ಗುಡ್ಡೆಹೊಸೂರು, ಆ. ೮: ಜಿಲ್ಲೆಯಲ್ಲಿನ ೨ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಚಿಕ್ಲಿಹೊಳೆ ಜಲಾಶಯವು ಮಳೆಗಾಲದಲ್ಲಿ ಕೇವಲ ಪ್ರವಾಸಿಗರಿಗೆ ಮನರಂಜನಾ ತಾಣವಾಗಿ ಮಾರ್ಪಟ್ಟಿದ್ದು, ರೈತರ ಗದ್ದೆಗಳಿಗೆ ಅತ್ಯವಶ್ಯವಿರುವ ನೀರು ಆಗಸ್ಟ್ ತಿಂಗಳಾದರೂ ನಾಲೆಗಳಿಗೆ ನೀರು ಬಿಡುಗಡೆ ಆಗದೆ ಇರುವುದರಿಂದ ಜಲಾಶಯವು ಅಪ್ರಯೋಜನಕಾರಿಯಾಗಿ ನಿಂತಿದೆ.

ನಾಲೆಯಲ್ಲಿ ಹೂಳು ತುಂಬಿದ್ದು, ಹೂಳೆತ್ತಲು ಟೆಂಡರ್ ಪಡೆದವರು ಕೇವಲ ನಾಲೆಯ ಬದಿಗಳ ಗಿಡ-ಗಂಟಿಗಳನ್ನು ಅರೆಬರೆ ತೆಗೆದು ಮೌನವಾಗಿರುವುದರಿಂದ ನಾಲೆಗೆ ನೀರು ಬಿಟ್ಟಲ್ಲಿ ಕೂಡ ಸಮರ್ಪಕ ನೀರಿನ ಹರಿವಿಗೆ ಅಡೆತಡೆಯಾಗಲಿದೆ. ಈ ವ್ಯಾಪ್ತಿಯ ರೈತರು ಭತ್ತ ಬೆಳೆಯಲು ಕೊಳವೆ ಬಾವಿ ಹಾಗೂ ಕೆರೆಗಳ ನೀರಿನ ಮೊರೆ ಹೋಗಿದ್ದಾರೆ.

೧೯೮೦-೮೨ ರಲ್ಲಿ ರಂಗಸಮುದ್ರ-ಕAಬಿಬಾಣೆ ವ್ಯಾಪ್ತಿಯಲ್ಲಿ ನಿರ್ಮಾಣಗೊಂಡ ಈ ಜಲಾಶಯದ ಎಡದಂಡೆ ಹಾಗೂ ಬಲದಂಡೆ ಎಂಬೆರಡು ಕಾಲುವೆಗಳ ಮೂಲಕ ನೀರು ಹರಿಸಲು ಅವಕಾಶವಿದೆ. ಜಲಾಶಯ ನಿರ್ಮಾಣ ಸಂದರ್ಭ ಈ ವ್ಯಾಪ್ತಿಯ ರೈತರು ತಮ್ಮ ಕೃಷಿ ಭೂಮಿಗಳನ್ನು ಕಳೆದುಕೊಂಡಿದ್ದರು. ಹಳೆಯ ಎಡದಂಡೆ ನಾಲೆಯ ಮೂಲಕ ನಂಜರಾಯಪಟ್ಟಣ ವ್ಯಾಪ್ತಿಗೆ ನೀರು ಹರಿದರೆ, ಹಳೆಯ ಬಲದಂಡೆ ನಾಲೆಯೊಂದಿಗೆ ಹೊಸದಾಗಿ ಕೋಟ್ಯಂತರ ರೂ. ವೆಚ್ಚದಲ್ಲಿ ವಿಸ್ತಾರವಾಗಿ ನಿರ್ಮಿಸಿರುವ ಬಲದಂಡೆಯ ನಾಲೆಯಲ್ಲಿ ನೀರು ಹರಿದು ರಂಗಸಮುದ್ರ, ಬಾಳುಗೋಡು, ರಸಲ್‌ಪುರ, ಬೆಟ್ಟಗೇರಿ, ಗುಡ್ಡೆಹೊಸೂರು ಹಾಗೂ ಸುಂದರನಗರ ತಲುಪುತ್ತದೆ. ಈ ಹಿಂದಿನ ಕೆಲ ವರ್ಷಗಳಲ್ಲಿ ಜೂನ್ ತಿಂಗಳಿನಲ್ಲಿಯೇ ನಾಲೆಗಳಿಗೆ ನೀರು ಹರಿಸುವ ಮೂಲಕ ರೈತರ ಕೃಷಿ ಚಟುವಟಿಕೆಗೆ ಸಹಕರಿಸಲಾಗುತ್ತಿತ್ತು. ಆದರಿದೀಗ ಹಲವು ವರ್ಷಗಳಿಂದ ಆಗಸ್ಟ್ ತಿಂಗಳು ಪ್ರವೇಶಿಸಿದರೂ ನಾಲೆಗಳಿಗೆ ನೀರು ಹರಿಸದೆ ಇರುವುದರಿಂದ ರೈತರು ಇತರ ನೀರಿನ ಮೂಲಗಳ ಮೊರೆ ಹೋಗುವಂತಾಗಿದೆ. ಈ ಮೂಲಕ ಜಲಾಶಯವೆ ಒಂದು ರೀತಿ ನಿಷ್ಪçಯೋಜಕವಾಗಿದೆ. ನಾಲೆಯ ಸುತ್ತಲು ಗಿಡಗಂಟಿಗಳು ಬೆಳೆದಿದ್ದು, ಕಾಡಿನೊಳಗೆ ನಾಲೆಯೋ..? ಅಥವಾ ನಾಲೆಯೊಳಗೆ ಕಾಡೋ..? ಎಂಬAತಾಗಿದೆ ಪರಿಸ್ಥಿತಿ.

ಜಿಲ್ಲೆಗೆ ಸೇರಿರುವ ಹಾರಂಗಿ ಹಾಗೂ ಚಿಕ್ಲಿಹೊಳೆ ಭರ್ತಿಯಾದರೆ ಮಾತ್ರ ಕೆ.ಆರ್.ಎಸ್ ಜಲಾಶಯ ತುಂಬುತ್ತೆ. ಈ ಮೂಲಕ ರಾಜ್ಯದ ರಾಜಧಾನಿ ಬೆಂಗಳೂರಿನವರೆಗೂ ಕಾವೇರಿ ನೀರು ಸರಬರಾಜಾಗುತ್ತದೆ. ಆದರೆ, ಕೊಡಗು ಜಿಲ್ಲೆಯಲ್ಲಿನ ರೈತರಿಗೆ ಕೃಷಿ ಮಾಡಲೂ ನೀರು ಒದಗದೆ ಇರುವುದು ದುರಂತವೇ ಸರಿ.

ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಇತ್ತ ಗಮನಿಸಿ ರೈತರ ಸಮಸ್ಯೆಗಳನ್ನು ಪರಿಹರಿಸುವಂತೆ ಈ ವ್ಯಾಪ್ತಿಯ ರೈತರ ಆಕ್ರೋಶವಾಗಿದೆ.

- ಗಣೇಶ್ ಕುಡೆಕಲ್