ಸೋಮವಾರಪೇಟೆ, ಆ. ೭: ಬ್ಯಾಂಕ್ ಆಫ್ ಬರೋಡಾದ ೧೧೬ನೇ ಸಂಸ್ಥಾಪನಾ ದಿನದ ಅಂಗವಾಗಿ ಶಾಂತಳ್ಳಿಯ ಶ್ರೀ ಕುಮಾರಲಿಂಗೇಶ್ವರ ಪ್ರೌಢಶಾಲೆಗೆ, ವಿದ್ಯಾರ್ಥಿಗಳ ಬಿಸಿಯೂಟಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಬ್ಯಾಂಕ್ನ ವತಿಯಿಂದ ಅಡುಗೆ ಪರಿಕರಗಳನ್ನು ವಿತರಿಸಲಾಯಿತು.
ಶಾಲಾ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಎಸ್.ಡಿ.ಎಂ.ಸಿ ಅಧ್ಯಕ್ಷ ಕೆ.ಕೆ. ಗೋಪಾಲ್ ವಹಿಸಿದ್ದರು. ನಂತರ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಬ್ಯಾಂಕ್ ಆಫ್ ಬರೋಡಾದಿಂದ ಸವಲತ್ತು ವಿತರಿಸಿರುವುದು ಶ್ಲಾಘನೀಯ ಎಂದರಲ್ಲದೆ, ಶಿಕ್ಷಣ ಪಡೆಯುವ ಸಂದರ್ಭ ವಿದ್ಯಾರ್ಥಿಗಳು ಪರಿಶ್ರಮದಿಂದ ಅಭ್ಯಾಸ ನಡೆಸಬೇಕು. ಆಗ ಮಾತ್ರ ತಮ್ಮ ಗುರಿ ಸಾಧಿಸಲು ಸಾಧ್ಯ ಎಂದು ಅಭಿಪ್ರಾಯಿಸಿದರು.
ಬ್ಯಾಂಕ್ ವ್ಯವಸ್ಥಾಪಕ ಸೀಲಂ ಸ್ವರೂಪ್ ಅವರು ಶಾಲೆಗೆ ಕುಕ್ಕರ್ ಹಾಗೂ ಅಡುಗೆ ಪರಿಕರಗಳನ್ನು ವಿತರಿಸಿದರು. ಈ ಸಂದರ್ಭ ಪಟ್ಟಣ ಪಂಚಾಯಿತಿ ಸದಸ್ಯ ಮೃತ್ಯುಂಜಯ, ಶಾಲಾ ಮುಖ್ಯ ಶಿಕ್ಷಕಿ ಉಷಾಕುಮಾರಿ, ಶಾಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಇದ್ದರು.