*ಗೋಣಿಕೊಪ್ಪ, ಆ. ೮ : ಪೊನ್ನಂಪೇಟೆ ಹಿಂದೂ ಜಾಗರಣಾ ವೇದಿಕೆ ವತಿಯಿಂದ ತಾ. ೧೦ ರಂದು ಅಖಂಡ ಭಾರತ ಸಂಕಲ್ಪ ದಿನಾಚರಣೆ ನಡೆಸಲಾಗುವುದು ಎಂದು ವೇದಿಕೆಯ ಪೊನ್ನಂಪೇಟೆ ನಗರ ಅಧ್ಯಕ್ಷ ಪುತ್ತಾಮನೆ ಅನಿಲ್ ಪ್ರಸಾದ್ ತಿಳಿಸಿದರು.

ಸಂಘ ಪರಿವಾರದ ಸಹಯೋಗ ದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಬೆಳಿಗ್ಗೆ ೯.೩೦ಕ್ಕೆ ಗೋಣಿಕೊಪ್ಪದಿಂದ ಪೊನ್ನಂಪೇಟೆವರೆಗೆ ವಾಹನ ಜಾಥಾ, ನಂತರ ಬೆಳಿಗ್ಗೆ ೧೧ ಗಂಟೆಗೆ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗೋಣಿಕೊಪ್ಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಆವರಣದಿಂದ ದ್ವಿಚಕ್ರ, ಆಟೋ, ನಾಲ್ಕು ಚಕ್ರದ ವಾಹನಗಳು ಜಾಥಾ ಮೂಲಕ ಗೋಣಿಕೊಪ್ಪ ಬಸ್ ನಿಲ್ದಾಣ, ಬೈಪಾಸ್ ರಸ್ತೆ ಮೂಲಕ ಪೊನ್ನಂಪೇಟೆ ಕೊಡವ ಸಮಾಜಕ್ಕೆ ತೆರಳಲಿದೆ. ಕೊಡವ ಸಮಾಜ ಸಭಾಂಗಣದಲ್ಲಿ ಹಿಂದೂ ಜಾಗರಣ ವೇದಿಕೆ ಪ್ರಾಂತ ಕಾರ್ಯಕಾರಿಣಿ ಕೆ.ಟಿ. ಉಲ್ಲಾಸ್ ಮುಖ್ಯ ಭಾಷಣ ಮಾಡಲಿದ್ದಾರೆ. ಕೊಡವ ಸಮಾಜ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಪಾಲ್ಗೊಳ್ಳುವ ದ್ವಿಚಕ್ರ ಸವಾರರು ಕಡ್ಡಾಯವಾಗಿ ಹೆಲ್ಮೇಟ್ ಧರಿಸಬೇಕಿದೆ ಎಂದು ತಿಳಿಸಿದರು.

ಸ್ವಾತಂತ್ರö್ಯ ದೊರೆತ ಆಗಸ್ಟ್ ೧೪ ರ ಮಧ್ಯರಾತ್ರಿ ಅಖಂಡ ಭಾರತವನ್ನು ತುಂಡರಿಸಿ ತ್ರಿಖಂಡವಾಗಿ ವಿಭಜನೆ ಮಾಡಿದ ದಿನವಾಗಿದೆ. ದೇಶಭಕ್ತರ ತ್ಯಾಗ, ಬಲಿದಾನಕ್ಕೆ ದ್ರೋಹ ಎಸಗಿದ ದಿನವಾಗಿ ಆಚರಿಸಲಾಗುತ್ತಿದೆ. ಬಲಿದಾನಕ್ಕೆ ಸೂಕ್ತ ನ್ಯಾಯ ದೊರಕಿಸಿಕೊಡಲು ಹಾಗೂ ಯುವ ಪೀಳಿಗೆಗೆ ಜಾಗೃತಿ ಮೂಡಿಸಲು, ಮಾತೃ ಭೂಮಿಯನ್ನು ಅಖಂಡವಾಗಿ ಕಟ್ಟಲು ಕಾರ್ಯಕ್ರಮ ದೇಶಾದ್ಯಂತ ನಡೆಸಲಾಗುತ್ತಿದೆ. ದೇಶಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ನಿರೀಕ್ಷೆ ಇದೆ ಎಂದರು.

ಗೋಷ್ಠಿಯಲ್ಲಿ ತಾಲೂಕು ಸಂಯೋಜಕ ಅಲ್ಲುಮಾಡ ಶರತ್ ಪೆಮ್ಮಯ್ಯ, ಜಿಲ್ಲಾ ಸಮಿತಿ ಸದಸ್ಯ ಆಲೆಮಾಡ ತಿಮ್ಮಯ್ಯ, ಗೋಣಿಕೊಪ್ಪ ನಗರ ಅಧ್ಯಕ್ಷ ಪೊನ್ನಿಮಾಡ ಜಯಂತ್, ಸದಸ್ಯ ಮುಲ್ಲೇಂಗಡ ಸುಖೇಶ್ ಇದ್ದರು.