ಚೆಯ್ಯAಡಾಣೆ, ಆ. ೯: ವೀರಾಜಪೇಟೆ ಅರಣ್ಯ ವಲಯದ ವ್ಯಾಪ್ತಿಯ ಚೆಯ್ಯಂಡಾಣೆ , ನರಿಯಂದಡ, ಕೊಕೇರಿ, ಚೇಲಾವರ, ಕರಡ, ಅರಪಟ್ಟು, ಪೊದವಾಡ ಹಾಗೂ ಮರಂದೋಡ ಗ್ರಾಮಗಳ ತೋಟಗಳಲ್ಲಿ ಬೀಡು ಬಿಟ್ಟು ಫಸಲು ಹಾಗೂ ಗಿಡಗಳನ್ನು ತುಳಿದು ನಾಶಪಡಿಸುತ್ತಿದ್ದ ೮ ಕಾಡಾನೆಗಳ ಹಿಂಡನ್ನು ಕಾಡಿಗೆ ಅಟ್ಟುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಯಿತು.

ಕಾರ್ಯಾಚರಣೆಯಲ್ಲಿ ವೀರಾಜಪೇಟೆ, ಅಮ್ಮತ್ತಿ ಅರಣ್ಯ ವಲಯ ಹಾಗೂ ಆನೆಕ್ಷಿಪ್ರ ಕಾರ್ಯಪಡೆಯ ತಂಡಗಳು ಜಂಟಿಯಾಗಿ ೨ ದಿನ ಕಾರ್ಯಚರಣೆ ನಡೆಸಿ ಹಿಂಡನ್ನು ಬಲ್ಯಾಯಾಟ್ರ ಕಾಡಿಗೆ ಓಡಿಸಿದರು.

ಒಟ್ಟು ೩೦ ಕ್ಕೂ ಹೆಚ್ಚು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆನೆಗಳನ್ನು ಕಾಡಿಗಟ್ಟಲು ಅರಣ್ಯ ಇಲಾಖೆ ಹರಸಾಹಸಪಟ್ಟರು. ಆನೆ ಓಡಿಸುವ ಸಂದರ್ಭ ಸಿಬ್ಬಂದಿಗಳನ್ನೇ ಆನೆ ಬೆನ್ನೆಟ್ಟಿಸಿದ ಘಟನೆ ಕೂಡ ನಡೆಯಿತು.

೩ ಅಥವಾ ೪ ಕಾಡಾನೆ ತೋಟಗಳಲ್ಲಿ ಇನ್ನೂ ಬೀಡುಬಿಟ್ಟಿವೆ. ಅದನ್ನು ಕೂಡ ಕಾಡಿಗಟ್ಟಲಾಗುವುದು ಹಾಗೂ ತಾ. ೧೦ ರಂದು (ಇಂದು) ಕೂಡ ಕಾರ್ಯಾಚರಣೆ ಮುಂದುವರಿಯಲಿದೆ ಎಂದು ವೀರಾಜಪೇಟೆ ವಲಯ ಅರಣ್ಯಧಿಕಾರಿ ಕಳ್ಳೀರ ದೇವಯ್ಯ ಮಾಹಿತಿ ನೀಡಿದರು

ನಿನ್ನೆ ಕಾರ್ಯಾಚರಣೆ ತಂಡ ಕುಂಜಿಲ ಕಕ್ಕಬೆ ಗ್ರಾಮಪಂಚಾಯಿತಿಗೆ ಒಳಪಟ್ಟ ಮರಂದೋಡ ಗ್ರಾಮದಲ್ಲಿ ಬೀಡು ಬಿಟ್ಟಿದ್ದ ೮ ಕಾಡಾನೆಯ ಹಿಂಡನ್ನು ಪಟಾಕಿ, ಕೇಕೆ ಹಾಕಿ, ಗಾಳಿಯಲ್ಲಿ ಗುಂಡು ಹಾರಿಸಿ ಬಲ್ಯಾಯಾಟ್ರ ಬೆಟ್ಟಕ್ಕೆ ಓಡಿಸಿತ್ತು. ಕಾರ್ಯಾಚರಣೆಯನ್ನು ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಂ.ಶರಣ ಬಸಪ್ಪ ಮಾರ್ಗದರ್ಶನದಲ್ಲಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ.ನೆಹರು, ವೀರಾಜಪೇಟೆ ವಲಯ ಅರಣ್ಯಧಿಕಾರಿ ಕಳ್ಳೀರ ದೇವಯ್ಯ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಫಾರೆಸ್ಟರ್‌ಗಳಾದ ಅನಿಲ್, ಆನಂದ್, ಅರಣ್ಯ ಆನೆ ಕ್ಷಿಪ್ರ ಕಾರ್ಯಪಡೆ ತಂಡ, ಕೆದಮುಳ್ಳೂರು ಹಾಗೂ ಚೆಯ್ಯಂಡಾಣೆ ಕ್ಯಾಂಪ್ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು. -ಅಶ್ರಫ್