ಮಡಿಕೇರಿ, ಆ. ೯: ಜಿಲ್ಲೆಯಲ್ಲಿ ವ್ಯತಿರಿಕ್ತ ವಾತಾವರಣದಿಂದಾಗಿ ಕಾಫಿ ಫಸಲು ಉದುರುವಿಕೆ ಹಾಗೂ ಕೊಳೆರೋಗ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇದೀಗ ವಿವಿಧ ಇಲಾಖೆಗಳನ್ನು ಒಳಗೊಂಡAತೆ ಜಂಟಿ ಸಮೀಕ್ಷೆ ನಡೆಯುತ್ತಿದ್ದು, ಈ ಕಾರ್ಯ ಮುಂದುವರಿಯುತ್ತಿದೆ. ಆರಂಭದಲ್ಲಿ ಕೇವಲ ಕಾಫಿ ಮಂಡಳಿಯ ಮೂಲಕ ಆರಂಭಿಕ ಸಮೀಕ್ಷೆ ನಡೆಸಲಾಗುತ್ತಿತ್ತು. ಇದೀಗ ಜಿಲ್ಲಾಧಿಕಾರಿಗಳ ನಿರ್ದೇಶನದ ಅನ್ವಯ ಕಾಫಿ ಮಂಡಳಿ, ತೋಟಗಾರಿಕಾ ಇಲಾಖೆ, ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡAತೆ ತಂಡವನ್ನು ರಚಿಸಲಾಗಿದ್ದು ಈ ತಂಡ ಸೋಮವಾರದಿಂದ ಜಿಲ್ಲೆಯ ವಿವಿಧೆಡೆಗಳಲ್ಲಿ ಜಂಟಿಯಾಗಿ ಪರಿಶೀಲನೆ ನಡೆಸುತ್ತಿದೆ. ಈ ಬಗ್ಗೆ ಕಾಫಿ ಮಂಡಳಿಯ ಹಿರಿಯ ಅಧಿಕಾರಿಗಳೂ ಮಂಡಳಿಗೆ ಪತ್ಯೇಕ ಸೂಚನೆಯನ್ನು ನೀಡಿದೆ. ಪ್ರಸ್ತುತ ವಿವಿಧ ಹೋಬಳಿ ಮಟ್ಟದಲ್ಲಿ ಈ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ತೋಟಗಳಿಗೆ ಭೇಟಿ ನೀಡಿ ವರದಿ ತಯಾರಿಸುತ್ತಿದ್ದಾರೆ. ಪ್ರಸ್ತುತ ಮಳೆಗಾಲ ಮುಗಿದಿಲ್ಲವಾದರೂ ಇದೀಗ ಪ್ರಾಥಮಿಕ ಹಂತವಾಗಿ ಪರಿಶೀಲಿಸಲಾಗುತ್ತಿದೆ. ಅಗತ್ಯಬಿದ್ದರೆ ಮುಂದಿನ ದಿನಗಳಲ್ಲೂ ಮತ್ತೊಂದು ಹಂತದಲ್ಲಿ ಪರಿಶೀಲನೆ ನಡೆಸಲು ಕ್ರಮಕೈಗೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿರುವುದಾಗಿ ಕಾಫಿ ಮಂಡಳಿಯ ಉಪನಿರ್ದೇಶಕರಾದ ಡಾ. ಚಂದ್ರಶೇಖರ್ ಅವರು ಮಾಹಿತಿ ನೀಡಿದ್ದಾರೆ.