ಮಡಿಕೇರಿ, ಆ. ೧೧ : ವೀರಾಜಪೇಟೆ ತಾಲೂಕು ಆಸ್ಪತ್ರೆಗೆ ಲೋಕಾಯುಕ್ತ ಡಿವೈಎಸ್‌ಪಿ ಎಂ.ಎಸ್. ಪವನ್‌ಕುಮಾರ್ ಅವರು ಅನಿರೀಕ್ಷಿತವಾಗಿ ಭೇಟಿ ನೀಡಿ ವೀಕ್ಷಿಸಿದರು.

ಆಸ್ಪತ್ರೆಯ ಹೊರ ರೋಗಿಗಳ ವಿಭಾಗದಲ್ಲಿ ಚಿಕಿತ್ಸೆ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಚೀಟಿಗಾಗಿ ಸಾಲುಗಟ್ಟಿ ನಿಂತಿದ್ದ ಸಾರ್ವಜನಿಕರನ್ನು ಗಮನಿಸಿದ ಲೋಕಾಯುಕ್ತ ಡಿವೈಎಸ್‌ಪಿ ಅವರು ಹೆಚ್ಚಿನ ಕೌಂಟರ್ ತೆರೆಯುವಂತೆ ವೈದ್ಯಾಧಿಕಾರಿಗೆ ಸೂಚಿಸಿದರು.

ವೀರಾಜಪೇಟೆ ಸರ್ಕಾರಿ ಆಸ್ಪತ್ರೆಗೆ ಪ್ರತಿನಿತ್ಯ ಸಾರ್ವಜನಿಕರು ಔಷಧಿ ಪಡೆಯಲು ಬರುತ್ತಾರೆ. ಸೂಕ್ತ ಚಿಕಿತ್ಸೆ ಮತ್ತು ಸ್ಪಂದನ ದೊರೆಯಬೇಕು.

ಬೆಳಿಗ್ಗೆ ೯.೩೦ ಗಂಟೆ ವೇಳೆಗೆ ಕೆಲವು ವೈದ್ಯಾಧಿಕಾರಿಗಳು ಆಸ್ಪತ್ರೆಗೆ ಹಾಜರಾಗದಿರುವುದಕ್ಕೆ ಅತೃಪ್ತಿ ವ್ಯಕ್ತಪಡಿಸಿದರು. ಸಮಯಕ್ಕೆ ವೈದ್ಯಾಧಿಕಾರಿಗಳು ಆಸ್ಪತ್ರೆಗೆ ಹಾಜರಾಗಿ ಸಾರ್ವಜನಿಕರಿಗೆ ಸ್ಪಂದಿಸಬೇಕು ಎಂದು ಸೂಚಿಸಿದರು.

ತಾಲೂಕು ಆಸ್ಪತ್ರೆಯಲ್ಲಿ ಔಷಧಿಗಾಗಿ ಹೊರಗಡೆಗೆ ಚೀಟಿ ಬರೆಯುತ್ತಾರೆ ಎಂಬ ದೂರುಗಳು ಇದ್ದು, ಇದನ್ನು ಪರಿಹರಿಸಬೇಕು. ಆಸ್ಪತ್ರೆಯಲ್ಲಿ ಔಷಧಿ ಮತ್ತು ಮಾತ್ರೆ ಲಭ್ಯ ಇಲ್ಲದಿದ್ದಲ್ಲಿ ಆಸ್ಪತ್ರೆ ವೆಚ್ಚದಿಂದಲೇ ತರಿಸಿ ಚಿಕಿತ್ಸೆ ನೀಡುವಂತಾಗಬೇಕು. ಯಾವುದೇ ಕಾರಣಕ್ಕೂ ಚೀಟಿಯನ್ನು ಹೊರಗೆ ಬರೆಯಬಾರದು ಎಂದು ನಿರ್ದೇಶನ ನೀಡಿದರು.

ಯಾವುದೇ ಸರ್ಕಾರಿ ವೈದ್ಯರು ಸರ್ಕಾರಿ ಆಸ್ಪತ್ರೆ ಬಿಟ್ಟು ಹೊರಗೆ ಹೋಗಿ ಖಾಸಗಿ ಕ್ಲಿನಿಕ್‌ನಲ್ಲಿ ಕರ್ತವ್ಯ ನಿರ್ವಹಿಸುವುದು ಕಾನೂನು ಬಾಹಿರವಾಗಿದೆ.

ವೀರಾಜಪೇಟೆಯ ತಾಲೂಕು ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಸೇರಿದಂತೆ ಎಲ್ಲಾ ವೈದ್ಯರು ಸಮವಸ್ತçದಲ್ಲಿ ಕರ್ತವ್ಯ ನಿರ್ವಹಿಸಬೇಕು. ಸರಿಯಾದ ಸಮಯಕ್ಕೆ ಹಾಜರಾಗಿ ರೋಗಿಗಳಿಗೆ ಚಿಕಿತ್ಸೆ ನೀಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಧೋರಣೆ ಅನುಸರಿಸಬಾರದು.ಬಡ ಜನರ ಬಗ್ಗೆ ಕರುಣೆ ಇರಬೇಕು. ಯಾವುದೇ ಕಾರಣಕ್ಕೂ ಚಿಕಿತ್ಸೆ ವಿಳಂಬ ಮಾಡದೆ ಆರೋಗ್ಯ ಸೇವೆಯನ್ನು ಒದಗಿಸಬೇಕು ಎಂದರು.

ಅಧಿಕಾರಿಗಳ ಜೊತೆ ಸಭೆ : ಲೋಕಾಯುಕ್ತ ಡಿವೈಎಸ್‌ಪಿ ಎಂ.ಎಸ್. ಪವನ್ ಕುಮಾರ್ ಅವರು ವೀರಾಜಪೇಟೆ ತಾಲೂಕು ತಹಶೀಲ್ದಾರರ ಕಚೇರಿಯಲ್ಲಿ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸಿದರು.

ಸಾರ್ವಜನಿಕರಿಗೆ ತಮ್ಮ ತಮ್ಮ ಇಲಾಖೆ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಸ್ಪಂದಿಸಿ ಕರ್ತವ್ಯ ನಿರ್ವಹಿಸಬೇಕು. ಸರ್ಕಾರದ ಸೌಲಭ್ಯಗಳನ್ನು ತಲುಪಿಸಬೇಕು, ಕಾಮಗಾರಿ ಗುಣಮಟ್ಟದಿಂದ ಕೂಡಿರಬೇಕು. ಯಾವುದೇ ದೂರುಗಳು ಬರದಂತೆ ಕರ್ತವ್ಯ ನಿರ್ವಹಿಸಬೇಕು. ಸರ್ಕಾರದ ಹಣವನ್ನು ಸರಿಯಾಗಿ ಬಳಸಬೇಕು ಎಂದು ಸೂಚಿಸಿದರು. ದೂರು ಸ್ವೀಕಾರ ಸಂದರ್ಭದಲ್ಲಿ ೫ ದೂರುಗಳು ದಾಖಲಾಗಿದ್ದು, ಈ ಸಂಬAಧ ಪರಿಹರಿಸಲಾಗುವುದು ಎಂದು ಪವನ್ ಕುಮಾರ್ ಅವರು ಮಾಹಿತಿ ನೀಡಿದರು. ಲೋಕಾಯುಕ್ತ ಡಿವೈಎಸ್‌ಪಿ ಜೊತೆ ಸಿಬ್ಬಂದಿಗಳು ಇದ್ದರು.