ಕೂಡಿಗೆ, ಆ. ೮: ಕೂಡಿಗೆಯ ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ (ಡಯಟ್)ಯ ಉಪ ನಿರ್ದೇಶಕ (ಅಭಿವೃದ್ಧಿ) ಮತ್ತು ಪ್ರಾಂಶುಪಾಲ ರಾಗಿ ಸೇವೆ ಸಲ್ಲಿಸುತ್ತಿದ್ದು, ಇದೀಗ ನಿವೃತ್ತಗೊಂಡ ಬಿ.ವಿ. ಮಲ್ಲೇಶಪ್ಪ ಅವರಿಗೆ ಕೂಡಿಗೆ ಡಯಟ್‌ನಲ್ಲಿ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನಿಸಿ ಬೀಳ್ಕೊಡುಗೆ ನೀಡಲಾಯಿತು.

ಡಯಟ್ ಸಂಸ್ಥೆಯ ಉಪನ್ಯಾಸಕ ವೃಂದ, ಸಿಬ್ಬಂದಿ ಸೇರಿದಂತೆ ಜಿಲ್ಲಾ ಹಾಗೂ ಸೋಮವಾರಪೇಟೆ ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘ, ತಾಲೂಕು ಸಹ ಶಿಕ್ಷಕರ ಸಂಘ, ಜಿಲ್ಲೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ವತಿಯಿಂದ ನಿವೃತ್ತಗೊಂಡ ಮಲ್ಲೇಶಪ್ಪ ಅವರಿಗೆ ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಾಂಶುಪಾಲ ಬಿ.ವಿ. ಮಲ್ಲೇಶಪ್ಪ, ತಾವು ಶಿಕ್ಷಣ ಇಲಾಖೆಯಲ್ಲಿ ೩೭ ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಲು ಸಹಕಾರ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಕೆಲಸ ಕಾರ್ಯಗಳಲ್ಲಿ ಪರಸ್ಪರ ಪ್ರೀತಿ-ವಿಶ್ವಾಸ, ಸಹನೆ, ತಾಳ್ಮೆ, ಅಧಿಕಾರದಿಂದ ಕುಟುಂಬದ ಸದಸ್ಯರಂತೆ ಕೆಲಸ ನಿರ್ವಹಿಸಿದರೆ, ಅಧಿಕಾರದಲ್ಲಿ ಅಹಂ ಎಂಬ ಮನೋಭಾವವನ್ನು ಬದಿಗೊತ್ತಿ ಎಲ್ಲರೊಂದಿಗೆ ಸಮನ್ವಯತೆ ಕಾರ್ಯ ನಿರ್ವಹಿಸಿದರೆ ಉತ್ತಮ ಪ್ರಗತಿ ಸಾಧಿಸಲು ಸಾಧ್ಯ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಡಿಡಿಪಿಐ ಸಿ. ರಂಗಧಾಮಯ್ಯ, ಶಿಕ್ಷಣ ಇಲಾಖೆಯಲ್ಲಿ ವಿವಿಧ ಸ್ತರದ ಹುದ್ದೆಗಳಲ್ಲಿ ಅನ್ಯೋನ್ಯತೆಯಿಂದ ಕೆಲಸ ನಿರ್ವಹಿಸುವ ಮೂಲಕ ಇಲಾಖೆಯ ಪ್ರಗತಿಗೆ ಶ್ರಮಿಸಿರುವ ಮಲ್ಲೇಶಪ್ಪ ಅವರ ವೃತ್ತಿ ಜೀವನ ಮಾದರಿಯಾದುದು ಎಂದರು.

