ಸಿದ್ದಾಪುರ, ಆ. ೧೦: ಮುಂಗಾರು ಮಳೆಯು ಇದೀಗ ಮತ್ತೆ ಕ್ಷೀಣಗೊಂಡಿದ್ದು, ಇದೀಗ ಬಿಸಿಲಿನ ವಾತಾವರಣದಿಂದಾಗಿ ಗದ್ದೆಗಳಲ್ಲಿ ಬಿತ್ತನೇ ಮಾಡಿರುವ ಭತ್ತದ ಬೀಜಗಳು ಮೊಳಕೆ ಬರಲು ವಿಳಂಬವಾಗುವ ಪರಿಸ್ಥಿತಿ ನಿರ್ಮಾಣವಾಗಿದೆ. ಮಳೆಯನ್ನೇ ನಂಬಿ ಕೃಷಿ ಮಾಡುತ್ತಿರುವ ಕೃಷಿಕರಿಗೆ ಮುಂಗಾರು ಮಳೆ ತಡವಾಗಿ ಆರಂಭಗೊAಡು ಕೃಷಿ ಚಟುವಟಿಕೆಗಳೂ ತಡವಾಗಿತ್ತು.
ಕೆಲವು ದಿನಗಳ ಹಿಂದೆ ಸುರಿದ ಮಳೆಗೆ ಸಿದ್ದಾಪುರ ವಿಭಾಗದಲ್ಲಿ ಕಾವೇರಿ ನದಿಯು ಮೈದುಂಬಿ ಹರಿದು ಕೃಷಿಕರಿಗೆ ಮಳೆಯ ನೀರಿನಿಂದಾಗಿ ಕೃಷಿ ಚಟುವಟಿಕೆ ಆರಂಭಿಸಲು ಅನುಕೂಲವಾಯಿತು. ಈ ಹಿನ್ನೆಲೆಯಲ್ಲಿ ಭತ್ತ ಬೆಳೆಯುವ ಕೃಷಿಕರು ಗದ್ದೆಗಳಲ್ಲಿ ಉಳುಮೆ ಮಾಡಿ ಭತ್ತದ ಬೀಜಗಳನ್ನು ಬಿತ್ತನೆ ಮಾಡಿದರು. ಪ್ರಾರಂಭದಲ್ಲಿ ಬಿತ್ತನೇ ಮಾಡಿದ ಕೃಷಿಕರು ಬೆಳೆದ ಪೈರುಗಳಿಂದ ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಇನ್ನು ಬಹುತೇಕ ಕೃಷಿಕರು ಕಳೆದ ಕೆಲವು ದಿನಗಳ ಹಿಂದಷ್ಟೇ ಭತ್ತದ ಬೀಜಗಳನ್ನು ಬಿತ್ತನೇ ಮಾಡಿದ್ದು, ಇದೀಗ ಅವುಗಳ ಬಿಸಿಲಿನ ತಾಪಕ್ಕೆ ಮೊಳಕೆ ಬರಲು ವಿಳಂಬವಾಗುತ್ತಿದೆ. ಗದ್ದೆಗಳ ಸುತ್ತಮುತ್ತಲು ತೋಡು ಕೆರೆಗಳು ಇರುವ ಕೃಷಿಕರಿಗೆ ಬೆಳೆ ಬೆಳೆಯಲು ಅನುಕೂಲವಾಗುತ್ತಿದೆ. ಆದರೆ ಮಳೆಯನ್ನೇ ಅವಲಂಬಿಸಿಕೊAಡಿರುವ ಕೃಷಿಕರಿಗೆ ಸಮಸ್ಯೆಯಾಗಿದೆ. ಈತನ್ಮಧ್ಯೆ ಕರಿಮೆಣಸಿನ ಬಳ್ಳಿಗಳಲ್ಲಿ ಕಾಯಿಗಳು ಮಣಿಕಟ್ಟುತ್ತಿದ್ದು, ಮಳೆಯ ಅಗತ್ಯವಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನೆಲ್ಲಿಹುದಿಕೇರಿ ಗ್ರಾಮದ ಕೃಷಿ ಟಿ.ಟಿ. ಉದಯಕುಮಾರ್ ಮಳೆಯನ್ನು ನಂಬಿ ಗದ್ದೆಗೆ ಭತ್ತದ ಬೀಜ ಬಿತ್ತನೆ ಮಾಡಿದ್ದು, ಬಿಸಿಲಿನಿಂದಾಗಿ ಮೊಳಕೆ ಬರಲು ಸಮಸ್ಯೆಯಾಗಿದೆ. ಮುಂದೇನು ಮಾಡುವುದು ಎಂಬ ಚಿಂತೆ ಕಾಡುತ್ತಿದೆ. -ವಾಸು