ಕಡಂಗ, ಆ. ೭: ಅರಪಟ್ಟು-ಪೊದವಾಡ ಗ್ರಾಮದಲ್ಲಿರುವ ಕೋಡಿರ ಐನ್ಮನೆಯಲ್ಲಿ ಕೋಡಿರ ಕುಟುಂಬಸ್ಥರು ಪದ್ಮಶ್ರೀ ಪ್ರಶಸ್ತಿ ವಿಜೇತೆ ಐಮುಡಿಯಂಡ ರಾಣಿ ಮಾಚಯ್ಯ ಅವರಿಗೆ ಸನ್ಮಾನಿಸಿದರು.
ಕೋಡಿರ ಕುಟುಂಬದ ಮಹಿಳಾ ಒಕ್ಕೂಟದ ಹಿರಿಯರಾದ ಮುತ್ತವ್ವ ಚಂಗಪ್ಪ, ಜಾನಕಿ ಪೊನ್ನಪ್ಪ, ಸರಸು ಕುಶಾಲಪ್ಪ, ಅಧ್ಯಕ್ಷೆ ಪೊನ್ನು ಮಂದಣ್ಣ, ಉಪಾಧ್ಯಕ್ಷೆ ಹೇಮಾ ಮಂದಣ್ಣ ಹಾಗೂ ಕುಟುಂಬದ ಅಧ್ಯಕ್ಷ ಪ್ರವೀಣ್ ಚಂಗಪ್ಪ ಅವರ ಸಮ್ಮುಖದಲ್ಲಿ ಗೌರವಿಸಲಾಯಿತು. ಗೌರವ ಪುರಸ್ಕೃತರಾದ ರಾಣಿ ಮಾಚಯ್ಯ ಅವರು ಮಾತನಾಡಿ, ಪ್ರತಿಯೊಂದು ಕುಟುಂಬದಲ್ಲಿ ಒಗ್ಗಟ್ಟು ಬಹಳ ಮುಖ್ಯ. ಒಗ್ಗಟ್ಟಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಎಂದು ನುಡಿದರು. ಕುಟುಂಬದ ಅನೇಕ ಹಿರಿಯ, ಕಿರಿಯ ಕಲಾವಿದರಿಂದ ಗಾಯನ ಮೂಡಿಬಂತು. ಶಿಲ್ವಿಕಾ ಕಾರ್ಯಕ್ರಮ ನಿರೂಪಿಸಿ, ಟೀನಾ ಹರ್ಷ ಸ್ವಾಗತಿಸಿ, ವೀಣಾ ಶಶಿ ವಂದಿಸಿದರು.