ಮಡಿಕೇರಿ, ಆ. ೯: ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ಆಶ್ರಯದಲ್ಲಿ ವಿಶ್ವ ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮ ಮಾಲ್ದಾರೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಯಿತು.
ಪ್ರಾಥಮಿಕ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಾಯಮ್ಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಹೆರಿಗೆ ಪ್ರಮಾಣ ಹೆಚ್ಚಾಗಿದ್ದರೂ ಸಹ ತಾಯಿ - ಮಗುವಿಗೆ ಎದೆ ಹಾಲು ಕುಡಿಸುವ ಪ್ರಮಾಣ ಕಡಿಮೆ ಆಗಿದೆ. ಮಗುವಿಗೆ ೬ ತಿಂಗಳವರೆಗೆ ಕೇವಲ ಎದೆ ಹಾಲನ್ನು ಮಾತ್ರ ಉಣಿಸಬೇಕು. ಇದರಿಂದ ಶಿಶುಗಳಿಗೆ ಬರುವಂತಹ ಸೋಂಕು ರೋಗಗಳನ್ನು ತಡೆಗಟ್ಟಿ, ಶಿಶು ಮರಣಗಳನ್ನು ತಪ್ಪಿಸಬಹುದು ಎಂದರು.
ಸ್ವಾಮಿ ವಿವೇಕಾನಂದ ಯೂತ್ ಮೂಮೆಂಟ್ ನ ಕೊಡಗು ಶಾಖೆಯ ಕುಸುಮ ಮಾತನಾಡಿ ಮಗು ಜನಿಸಿದ ಒಂದು ಗಂಟೆಯೊಳಗೆ ಸ್ತನ್ಯಪಾನ ಪ್ರಾರಂಭಿಸಬೇಕು ಇದು ಮಗುವಿಗೆ ಮೊದಲ ಲಸಿಕೆ. ಎದೆ ಹಾಲು ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ ಮತ್ತು ಸ್ತನ್ಯಪಾನದಿಂದ ಶಿಶು ಮರಣವನ್ನು ತಪ್ಪಿಸಬಹುದು ಎಂದು ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ವಿವೇಕಾನಂದ ಯೂತ್ ಮೂಮೆಂಟ್ನ ಕೃತಿ ಮುತ್ತಪ್ಪ, ವಲ್ಸ , ಜ್ಯೋತಿ, ಸುದರ್ಶನ್, ವಿದ್ಯಾ, ಆಶಾಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.