ಕೂಡಿಗೆ, ಆ. ೧೧: ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಕಲಿಕಾ ಆಸಕ್ತಿಯನ್ನು ಹೆಚ್ಚಿಸಿಕೊಳ್ಳಬಹುದು ಎಂದು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್ ಅಭಿಪ್ರಾಯ ವ್ಯಕ್ತಪಡಿಸಿದರು.
ಕೂಡಿಗೆ ಮುರಾರ್ಜಿ ವಸತಿ ಶಾಲೆಯಲ್ಲಿ ನಡೆದ ಕೂಡಿಗೆ ಪ್ರಾಥಮಿಕ ಶಾಲಾ ವಲಯ ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕ್ರೀಡೆಯಲ್ಲಿ ಸೋಲು-ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸಬೇಕು ಎಂದು ಕ್ರೀಡಾಪಟುಗಳಿಗೆ ತಿಳಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಪ್ರಾಂಶುಪಾಲ ಕೆ. ಪ್ರಕಾಶ್ ವಹಿಸಿ ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿ, ಪ್ರಸ್ತುತ ಎಲ್ಲಾ ವಿದ್ಯಾರ್ಥಿಗಳು ಓದುವುದರ ಜೊತೆಗೆ ಕ್ರೀಡೆಯಲ್ಲಿ ಪಾಲ್ಗೊಳ್ಳುವ ಮನೋಭಾವನೆ ಬೆಳೆಸಿಕೊಳ್ಳಬೇಕು ಮುಂದಿನ ಭವಿಷ್ಯದಲ್ಲಿ ಉದ್ಯೋಗಕ್ಕೆ ಸೇರಲು ಕ್ರೀಡೆ ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಕೂಡಿಗೆ ಕ್ಲಸ್ಟರ್‌ನ ಸಂಪನ್ಮೂಲ ವ್ಯಕ್ತಿ ಶಾಂತಕುಮಾರ್ ಮಾತನಾಡಿ, ವಿದ್ಯಾರ್ಥಿಗಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿಯಾಗಲಿದೆ ಎಂದು ತಿಳಿಸಿದರು. ಈ ಸಂದರ್ಭ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಉಪಾಧ್ಯಕ್ಷ ಕುರುಂಬಯ್ಯ, ಸೋಮವಾರಪೇಟೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ರಾಜ್ಯ ಸಮಿತಿಯ ನಿರ್ದೇಶಕ ಯೋಗೇಶ್, ಸೋಮವಾರಪೇಟೆ ತಾಲೂಕು ಜೆ.ಸಿ.ಐ. ಅಧ್ಯಕ್ಷೆ ರುಬಿನ, ದೈಹಿಕ ಶಿಕ್ಷಕರಾದ ನೀಲಪ್ಪ, ಸೋಮಶೇಖರ್, ಶೋಭಾ, ಸುಂದರ್, ಲೋಹಿತ್, ದೊಡ್ಡಯ್ಯ, ಶಿಕ್ಷಕರಾದ ಮಂಜು, ನಾಗೇಂದ್ರ, ದಿನೇಶ್ ಆಚಾರಿ, ಆಸಿಫ್, ಚಿದಂಬರ, ಹರಿಣಾಕ್ಷಿ, ಮೀನಾ ನಿಲಯ ಪಾಲಕ ಜಗದೀಶ್, ಶಾಲಾ ಸಿಬ್ಬಂದಿ ವರ್ಗ ಸೇರಿದಂತೆ ಕೂಡಿಗೆ ವಲಯ ಮಟ್ಟದ ೧೦ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ, ವಾಲಿಬಾಲ್ ಥ್ರೋ ಬಾಲ್, ಕಬಡ್ಡಿ, ಖೋ-ಖೋ, ಪಂದ್ಯಾವಳಿಗಳು ನಡೆದವು.