ಸೋಮವಾರಪೇಟೆ, ಆ. ೧೧: ಮಾದಾಪುರದ ಕಾರು ನಿಲ್ದಾಣದಲ್ಲಿ ನಿಂತಿದ್ದ ವ್ಯಕ್ತಿಯೋರ್ವರಿಗೆ ಪಿಕ್‌ಅಪ್ ವಾಹನ ಡಿಕ್ಕಿಯಾದ ಪರಿಣಾಮ ತೀವ್ರ ಗಾಯಗಳೊಂದಿಗೆ ಮಡಿಕೇರಿ ಜಿಲ್ಲಾಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ.

ಮಾದಾಪುರದ ಜಂಬೂರು ಎಫ್‌ಎಂಸಿ ಬಡಾವಣೆ ನಿವಾಸಿ, ಪತ್ರಿಕೆಗಳ ಏಜೆಂಟರೂ ಆಗಿರುವ ಕೆ.ಬಿ. ಚಂದ್ರಶೇಖರ್ ಅವರು ನಿನ್ನೆ ದಿನ ದಿನಪತ್ರಿಕೆಗಳನ್ನು ವಿತರಿಸಿ ತಮ್ಮ ಕಾರಿನ ಬಳಿ ಬರುತ್ತಿದ್ದ ಸಂದರ್ಭ, ಮಾದಾಪುರದ ಸಬೀದ್ ಎಂಬಾತ ಅಜಾಗರೂಕತೆ ಮತ್ತು ನಿರ್ಲಕ್ಷö್ಯದಿಂದ ಪಿಕ್‌ಅಪ್ (ಕೆಎ೧೨ ಬಿ೯೫೦೬) ವಾಹನವನ್ನು ಹಿಮ್ಮುಖವಾಗಿ ಚಾಲಿಸಿ ಡಿಕ್ಕಿ ಪಡಿಸಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಪಿಕ್‌ಅಪ್ ಡಿಕ್ಕಿಯಾದ ರಭಸಕ್ಕೆ ಚಂದ್ರಶೇಖರ್ ಅವರು ಕೆಳಬಿದ್ದಿದ್ದು, ಪರಿಣಾಮ ಭುಜ, ಕಾಲು, ಸೊಂಟ, ಕೈಗಳಿಗೆ ತೀವ್ರ ಪೆಟ್ಟಾಗಿದೆ. ತಕ್ಷಣ ಮಡಿಕೇರಿ ಜಿಲ್ಲಾಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ವಾಹನ ಚಾಲಕ ಸಬೀದ್ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ವಾಹನವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