ್ನು ಆಗಸ್ಟ್ ಏಳರವರೆಗೆ ಎಲ್ಲಾ ಅಂಗನವಾಡಿ ಕೇಂದ್ರದಲ್ಲಿ ನಡೆಸಲಾಗಿದೆ ಎಂದರು.
ನಂತರ ಸ್ತನ್ಯಪಾನದ ಮಹತ್ವದ ಬಗ್ಗೆ, ಪೌಷ್ಟಿಕ ಆಹಾರ, ವ್ಯಾಯಾಮದ ಕುರಿತು ಹಾಗೂ ಮಾನಸಿಕ ಮತ್ತು ದೈಹಿಕ ಆರೋಗ್ಯದ ಬಗ್ಗೆ ವಿವರವಾಗಿ ಮಾಹಿತಿ ನೀಡಿದರು.
ತೂಕದ ಮಹತ್ವ ಮತ್ತು ಇಲಾಖೆಯಿಂದ ದೊರಕುವ ಸೌಲಭ್ಯಗಳ ಬಗ್ಗೆ ವಿವರಿಸಿದರು. ಅಂಗನವಾಡಿಯಲ್ಲಿ ದೊರಕುವ ಆಹಾರಗಳನ್ನು ಕೇಂದ್ರದಲ್ಲಿಯೇ ಪರಿಶೀಲಿಸಿ ಪಡೆಯಲು ತಿಳಿಸಿದರು.
ಪ್ರಾಥಮಿಕ ಆರೋಗ್ಯ ಸುರಕ್ಷಣಾಧಿಕಾರಿ ಲಲಿತಾ ಅವರು ಶಿಶು ಪ್ರದರ್ಶನ ಕಾರ್ಯಕ್ರಮದ ಉದ್ದೇಶಗಳನ್ನು ವಿವರವಾಗಿ ತಿಳಿಸುತ್ತಾ, ಮೈಲಿಗಲ್ಲುಗಳ ಬಗ್ಗೆ, ಲಸಿಕಾ ಕರಣದ ಬಗ್ಗೆ ವಿವರವಾಗಿ ತಿಳಿಸಿದರು.
ಶಿಶು ಪ್ರದರ್ಶನದಲ್ಲಿ ಪ್ರಾದ್ವಿ (ಪ್ರಥಮ ಸ್ಥಾನ) ದಿಶಾ (ದ್ವಿತೀಯ ಸ್ಥಾನ) ಅದ್ವಿತ್ (ತೃತೀಯ ಸ್ಥಾನ) ಪಡೆದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಗರ್ಭಿಣಿ ಬಾಣಂತಿ ಮತ್ತು ಮಕ್ಕಳ ಪೌಷ್ಟಿಕ ಮಟ್ಟವನ್ನು ಗುರುತಿಸಲಾಯಿತು.
ಕಿರಿಯ ಪ್ರಾಥಮಿಕ ಶಾಲೆ ಬಾಡಗದ ಮುಖ್ಯ ಶಿಕ್ಷಕರಾದ ಯಮುನಾ, ಸಹ ಶಿಕ್ಷಕಿ ಕುಮುದಿನಿ, ಆಶಾ ಕಾರ್ಯಕರ್ತೆ ಚಂದ್ರಿಕಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಬಾಡಗ ೨ ಅಂಗನವಾಡಿ ಕಾರ್ಯಕರ್ತೆ ಭವ್ಯ ಬಿ.ಆರ್. ಸ್ವಾಗತಿಸಿದರು. ಬಾಡಗ ೧ ಅಂಗನವಾಡಿ ಕಾರ್ಯಕರ್ತೆ ಜಯಂತಿ ಬಿ.ಬಿ ವಂದಿಸಿದರು.*ಗೋಣಿಕೊಪ್ಪ: ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ತಿತಿಮತಿ ಆನೆಪಂದಿ ಅಂಗನವಾಡಿ ಕೇಂದ್ರದಲ್ಲಿ ನಡೆಯಿತು. ಸ್ವಾಮಿ ವಿವೇಕಾನಂದ ಯೂಥ್ ಮೂಮೆಂಟ್ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ತಿತಿಮತಿ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಎದೆಹಾಲಿನ ಮಹತ್ವದ ಬಗ್ಗೆ ಆರೋಗ್ಯ ಕೇಂದ್ರದ ಸಿಎಚ್‌ಓ ಪವಿತ್ರ ಮಾಹಿತಿ ನೀಡಿದರು.
