ಮಡಿಕೇರಿ, ಆ. ೮: ಜಿಲ್ಲೆಯಲ್ಲಿ ಒಕ್ಕಲಿಗರ ಭವನ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡುವುದಾಗಿ ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂಥರ್ ಗೌಡ ಭರವಸೆ ನೀಡಿದ್ದಾರೆ.
ನಗರದಲ್ಲಿ ಮಡಿಕೇರಿ ತಾಲೂಕು ಒಕ್ಕಲಿಗರ ಸಂಘದ ವತಿಯಿಂದ ನಡೆದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಭವನ ನಿರ್ಮಾಣಕ್ಕೆ ನಿವೇಶನ ದೊರಕಿಸಿಕೊಡುವುದಾಗಿ ಹೇಳಿದರು.
ಜಿಲ್ಲೆಯಲ್ಲಿ ಸುಸಜ್ಜಿತ ಒಕ್ಕಲಿಗರ ಭವನ ನಿರ್ಮಾಣದ ಕುರಿತು ಬೇಡಿಕೆ ಇದೆ. ಇದಕ್ಕೆ ಸಕಾಲದಲ್ಲಿ ಸ್ಪಂದಿಸಿ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ತಿಳಿಸಿದರು.
ಒಕ್ಕಲಿಗ ಸಮುದಾಯ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.
ಸಂಘದ ಜಿಲ್ಲಾ ನಿರ್ದೇಶಕ ವಿ.ಪಿ. ಶಶಿಧರ್ ಮಾತನಾಡಿ, ಒಕ್ಕಲಿಗ ಸಮುದಾಯ ದೊಡ್ಡ ಜನಸಂಖ್ಯೆಯನ್ನು ಹೊಂದಿದ್ದು, ರಾಜ್ಯದಲ್ಲಿ ಎರಡನೇ ಸ್ಥಾನದಲ್ಲಿದೆ. ಒಗ್ಗಟ್ಟನ್ನು ಕಾಯ್ದುಕೊಳ್ಳುವ ಮೂಲಕ ರಾಜಕೀಯವಾಗಿ ಪ್ರಗತಿಯನ್ನು ಸಾಧಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ವಿ.ಜಿ. ಮೋಹನ್, ಮಡಿಕೇರಿ ತಾಲೂಕಿಗೂ ಒಂದು ಒಕ್ಕಲಿಗರ ಭವನದ ಅಗತ್ಯವಿದ್ದು, ನಿವೇಶನ ದೊರಕಿಸಿಕೊಡುವಂತೆ
(ಮೊದಲ ಪುಟದಿಂದ) ಶಾಸಕರಲ್ಲಿ ಮನವಿ ಮಾಡಿದರು. ಮಂಥರ್ ಅವರನ್ನು ಸಂಘದ ಪದಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು.
ಸಂಘದ ಪ್ರಧಾನ ಕಾರ್ಯದರ್ಶಿ ಯು.ಎಲ್.ಕುಶಾಲಪ್ಪ, ಖಜಾಂಚಿ ರಮೇಶ್, ಉಪಾಧ್ಯಕ್ಷ ಬಸವರಾಜು, ನಿರ್ದೇಶಕರುಗಳಾದ ವಿ.ಪಿ.ಶಶಿಧರ್, ವಿ.ಎಂ. ಧನಂಜಯ, ಮಂಜುನಾಥ್, ಗೋಪಿನಾಥ್, ಉಮೇಶ್ ಕುಮಾರ್, ಪಾಲೂರು ದಿನೇಶ್, ವಿಜಯ, ಶಿವಕುಮಾರ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.