ಶ್ರೀಮಂಗಲ, ಆ. ೮: ಕೊಡಗು ಜಿಲ್ಲೆಯ ಮೂಲಕ ಕೇರಳ ರಾಜ್ಯಕ್ಕೆ ಹಾಗೂ ಜಿಲ್ಲೆಯ ಇತರೆಡೆಗೆ ರೈಲ್ವೆ ಯೋಜನೆ ರೂಪಿಸುವುದನ್ನು ವಿರೋಧಿಸಿ ಕೊಡಗು ಸಂರಕ್ಷಣಾ ವೇದಿಕೆ ನಡೆಸಿದ ಹೋರಾಟದ ಸಂದರ್ಭ ವೇದಿಕೆಯ ಪ್ರಮುಖರ ಮೇಲೆ ದಾಖಲಾಗಿದ್ದ ಪ್ರಕರಣವನ್ನು ಮಡಿಕೇರಿ ಹಿರಿಯ ಸಿವಿಲ್ ಮತ್ತು ಮುಖ್ಯ ನ್ಯಾಯಿಕ ದಂಡಾಧಿಕಾರಿಗಳ ನ್ಯಾಯಾಲಯದ ನ್ಯಾಯಾಧೀಶರು ವಿಚಾರಣೆ ನಡೆಸಿ ೧೧ ಮಂದಿಯನ್ನು ಆರೋಪದಿಂದ ಬಿಡುಗಡೆ ಗೊಳಿಸಿದ್ದಾರೆ

೧೮.೧೨.೨೦೧೮ ರಂದು ಮಡಿಕೇರಿ ಜನರಲ್ ತಿಮ್ಮಯ್ಯ ಕ್ರೀಡಾಂ ಗಣದಿಂದ ಗಾಂಧಿ ಮೈದಾನದವರೆಗೆ ರೈಲ್ವೆ ಯೋಜನೆಯನ್ನು ವಿರೋಧಿಸಿ ಕೊಡಗು ಸಂರಕ್ಷಣಾ ವೇದಿಕೆಯಿಂದ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭ ಗಾಂಧಿ ಮೈದಾನಕ್ಕೆ ಜಾಥಾದ ಬೆಂಬಲಿಗರು ಆಗಮಿಸುತ್ತಿದ್ದಂತೆ ಅಲ್ಲಿಗೆ ಕೆಲವು ಜನರ ಗುಂಪು ಆಸೀನರಾಗಿ ವೇದಿಕೆಯ ಮುಂಭಾಗದಲ್ಲಿ ಗಲಭೆ ಎಬ್ಬಿಸಿದ್ದರು ಹಾಗೂ ವೇದಿಕೆ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದರು.

ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ್ದ ಅಂದಿನ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪಣ್ಣೇಕರ್ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದ್ದ ಗುಂಪಿನವರನ್ನು ಅಲ್ಲಿಂದ ಚದುರಿಸಿ ಕಾರ್ಯಕ್ರಮ ನಡೆಸಲು ಅನುವು ಮಾಡಿಕೊಟ್ಟಿದ್ದರು. ಈ ಬಗ್ಗೆ ರಾಜೀವ್ ಬೋಪಯ್ಯ ಹಾಗೂ ಸಿ.ಪಿ. ಮುತ್ತಣ್ಣ ಅವರುಗಳು ಮಡಿಕೇರಿ ನಗರ ಪೊಲೀಸ್ ಠಾಣೆಯಲ್ಲಿ ಅಡ್ಡಿಪಡಿಸಿದ್ದ ಗುಂಪಿನ ೨೭ ಜನರ ವಿರುದ್ಧ ದೂರು ದಾಖಲಿಸಿದ್ದರು.

ಈ ದೂರು ದಾಖಲಾಗುತ್ತಿದ್ದಂತೆ ಕೊಡಗು ಸಂರಕ್ಷಣಾ ವೇದಿಕೆಯ ೧೧ ಪ್ರಮುಖರ ವಿರುದ್ಧ ಮಧು ಬೋಪಣ್ಣ, ಜಿನ್ನು ನಾಣಯ್ಯ, ರವಿ ಬಸಪ್ಪ, ಕಿಶೋರ್‌ಕುಮಾರ್ ಮತ್ತು ಇತರರು ಸೇರಿ ಪ್ರತಿ ದೂರು ಸಲ್ಲಿಸಿದ್ದರು. ಆದರೆ ಅನಂತರ ನಡೆದ ವಿದ್ಯಮಾನದಲ್ಲಿ ಪ್ರತಿದೂರು ನೀಡಿದ್ದ ಪ್ರಕರಣವನ್ನು ಪೊಲೀಸ್ ಇಲಾಖೆ ಬಿ ರಿಪೋರ್ಟ್ ಮಾಡಿತ್ತು.

ಪೊಲೀಸರು ರಾಜೀವ್ ಬೋಪಯ್ಯ, ಸಿ.ಪಿ.ಮುತ್ತಣ್ಣ, ತಮ್ಮು ಪೂವಯ್ಯ, ಪ್ರಭು ಪೂಣಚ್ಚ, ಹರೀಶ್ ಮಾದಪ್ಪ, ಎಂ. ಎಂ. ರವೀಂದ್ರ, ಬಿ.ಎ. ನಂಜಪ್ಪ, ಮಂಜು ಚಿಣ್ಣಪ್ಪ, ಶೆರಿಸುಬ್ಬಯ್ಯ, ಕಿಶನ್ ಉತ್ತಪ್ಪ ಸೇರಿದಂತೆ ೧೧ ಮಂದಿ ವಿರುದ್ಧ ದಾಖಲಾಗಿದ್ದ ಪ್ರಕರಣದ ಬಗ್ಗೆ ಕಳೆದ ೪ ವರ್ಷಗಳಿಂದ ನಡೆದ ವಿಚಾರಣೆಯ ಅಂತಿಮ ತೀರ್ಪು ನ್ಯಾಯಾಲಯ ಪ್ರಕಟಿಸಿ ಆರೋಪದಿಂದ ಮುಕ್ತಗೊಳಿಸಿದೆ.