ವೀರಾಜಪೇಟೆ, ಆ. ೯: ಭತ್ತದ ಕೃಷಿಯಲ್ಲಿ ಯಾಂತ್ರೀಕರಣ ಅಳವಡಿಕೆಯಿಂದ ದುಬಾರಿ ವೆಚ್ಚವನ್ನು ಕಡಿಮೆ ಮಾಡಿ ಹೆಚ್ಚಿನ ಆದಾಯವನ್ನು ಪಡೆದುಕೊಳ್ಳಬಹುದು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ಮೇಲ್ವಿಚಾರಕ ಹರೀಶ್ ಹೇಳಿದರು.
ಅರಮೇರಿಯ ೪ನೇ ಮೈಲಿನ ಕಾವೇರಿ ಸಂಘದ ಸಭಾಂಗಣದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ.ಸಿ. ಟ್ರಸ್ಟ್ ಹಾಗೂ ಅಮ್ಮತ್ತಿ ಕೃಷಿ ಯಂತ್ರದಾರೆ ಸಹಯೋಗದಲ್ಲಿ ಯಾಂತ್ರೀಕೃತ ಭತ್ತ ನಾಟಿ ಪ್ರಾತ್ಯಕ್ಷಿಕೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಭತ್ತದ ಗದ್ದೆಯಲ್ಲಿ ವಾಣಿಜ್ಯ ಬೆಳೆಗಳಾದ ಕಾಫಿ, ಅಡಿಕೆ ಬೆಳೆಯನ್ನು ಬೆಳೆಯಲಾಗುತ್ತಿದೆ. ಹಿಂದಿನ ಪದ್ಧತಿಯಲ್ಲಿ ಭತ್ತದ ಕೃಷಿಯನ್ನು ಮಾಡಿದರೆ ಹೆಚ್ಚು ದುಬಾರಿ ಆಗಿರುವುದರಿಂದ ಯಾಂತ್ರೀಕತೆಯ ಮೂಲಕ ಭತ್ತದ ಕೃಷಿಯನ್ನು ನಿರ್ವಹಿಸಿದರೆ ಹೆಚ್ಚಿನ ಲಾಭ ಗಳಿಸಬಹುದು ಎಂದು ಹೇಳಿದರು.
ಗೋಣಿಕೊಪ್ಪಲು ಕೆ.ವಿ.ಕೆ ಯ ವಿಷಯ ತಜ್ಞ ಪ್ರಭಾಕರ್ ಮಾತನಾಡಿ, ಭತ್ತದ ಕೃಷಿಯಲ್ಲಿ ಪ್ರಾರಂಭದಲ್ಲಿ ಮಣ್ಣಿನ ಪರೀಕ್ಷೆ ಮಾಡುವುದರ ಬಗ್ಗೆ ಕೃಷಿ ಯಂತ್ರಗಳ ಬಳಕೆ, ಬಿತ್ತನೆ ಬೀಜಕ್ಕೆ ಬೀಜೋಪಚಾರ ಸಸಿಮಡಿಗಳನ್ನು ಸಿದ್ಧಪಡಿಸುವದು, ಭತ್ತದ ಸಸಿಗಳಿಗೆ ತಗಲುವ ಹಲವು ರೋಗ ಮತ್ತು ಕೀಟಬಾಧೆ ನಿರ್ವಹಣೆ ಮಾಡುವ ಕ್ರಮ, ಅಲ್ಲದೇ ನಾಟಿ ಮಾಡುವಾಗ ಅನುಸರಿಸಬೇಕಾದ ಕ್ರಮಗಳು ಮತ್ತು ಭತ್ತದ ಕಟಾವು ಮಾಡುವ ಬಗ್ಗೆ ರೈತರಿಗೆ ಸಲಹೆಗಳನ್ನು ನೀಡಿದರು.
ಕೃಷಿಕ ಉದಿಯಂಡ ಚಂಗಪ್ಪ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ ಇಂದಿನ ಆಧುನಿಕ ಯುಗದಲ್ಲಿ ಯಾಂತ್ರೀಕೃತ ಭತ್ತನಾಟಿ ಹಾಗೂ ಕೃಷಿಗೆ ಬಳಸುವ ಹಲವು ಯಂತ್ರಗಳ ಬಗ್ಗೆ ಕೃಷಿಕರಿಗೆ ತುಂಬಾ ಉಪಯೋಗವಾಗುತ್ತಿದ್ದು, ಇದನ್ನು ಸಮರ್ಪಕ ರೀತಿಯಲ್ಲಿ ಬಳಸಿಕೊಂಡರೆ ಉತ್ತಮ ಇಳುವರಿಯನ್ನು ಕಂಡುಕೊಳ್ಳಬಹುದು. ಇಂತಹ ಯಾಂತ್ರೀಕೃತ ಭತ್ತನಾಟಿಯಿಂದ ಹಡಲು ಬಿಟ್ಟಿರುವ ಗದ್ದೆಗಳಿಗೆ ಮರುಜೀವ ನೀಡಬಹುದಾಗಿದೆ ಎಂದು ಹೇಳಿದರು.
ಕದನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಮುಂಡಚಾಡಿರ ಭರತ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಕಾಡು ಬೆಳೆಸಿ ಭೂಮಿ ಉಳಿಸಿ ಎಂಬ ಧ್ಯೇಯವಾಕ್ಯದೊಂದಿಗೆ ರೈತರಿಗೆ ಅರಣ್ಯ ಸಸಿಗಳನ್ನು ವಿತರಿಸಲಾಯಿತು.