ಮೈಸೂರು ಆ. ೮: ಮೈಸೂರಿನ ಕೊಡಗು ಗೌಡ ಸಮಾಜ ಹಾಗೂ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಸಮಾಜ ಮೈಸೂರು ರವರ ಸಹಯೋಗದಲ್ಲಿ ಆಟಿ ತಿಂಗಳಲ್ಲಿ ತಯಾರಿಸಿ ಸವಿಯುವ ಖಾದ್ಯಗಳ ಪ್ರದರ್ಶನ ಮತ್ತು ಮಾರಾಟ ‘ಆಟಿ ಗೌಜಿ ೨೦೨೩’ ಆಹಾರ ಮೇಳವನ್ನು ನಗರದ ವಿಜಯನಗರ ೨ನೇ ಹಂತದಲ್ಲಿರುವ ಸಮಾಜದ ಭವನದಲ್ಲಿ ಸಾಂಪ್ರದಾಯಿಕವಾಗಿ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರಿನ ಕೊಡಗು ಗೌಡ ಸಮಾಜದ ತೋಟಂಬೈಲು ಈ ಮನೋಹರ್ ಅವರು ವಹಿಸಿದ್ದರು. ವೇದಿಕೆಯಲ್ಲಿ ಅತಿಥಿಗಳಾಗಿ ನಗರ ಪಾಲಿಕೆ ಸದಸ್ಯರಾದ ಕೆ.ವಿ. ಶ್ರೀಧರ್, ಮುಖ್ಯ ಮಾತುಗಾರರಾಗಿ ಪಟ್ಟಡ ಶಿವಕುಮಾರ್, ಸಮಾಜದ ಸದಸ್ಯರು ಹಾಗೂ ಉಪನ್ಯಾಸಕರು, ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಗೌಡ ಮಹಿಳಾ ಸಮಾಜದ ಅಧ್ಯಕ್ಷೆ ನಡುವಟ್ಟೀರ ಗೀತಾ ಲಕ್ಷö್ಮಣ, ಗೌಡ ಸಮಾಜದ ಉಪಾಧ್ಯಕ್ಷ ಕುಯ್ಯಮುಡಿ ರಾಮಪ್ಪ, ಕಾರ್ಯದರ್ಶಿ ಕುಂಟಿಕಾನ ಗಣಪತಿ, ಮಹಿಳಾ ಸಮಾಜದ ಉಪಾಧ್ಯಕ್ಷೆ ಹೊಸೂರು ಮಮತಾ ವಸಂತ ಕುಮಾರ್, ಕಾರ್ಯದರ್ಶಿ ಕುಂಟುಪುಣಿ ಶೀಲಾ ರಮೇಶ್ ಉಪಸ್ಥಿತರಿದ್ದರು.

ಕಾರ್ಯಕ್ರಮ ಪ್ರಾರಂಭದಲ್ಲಿ ನಡುವಟ್ಟಿರ ಗೀತಾ ಲಕ್ಷö್ಮಣ ತಂಡದವರು ಪ್ರಾರ್ಥಿಸಿದರು. ತೋಟಂಬೈಲು ಮನೋಹರ್ ಪ್ರಾಸ್ತಾವಿಕ ನುಡಿ ನುಡಿದರು. ಪಟ್ಟಡ ಶಿವಕುಮಾರ್ ಅವರು ಆಟಿ ಆಚರಣೆಯ ಬಗ್ಗೆ ಉಪಯುಕ್ತ ವ್ಯಾಖ್ಯಾನ ನೀಡಿದರು. ಅತಿಥಿ ಕೆ.ವಿ. ಶ್ರೀಧರ್ ಅವರು ಆಚರಣೆಯನ್ನು ಪ್ರಶಂಸಿಸಿ ಭಾಷಣ ಮಾಡಿದರು. ಆಟಿ ಗೌಜಿ ೨೦೨೩ರ ಆಚರಣೆಯ ಅಂಗವಾಗಿ ಅಲಂಕೃತ ೧೬ ಮಳಿಗೆಗಳಲ್ಲಿ ಮಹಿಳಾ ಸಮಾಜದ ಸದಸ್ಯರು ತಯಾರಿಸಿದ ವಿವಿಧ ಖಾದ್ಯಗಳ ಪ್ರದರ್ಶನ ಮತ್ತು ಮಾರಾಟ ಏರ್ಪಡಿಸಲಾಗಿತ್ತು. ನಿರ್ದೇಶಕರುಗಳಾದ ಕೊಂಬಾರನ ಬಸಪ್ಪ ಸ್ವಾಗತಿಸಿದರು, ಚೆರಿಯಮನೆ ನರೇಶ್ ಕುಮಾರ್ ಅವರು ವಂದನಾರ್ಪಣೆ ಮಾಡಿದರು. ಹೊಸೊಕ್ಲು ಜಿ. ಸೋಮಣ್ಣ ಸಮಾಜದ ಕಾರ್ಯಕ್ರಮ ನಿರೂಪಿಸಿದರು.

ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕೃತಿ ಅಕಾಡೆಮಿ ಮಾಜಿ ಅಧ್ಯಕ್ಷ ಲಕ್ಷಿö್ಮನಾರಾಯಣ ಕಜೆಗದ್ದೆ, ಚೇರಂಬಾಣೆ ಗೌಡ ಸಮಾಜ ಅಧ್ಯಕ್ಷ ಕೊಡಪಾಲು ಗಣಪತಿ, ಕೊಡಗು ಗೌಡ ವಿದ್ಯಾ ಸಂಘದ ಖಜಾಂಚಿ ಕಾಳೇರಮ್ಮನ ಲತಾ ನಂದಕುಮಾರ್ ಹಾಗೂ ಇತರರು ಹಾಜರಿದ್ದರು.