ಚೆಯ್ಯAಡಾಣೆ, ಆ. ೮: ವೀರಾಜಪೇಟೆ ಅರಣ್ಯ ವಲಯ ವ್ಯಾಪ್ತಿಯ ಚೆಯ್ಯಂಡಾಣೆ, ನರಿಯಂದಡ, ಕೋಕೇರಿ, ಚೇಲಾವರ, ಕರಡ, ಅರಪಟ್ಟು, ಪೊದವಾಡ ಹಾಗೂ ಮರಂದೋಡ ಗ್ರಾಮಗಳ ತೋಟಗಳಲ್ಲಿ ಬೀಡುಬಿಟ್ಟು ಫಸಲು ಹಾಗೂ ಗಿಡಗಳನ್ನು ನಾಶಪಡಿಸುತ್ತಿದ್ದ ಕಾಡಾನೆಗಳ ಒಂದು ಗುಂಪಿನಲ್ಲಿದ್ದ ೭ ಕಾಡಾನೆಗಳನ್ನು ಕಾಡಿಗೆ ಅಟ್ಟುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಯಿತು.

ವೀರಾಜಪೇಟೆ, ಭಾಗಮಂಡಲ, ಮಡಿಕೇರಿ, ಅಮ್ಮತ್ತಿ ಅರಣ್ಯ ವಲಯ ಹಾಗೂ ಆನೆ ಕ್ಷಿಪ್ರ ಕಾರ್ಯಪಡೆಯ ತಂಡಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದವು. ಒಟ್ಟು ೫೦ಕ್ಕೂ ಹೆಚ್ಚು ಸಿಬ್ಬಂದಿಗಳು ೩ ತಂಡವಾಗಿ ತೋಟಗಳಲ್ಲಿ ಕಾರ್ಯಾಚರಣೆ ನಡೆಸಿ ಆನೆಗಳನ್ನು ಕಾಡಿಗಟ್ಟಲು ಹರಸಾಹಸಪಟ್ಟರು.

ಒಂದು ಕಾರ್ಯಾಚರಣೆ ತಂಡ ನರಿಯಂದಡ ಗ್ರಾಮ ಪಂಚಾಯಿತಿಗೆ ಒಳಪಟ್ಟ ಕೊಚ್ಚಣೆ ಎನ್.ಡಿ. ಅಯ್ಯಪ್ಪ ಎಸ್ಟೇಟ್‌ನಲ್ಲಿ ಬೀಡುಬಿಟ್ಟಿದ್ದ ೭ ಕಾಡಾನೆ ಹಿಂಡನ್ನು ಬಲ್ಯಾಯಾಟ್ರ ಬೆಟ್ಟಕ್ಕೆ ಓಡಿಸಿತು. ಕೇಕೆ ಹಾಕಿ, ಪಟಾಕಿ ಸಿಡಿಸಿ ತೋಟದಲ್ಲಿ ಅವಿತಿದ್ದ ಆನೆಗಳನ್ನು ಓಡುವಂತೆ ಮಾಡಲಾಯಿತು.

ಮತ್ತೊಂದು ಕಾರ್ಯಾಚರಣೆ ತಂಡ ಕುಂಜಿಲ ಕಕ್ಕಬೆ ಗ್ರಾ. ಪಂ. ಒಳಪಟ್ಟ ಮರಂದೋಡ ಗ್ರಾಮದಲ್ಲಿ ಬೀಡು ಬಿಟ್ಟಿದ್ದ ೮ಕ್ಕೂ ಅಧಿಕ ಕಾಡಾನೆಗಳ ಹಿಂಡನ್ನು ಬೆಟ್ಟಕ್ಕೆ ಓಡಿಸಲು ಪ್ರಯತ್ನ ವಿಫಲವಾಯಿತು. ಈ ಹಿನ್ನೆಲೆ ತಾ. ೯ರಂದು (ಇಂದು) ಕಾರ್ಯಾಚರಣೆ ಮುಂದುವರೆಯಲಿದೆ.

ಅರಣ್ಯ ಸಂರಕ್ಷಣಾಧಿಕಾರಿ ಬಿ.ಎಂ.ಶರಣ ಬಸಪ್ಪ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎ. ನೆಹರು ಮಾರ್ಗದರ್ಶನದಲ್ಲಿ ವೀರಾಜಪೇಟೆ ವಲಯ ಅರಣ್ಯಾಧಿಕಾರಿ ಕಳ್ಳಿರ ದೇವಯ್ಯ ನೇತೃತ್ವದಲ್ಲಿ ನಡೆದ ಕಾರ್ಯಾ ಚರಣೆಯಲ್ಲಿ ಅರಣ್ಯ ಆನೆ ಕ್ಷಿಪ್ರ ಕಾರ್ಯಪಡೆ ತಂಡ, ಕೆದಮುಳ್ಳೂರು ಹಾಗೂ ಚೆಯ್ಯಂಡಾಣೆ ಕ್ಯಾಂಪ್ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

- ಅಶ್ರಫ್