ವೀರಾಜಪೇಟೆ, ಆ. ೧೧: ವೀರಾಜಪೇಟೆ ಪಟ್ಟಣದ ಸುಣ್ಣದ ಬೀದಿಯಲ್ಲಿರುವ ಶ್ರೀ ತುಳಸಿ ಮಾರಿಯಮ್ಮ ದೇವಸ್ಥಾನದ ಒಳ ನುಗ್ಗಿದ ಕಳ್ಳರು ದೇವರ ಹುಂಡಿಯ ಬೀಗ ಒಡೆದು ಅಂದಾಜು ರೂ. ೨೦ ಸಾವಿರಕ್ಕೂ ಹೆಚ್ಚು ಕಾಣಿಕೆ ಹಣವನ್ನು ದೋಚಿದ್ದಾರೆ ಎಂದು ದೇವಾಲಯದ ಅರ್ಚಕ ಪ್ರತಾಪ್ ಅವರು ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿದ ನಗರ ಠಾಣೆ ಪೊಲೀಸರು ಮಡಿಕೇರಿಯಿಂದ ಶ್ವಾನದಳ ಮತ್ತು ಬೆರಳಚ್ಚು ತಜ್ಞರನ್ನು ಕರೆಸಿ ಸ್ಥಳ ಮಹಜರು ಮಾಡಿಸಿದ್ದಾರೆ. ಪೊಲೀಸ್ ವೃತ್ತ ನಿರೀಕ್ಷಕ ಬಿ.ಎಸ್.ಶಿವರುದ್ರ ಅವರು ಸ್ಥಳ ಪರಿಶೀಲನೆ ನಡೆಸಿ ದೇವರ ಹುಂಡಿ ಕಳ್ಳನ ಪತ್ತೆಗೆ ಬಲೆಬೀಸಿದ್ದಾರೆ. ಈ ಸಂದರ್ಭ ದೇವಸ್ಥಾನ ಸಮಿತಿ ಅಧ್ಯಕ್ಷ ಪಳನಿ ಪ್ರಕಾಶ್ ಮತ್ತು ಸಮಿತಿ ಸದಸ್ಯರುಗಳು ಹಾಜರಿದ್ದರು.