ಡಿವೈಎಸ್ಪಿ ಆರ್.ವಿ. ಗಂಗಾಧರಪ್ಪ ಮಾತನಾಡಿ, ಸರಳ ವ್ಯಕ್ತಿತ್ವ ಹೊಂದಿರುವ ಮಲ್ಲೇಶಪ್ಪ ಅವರು ವಿದ್ಯಾರ್ಥಿಗಳ ಕಲಿಕೆಗೆ ಹೆಚ್ಚಿನ ಪ್ರೇರಣೆ ನೀಡುತ್ತಿದ್ದರು. ಮಲ್ಲೇಶಪ್ಪ ಅವರ ಶಿಷ್ಯರಾದ ತಾವು ಅವರ ಸೂಕ್ತ ಸಲಹೆ, ಮಾರ್ಗದರ್ಶನದಿಂದ ಉತ್ತಮ ಸ್ಥಾನ ಹೊಂದಲು ಕಾರಣವಾಗಿದೆ ಎಂದು ತಮ್ಮ ವಿದ್ಯಾರ್ಥಿ ಜೀವನವನ್ನು ಮೆಲುಕು ಹಾಕಿದರು. ಇದೇ ವೇಳೆ ನಿವೃತ್ತಗೊಂಡ ಮಲ್ಲೇಶಪ್ಪ ದಂಪತಿ ಯನ್ನು ಡಯಟ್, ಬಿಇಓ ಕಚೇರಿಗಳು ಮತ್ತು ವಿವಿಧ ಶಿಕ್ಷಕರ ಸಂಘಟನೆ ಗಳಿಂದ ಸನ್ಮಾನಿಸಿ ಬೀಳ್ಕೊಡ ಲಾಯಿತು. ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ. ಸೋಮಶೇಖರ್, ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ವಿ. ಸುರೇಶ್, ಡಾ ಬಿ.ಸಿ. ದೊಡ್ಡೇಗೌಡ, ಪ್ರಕಾಶ್, ಡಯಟ್‌ನ ಹಿರಿಯ ಉಪನ್ಯಾಸಕರಾದ ಶಿವ ಕುಮಾರ್, ಉಪನ್ಯಾಸಕ ಎಂ. ಕೃಷ್ಣಪ್ಪ, ಮುಖ್ಯ ಶಿಕ್ಷಕರಾದ ಟಿ.ಜಿ. ಪ್ರೇಮ ಕುಮಾರ್, ಸೋಮಯ್ಯ ಇತರರು ಮಾತನಾಡಿದರು. ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಎಂ.ಟಿ. ದಯಾನಂದ ಪ್ರಕಾಶ್, ತಾಲೂಕು ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಎಂ. ಹೇಮಂತಕುಮಾರ್, ತಾಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಆರ್. ರತ್ನಕುಮಾರ್, ಬಿಆರ್ ಸಿ ವನಜಾಕ್ಷಿ, ಹಿರಿಯ ಉಪನ್ಯಾಸಕರಾದ ನಿರುಪ್ ವೆಸ್ಲಿ, ಎಸ್.ಪಿ. ಮಹದೇವ್, ಅಲ್ಹುಸ್ನಾ, ಗಾಯಿತ್ರಿದೇವಿ, ಬಿಆರ್‌ಸಿ ವನಜಾಕ್ಷಿ, ಪ್ರೌಢಶಾಲಾ ಮುಖ್ಯ ಶಿಕ್ಷಕರಾದ ಬಿ.ಎನ್. ಪುಷ್ಪ, ಎಂ.ವಿ. ಮಂಜೇಶ್, ಕೆ.ಎಂ. ಅಯ್ಯಚ್ಚು, ನಿವೃತ್ತ ಉಪನ್ಯಾಸಕಿ ಬಿ.ಬಿ. ಸಾವಿತ್ರಿ, ಶಿಕ್ಷಕರ ವಿವಿಧ ಘಟಕಗಳ ಪದಾಧಿಕಾರಿಗಳು ಇದ್ದರು.

ಡಯಟ್‌ನ ಉಪನ್ಯಾಸಕರು ಸೇರಿದಂತೆ ವಿವಿಧ ಶಿಕ್ಷಕರ ಸಂಘಟನೆಗಳ ಪದಾಧಿಕಾರಿಗಳು ಇದ್ದರು. ಉಪನ್ಯಾಸಕ ಕೆ.ಜಿ. ನೀಲಕಂಠಪ್ಪ, ಉಪನ್ಯಾಸಕಿ ಕೆ.ಎಸ್. ನಳಿನಾಕ್ಷಿ ಕಾರ್ಯಕ್ರಮ ನಿರ್ವಹಿಸಿದರು. ಡಯಟ್ ಸಂಸ್ಥೆಯ ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ಶಿಕ್ಷಕರ ಸಂಘದ ಪ್ರತಿನಿಧಿಗಳು ಇದ್ದರು.