ವಿವೇಕಾನಂದ ಯೂಥ್ ಮೂಮೆಂಟ್ ಸಂಚಾಲಕ ಬೋರಪ್ಪ, ಕಿರಿಯ ಆರೋಗ್ಯ ಸಹಾಯಕಿ ನೈದಿಲೆ, ವಿವೇಕಾನಂದ ಸಂಸ್ಥೆಯ ಮೇಲ್ವಿಚಾರಕರಾದ ಹೇಮ, ಪ್ರದೀಪ್ ಅಂಗನವಾಡಿ ಕಾರ್ಯಕರ್ತರುಗಳಾದ ಪಾರ್ವತಿ, ಶಿಲ್ಪ, ಯೋಗೇಶ್ವರಿ, ಸೀತೆ, ನೇತ್ರ, ಆಶಾ ಕಾರ್ಯಕರ್ತರುಗಳಾದ ರಾಣಿ, ರತ್ನಕುಮಾರಿ ಮತ್ತು ಹಾಡಿಯ ನಿವಾಸಿಗಳು ಇದ್ದರು.ಸುಂಟಿಕೊಪ್ಪ: ಶಿಶು ಜನಿಸಿದ ಅರ್ಧ ಗಂಟೆಯೊಳಗೆ ತಾಯಿಯು ಸ್ತನ್ಯಪಾನ ನೀಡುವುದರಿಂದ ಶಿಶು ಮರಣವನ್ನು ತಪ್ಪಿಸಬಹುದು. ಅಲ್ಲದೆ ತಾಯಿಯ ಎದೆಹಾಲು ಅಮೃತಕ್ಕೆ ಸಮನವಾಗಿರುತ್ತದೆ ಎಂದು ಆರೋಗ್ಯ ಕಾರ್ಯಕರ್ತೆ ಲತಾ ಕುಮಾರಿ ಹೇಳಿದರು.
ಕೊಡಗರಹಳ್ಳಿ ಅಂಗನವಾಡಿ ಕೇಂದ್ರದಲ್ಲಿ ನಡೆದ ಸ್ತನ್ಯಪಾನ ಸಪ್ತಾಹವನ್ನು ಉದ್ದೇಶಿಸಿ ಅವರು ಮಾತನಾಡಿದರು. ಕೊಡಗರಹಳ್ಳಿ ಅಂಗನವಾಡಿ ಕೇಂದ್ರ ಮತ್ತು ಕೊಡಗರಹಳ್ಳಿ ಪ್ರಾಥಮಿಕ ಶಾಲೆಯ ಜಂಟಿ ಆಶ್ರಯದಲ್ಲಿ ಕೇಂದ್ರ ಸರಕಾರದ ಈ ಯೋಜನೆ ಮತ್ತು ಸೆಪ್ಟೆಂಬರ್ ತಿಂಗಳಿನಲ್ಲಿ ನಡೆಸಲಾಗುವ ಪೋಷಣ್ ಮಾಸಾಚರಣೆಯ ಮಹತ್ವದ ಕುರಿತು ವಿಸ್ತಾರವಾಗಿ ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗ್ರಾಮ ಪಂಚಾಯಿತಿ ಸದಸ್ಯೆ ನೀತಾ ಹರೀಶ್ ಮಾತನಾಡಿ, ಎದೆಹಾಲು ನೀಡುವುದು ಪ್ರತಿ ಮಾತೆಯರ ಆದ್ಯ ಕರ್ತವ್ಯವಾಗಿದೆ. ತಾಯಿ ಸ್ತನ್ಯಪಾನವನ್ನು ಯಾರು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ತಾಯಿ ಮಗುವಿನ ಬಾಂಧವ್ಯವನ್ನು ಹೆಚ್ಚಿಸುತ್ತದೆ. ಸ್ತನ್ಯಪಾನ ನೀಡುವುದರಿಂದ ಶಿಶುವು ಸದೃಢ, ಆರೋಗ್ಯವಂತಾರಾಗಿ ಬೆಳೆಯಲು ಸಾಧ್ಯವಾಗಲಿದೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರವೀಶ್ ಅವರು ವಹಿಸಿ ಮಾತನಾಡಿ, ಸ್ತನ್ಯಪಾನ ಸೇರಿದಂತೆ ತಾಯಿ ಮತ್ತು ಶಿಶುವಿನ ಹಾರೈಕೆಯ ದಿಸೆಯಲ್ಲಿ ಸರಕಾರವು ಹಲವು ಯೋಜನೆಗಳ ಮುಖಾಂತರ ಪೌಷ್ಟಿಕಾಂಶದ ಆಹಾರವನ್ನು ನೀಡುತ್ತಿದೆ ಎಂದರು.
ಕಾರ್ಯಕ್ರಮ ವೇದಿಕೆಯಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಕವಿತ, ಸದಸ್ಯೆ ಚೆನ್ನಬಸವಿ, ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಟಿ.ಎಲ್. ಸುಮ, ಸಮುದಾಯ ಆರೋಗ್ಯ ಕೇಂದ್ರದ ಅಧಿಕಾರಿ ಟೆನ್ನಿ ಥೋಮಸ್, ಅಂಗನವಾಡಿ ಕಾರ್ಯಕರ್ತೆ ಎಸ್.ಎನ್. ಸಾವಿತ್ರಿ, ಆಶಾ ಕಾರ್ಯಕರ್ತೆ ಆರ್. ಕವಿತ ಎಂ.ಪಿ. ಗೀತಾ, ಅಂಗನವಾಡಿ ಸಹಾಯಕಿ ಸಂಧ್ಯಾ ಉಪಸ್ಥಿತರಿದ್ದರು.