ಶನಿವಾರಸAತೆ, ಆ. ೮: ಸಮೀಪದ ಗೌಡಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಳ್ಳಿ ಗ್ರಾಮದಲ್ಲಿ ಶ್ರೀ ಚನ್ನಕೇಶವ ಸಂಘದ ವತಿಯಿಂದ ಚೆನ್ನಕೇಶವ ದೇವರ ದೇವಸ್ಥಾನದ ೩ ಎಕರೆ ಭತ್ತದ ಗದ್ದೆಯಲ್ಲಿ ಗ್ರಾಮಸ್ಥರು ಒಟ್ಟಾಗಿ ಸೇರಿ ಸಂಭ್ರಮದಿAದ ಸಾಮೂಹಿಕ ನಾಟಿ ಮಾಡಿದರು.

ಭಾನುವಾರ ಗ್ರಾಮದ ೩೦ ಕುಟುಂಬದ ಗ್ರಾಮಸ್ಥರು ಮುಖಂಡರಾದ ರಘು ಹಾಗೂ ಹೂವಣ್ಣ ನೇತೃತ್ವದಲ್ಲಿ ಗದ್ದೆಯಲ್ಲಿ ತೆವರು ಕಡಿದು, ಭೂಮಿ ಯನ್ನು ಹದಗೊಳಿಸಿ ಸಂಜೆಯೊಳಗೆ ನಾಟಿ ಮಾಡಿ ಮುಗಿಸಿದರು. ಸಾಮೂಹಿಕ ಭೋಜನ ಸವಿದು ಸಂಭ್ರಮಿಸಿದರು. ದೇವರ ಗದ್ದೆಯಲ್ಲಿ ಕಳೆದ ೧೫ ವರ್ಷ ಗಳಿಂದ ಗ್ರಾಮಸ್ಥರ ಸಾಮೂಹಿಕ ನಾಟಿ ಸಂಪ್ರದಾಯ ನಡೆದು ಬಂದಿದೆ.

ಶ್ರೀ ಚನ್ನಕೇಶವ ಸಂಘದ ವತಿಯಿಂದ ಸಭೆ ನಡೆಸಿ, ನಾಟಿ ದಿನವನ್ನು ಗೊತ್ತುಪಡಿಸಲಾಗುತ್ತದೆ. ೩೦ ಕುಟುಂಬದ ಇಬ್ಬರು ಸದಸ್ಯರು ನಾಟಿ ಕೆಲಸಕ್ಕೆ ಕಡ್ಡಾಯವಾಗಿ ಹಾಜರಾಗಲೇಬೇಕು. ಗೈರು ಹಾಜರಾದ ಸದಸ್ಯರಿಗೆ ದಂಡ ವಿಧಿಸಲಾಗುತ್ತದೆ. ಅಂತಹ ಸದಸ್ಯರು ತಕರಾರಿಲ್ಲದೇ ದಂಡ ಪಾವತಿಸುತ್ತಾರೆ. ಗದ್ದೆಯಲ್ಲಿ ಭೂಮಿ ಹದಗೊಳಿಸುವುದು, ಅಗೆ ಹಾಕುವುದು, ತೆವರು ಕಡಿಯುವುದು, ನಾಟಿ ಮಾಡುವುದು, ಕೊಯ್ಲು ಮಾಡುವುದು ಎಲ್ಲಾ ಕೆಲಸದಲ್ಲೂ ಗ್ರಾಮಸ್ಥರು ಪಾಲ್ಗೊಂಡು ಶ್ರಮದಾನ ಮಾಡಿ, ಸೌಹಾರ್ದತೆ ಮೆರೆಯುತ್ತಾರೆ.

ದೇವರ ಗದ್ದೆಯ ಕೆಲಸ ಗ್ರಾಮಸ್ಥರ ಒಗ್ಗಟ್ಟಿನ ಸಂಕೇತವಾಗಿದೆ. ಬೆಳೆದ ಭತ್ತವನ್ನು ಕೊಯ್ಲು ಮಾಡಿದ ಬಳಿಕ ಖರೀದಿಸಲು ಗ್ರಾಮಸ್ಥರಿಗೆ ಮೊದಲ ಆದ್ಯತೆ. ನಂತರ ಪರವೂರಿನವರಿಗೆ, ಮಾರುಕಟ್ಟೆಗೆ ಮಾರಲಾಗುತ್ತದೆ. ಭತ್ತ ಮಾರಾಟದಿಂದ ಸುಮಾರು ಒಂದು ಲಕ್ಷ ರೂಪಾಯಿ ಆದಾಯ ದೊರೆಯುತ್ತದೆ. ಆ ಆದಾಯವನ್ನು ದೇವಸ್ಥಾನದ ಪೂಜೆ-ಪುರಸ್ಕಾರಕ್ಕೆ, ಅನ್ನಸಂತರ್ಪಣೆಗೆ, ವಾರ್ಷಿಕೋತ್ಸವಕ್ಕೆ ಬಳಸಿಕೊಳ್ಳಲಾಗುತ್ತದೆ ಎಂದು ಮುಖಂಡ ರಘು ತಿಳಿಸಿದರು.

ಮುಂಗಾರು ಮಳೆ ತಡವಾಗಿ ಆರಂಭವಾದರೂ ಪುಷ್ಯ ಮಳೆಯಿಂದಾಗಿ ಗದ್ದೆಗಳಲ್ಲಿ ನೀರಾಗಿದ್ದು ಶನಿವಾರಸಂತೆ ಹೋಬಳಿಯಾದ್ಯಂತ ಕೆಲವು ರೈತರು ನಾಟಿ ಕಾರ್ಯದಲ್ಲಿ ತೊಡಗಿಸಿಕೊಂಡು ಚುರುಕಾಗಿ ಮುಗಿಸುತ್ತಿದ್ದಾರೆ.