ಪೊನ್ನಂಪೇಟೆ, ಆ. ೭: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶ್ರೀಮಂಗಲ ದಲ್ಲಿ ನೂತನವಾಗಿ ಶೌರ್ಯ ವಿಪತ್ತು ತಂಡ ರಚನೆ ಬಗ್ಗೆ ಪೂರ್ವಭಾವಿ ಸಭೆ ನಡೆಸಲಾಯಿತು.
ಸಭೆಯಲ್ಲಿ ಪೊನ್ನಂಪೇಟೆ ವಲಯ ಮೇಲ್ವಿಚಾರಕ ನರಸಿಂಹಮೂರ್ತಿ ಮಾತನಾಡಿ, ಗ್ರಾಮ ಅಭಿವೃದ್ಧಿ ಯೋಜನೆಯಲ್ಲಿ ಹತ್ತು ಹಲವು ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸಲಾಗುತ್ತಿದೆ. ಇದರ ಜೊತೆಗೆ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗಡೆಯವರ ಆಶಯ ದಂತೆ ಕರಾವಳಿ ಪ್ರದೇಶ ಮತ್ತು ಕೊಡಗು ಜಿಲ್ಲೆಗಳಲ್ಲಿ ವಿಪರೀತ ಮಳೆ ಸಂಭವಿಸಿ ಸಾವು-ನೋವುಗಳು ಆಗುವುದನ್ನು ಗಮನದಲ್ಲಿಟ್ಟು ಕೊಂಡು, ಈ ಭಾಗದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನರ ರಕ್ಷಣೆಗೆ ಶೌರ್ಯ ತಂಡ ರಚನೆ ಮಾಡಲಾಗುತ್ತದೆ.
ಪ್ರವಾಹ ಸಂದರ್ಭ ಅಥವಾ ಆಕಸ್ಮಿಕ ದುರಂತಗಳು, ಅಗ್ನಿ ಅವಘಡ ಇನ್ನಿತರ ಯಾವುದೇ ತುರ್ತು ಸೇವೆಗಳನ್ನು ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ತಂಡ ರಚನೆ ಮಾಡಿ ಅವರಿಗೆ ಸೂಕ್ತ ತರಬೇತಿ ನೀಡಿ, ಜಿಲ್ಲಾಡಳಿತ ಮತ್ತು ಸ್ಥಳೀಯ ಪೊಲೀಸ್ ಇಲಾಖೆಯಲ್ಲಿ ಈ ತಂಡದ ಸದಸ್ಯರ ಹೆಸರು ನೋಂದಾವಣೆ ಮಾಡಿಕೊಂಡು ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಆಗುವ ಪ್ರಾಕೃತಿಕ ಸಮಸ್ಯೆಗಳು ಹಾಗೂ ಸ್ಥಳೀಯ ಸಮಸ್ಯೆಗಳಿಗೆ ತುರ್ತು ಸ್ಪಂದನ ನೀಡುವ ೩೦ ಸದಸ್ಯರ ತಂಡವನ್ನು ರಚನೆ ಮಾಡ ಲಾಗಿರುತ್ತದೆ. ಧರ್ಮಸ್ಥಳ ಸ್ವಸಹಾಯ ಸಂಘದ ಆರ್ಥಿಕ ವ್ಯವಹಾರದ ಜೊತೆ ಜೊತೆ ಯಲ್ಲಿ ಸಮಾಜಮುಖಿ ಕೆಲಸಗಳನ್ನು ಮಾಡುವಲ್ಲಿ ಸ್ಥಳೀಯ ಒಕ್ಕೂಟದ ಪದಾಧಿಕಾರಿಗಳ ಸಹಕಾರ ಹಾಗೂ ಗ್ರಾಮಸ್ಥರ ಸಹಕಾರದಿಂದ ಎಲ್ಲಾ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆಯಲು ಸಹಕಾರಿ ಆಗುತ್ತಿದ್ದು, ಮುಂದೆಯೂ ಕೂಡ ಶೌರ್ಯ ತಂಡದ ಕಾರ್ಯಕ್ಕೆ ಸಹಕಾರ ನೀಡಬೇಕೆಂದು ಕೇಳಿಕೊಂಡರು. ಈ ಸಂದರ್ಭ ಶ್ರೀಮಂಗಲ ಒಕ್ಕೂಟದ ಅಧ್ಯಕ್ಷೆ ಮೀನಾ, ಪದಾಧಿಕಾರಿ ಮೀನಾಕ್ಷಿ, ಸ್ಥಳೀಯ ಸೇವಾ ಪ್ರತಿನಿಧಿ ಸರಳ ಉಪಸ್ಥಿತರಿದ್ದರು.