ಕುಶಾಲನಗರ, ಆ. ೭: ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳ ಬಗ್ಗೆ ಹಿರಿಯರು ತಮ್ಮ ಮಕ್ಕಳಿಗೆ ಕಲಿಸಿಕೊಡುವ ಮೂಲಕ ಉಳಿಸಿ ಬೆಳೆಸುವ ಕೆಲಸವಾಗಬೇಕು ಎಂದು ಕುಶಾಲನಗರ ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ ಅವರು ಹೇಳಿದರು.

ಪದ್ಮಾವತಿ ಗೌಡ ಮಹಿಳಾ ಒಕ್ಕೂಟ ಮತ್ತು ಗೌಡ ಮಹಿಳಾ ಸ್ವಸಹಾಯ ಸಂಘದ ಆಶ್ರಯದಲ್ಲಿ ಗೌಡ ಸಮಾಜ ಸಭಾಂಗಣದಲ್ಲಿ ನಡೆದ ಆಟಿ ಸಂಭ್ರಮ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು. ಸಂಪ್ರದಾಯವನ್ನು ಮಕ್ಕಳು ಪಾಲಿಸುವ ಮೂಲಕ ತಮ್ಮ ಸಂಸ್ಕೃತಿಯನ್ನು ಉಳಿಸಿಕೊಳ್ಳಬಹುದು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕುದುಪಜೆ ಶಾರದಾ ಬಸಪ್ಪ ಅವರು ಮಾತನಾಡಿ ಆಟಿಹಬ್ಬದ ಮಹತ್ವ ಮತ್ತಿತರ ವಿಷಯಗಳ ಬಗ್ಗೆ ಮಾಹಿತಿ ಒದಗಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಗೌಡ ಸಮಾಜದ ಅಧ್ಯಕ್ಷರಾದ ಚಿಲ್ಲನ ಗಣಿ ಪ್ರಸಾದ್, ಮುಂದಿನ ದಿನಗಳಲ್ಲಿ ಗೌಡ ಸಮಾಜ ಆಶ್ರಯದಲ್ಲಿ ಸಮಾಜದ ಎಲ್ಲಾ ಸಂಘ ಸಂಸ್ಥೆಗಳ ಒಗ್ಗೂಡಿಕೆ ಯೊಂದಿಗೆ ಗೌಡ ಸಮಾಜದ ಎಲ್ಲ ರೀತಿಯ ಸಹಕಾರದೊಂದಿಗೆ ಆಟಿ ಸಂಭ್ರಮ ಮತ್ತು ಹುತ್ತರಿ ನಾಟಿ ಕಾರ್ಯ ಎರಡು ಕಾರ್ಯಕ್ರಮಗಳನ್ನು ಜಂಟಿಯಾಗಿ ಅದ್ಧೂರಿಯಾಗಿ ಮಾಡುವುದಾಗಿ ತಿಳಿಸಿದರು.

ಚೆರಿಯಮನೆ ಪಾರ್ವತಿ ಅವರು ಆಟಿ ಹಬ್ಬದ ಕುರಿತು ಮಾತ ನಾಡಿದರು. ಆಟಿ ಸಂಭ್ರಮ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮಹಿಳೆಯರು ಸಿದ್ಧಪಡಿಸಿ ತಂದು ಪ್ರದರ್ಶನಕ್ಕೆ ಇಟ್ಟಿದ್ದ ವೈವಿಧ್ಯಮಯ ಖಾದ್ಯಗಳು ನೋಡುಗರ ಬಾಯಲ್ಲಿ ನೀರೂರಿಸಿದವು.

ವಿವಿಧ ರೀತಿಯ ಕಳಲೆ ಪದಾರ್ಥಗಳು, ಪತ್ರೊಡೆ, ಹಲಸಿನ ಖಾದ್ಯಗಳು, ಮಾವಿನ ಹಣ್ಣಿನ ಪದಾರ್ಥಗಳು ರುಚಿರುಚಿಯ ಖಾದ್ಯ ಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪದ್ಮಾವತಿ ಮಹಿಳಾ ಒಕ್ಕೂಟದ ಅಧ್ಯಕ್ಷೆ ಚಿಯಂಡಿ ಶಾಂತಿ, ಗೌಡ ಮಹಿಳಾ ಸ್ವಸಹಾಯ ಸಂಘದ ಅಧ್ಯಕ್ಷ ಸೂದನ ಲಲಿತ, ನಿವೃತ್ತ ಯೋಧರ ಸಂಘದ ಅಧ್ಯಕ್ಷರಾದ ದೇವಜನ ಚಿನ್ನಪ್ಪ, ಕಾರ್ಯಕ್ರಮ ಸಂಯೋಜಕಿ ಪಟ್ಟಂದಿ ಬೀನಾ ಸೀತಾರಾಮ್ ಮತ್ತಿತರರು ಇದ್ದರು.

ಪಾವನ ಮತ್ತು ಜ್ಯೋತಿ ಅವರಿಂದ ಪ್ರಾರ್ಥನೆ, ಅಚ್ಚಾಂಡಿರ ಲತಾ ಸ್ವಾಗತ, ಸೂದನ ಲೀಲಾವತಿ ಅವರು ಕಾರ್ಯಕ್ರಮ ನಿರೂಪಿಸಿದರು. ಸೂಳೆಕೋಡಿ ರಮಾ ಮಾದಪ್ಪ ವಂದಿಸಿದರು.