ವಿಜಯರಾಘವೇಂದ್ರ ಪತ್ನಿ ಸ್ಪಂದನಾ ಸಾವು

ಬೆಂಗಳೂರು, ಆ. ೭: ಸ್ಯಾಂಡಲ್‌ವುಡ್ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನರಾಗಿದ್ದಾರೆ. ವಿದೇಶ ಪ್ರವಾಸಕ್ಕೆ ತೆರಳಿದ್ದ ವೇಳೆ ಸಂಭವಿಸಿದ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಬ್ಯಾಂಕಾಕ್ ಪ್ರವಾಸಕ್ಕೆ ತೆರಳಿದ ವೇಳೆ ದುರಂತ ಸಂಭವಿಸಿದೆ. ಥೈಲ್ಯಾಂಡ್‌ನಲ್ಲಿ ಹೃದಯಾಘಾತವಾಗಿ, ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕುಸಿದು ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಗಿತ್ತು, ಆದರೆ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಸ್ಪಂದನಾ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಬಿ.ಕೆ ಶಿವರಾಂ ಅವರ ಪುತ್ರಿ. ಇನ್ನೂ ವಿಷಯ ತಿಳಿಯುತ್ತಿದ್ದಂತೆ ಸ್ಪಂದನಾ ತಂದೆ ಬಿ.ಕೆ ಶಿವರಾಂ ಮತ್ತು ಅವರ ತಂದೆ ಥೈಲ್ಯಾಂಡ್‌ಗೆ ತೆರಳಿದ್ದಾರೆ. ಥೈಲ್ಯಾಂಡ್‌ನಲ್ಲಿ ಪ್ರವಾಸಕ್ಕೆ ತೆರಳಿದ್ದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿರುವ ಸ್ಯಾಂಡಲ್ ವುಡ್ ನಟ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಅವರ ಮರಣೋತ್ತರ ಪರೀಕ್ಷೆ ಮುಗಿದಿದೆ ಎಂದು ಸ್ಪಂದನಾ ಅವರ ಚಿಕ್ಕಪ್ಪನೂ ಆಗಿರುವ ಕಾಂಗ್ರೆಸ್ ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್ ಅವರು ಹೇಳಿದ್ದು, ತಾ. ೮ ರಂದು (ಇಂದು) ಮೃತದೇಹ ಬರಲಿದೆ. ಬೆಂಗಳೂರಿನಲ್ಲಿ ಮಾತನಾಡಿದ ನಟ ಶ್ರೀಮುರುಳಿ, ಅಣ್ಣ ನನಗೆ ಫೋನ್ ಮಾಡಿ ವಿಷಯ ತಿಳಿಸಿದರು, ಅತ್ತಿಗೆಯ ಅಗಲಿಕೆ ಆಘಾತ ಮೂಡಿಸಿದೆ, ಅವರು ಸ್ನೇಹಿತರು ಹಾಗೂ ಕುಟುಂಬಸ್ಥರ ಜೊತೆ ಪ್ರವಾಸಕ್ಕೆ ತೆರಳಿದ್ದರು. ಶೂಟಿಂಗ್ ಮುಗಿಸಿಕೊಂಡು ವಿಜಯ ರಾಘವೇಂದ್ರ ಕೂಡ ಅವರೊಂದಿಗೆ ಭಾಗಿಯಾಗಿದ್ದರು ಎಂದು ಮರುಳಿ ತಿಳಿಸಿದ್ದಾರೆ. ಹೋಟೆಲ್‌ವೊಂದರಲ್ಲಿ ಮಲಗಿದ್ದ ಸ್ಪಂದನಾ ಅವರು ಮೇಲೆ ಎದ್ದಿಲ್ಲ. ಲೋ ಬಿಪಿ ಆಗಿ ಹೃದಯಾಘಾತ ಆಗಿರಬಹುದು ಎಂದು ಹೇಳಲಾಗುತ್ತಿದೆ. ಇತ್ತೀಚೆಗಷ್ಟೇ ಸ್ಪಂದನಾ ಅವರು ಸುಮಾರು ೧೬ ಕೆಜಿ ತೂಕ ಇಳಿಸಿಕೊಂಡಿದ್ದರು ಎನ್ನಲಾಗುತ್ತಿದೆ.

ಮಣಿಪುರ ಹಿಂಸಾಚಾರ : ಸುಪ್ರೀಂ ಕೋರ್ಟ್ನಲ್ಲಿ ವಿಚಾರಣೆ ಆರಂಭ

ನವದೆಹಲಿ, ಆ. ೭: ಮಣಿಪುರದಲ್ಲಿ ಜನಾಂಗೀಯ ಹಿಂಸಾಚಾರಕ್ಕೆ ಸಂಬAಧಿಸಿದ ಅರ್ಜಿಗಳ ವಿಚಾರಣೆ ಸುಪ್ರೀಂ ಕೋರ್ಟ್ನಲ್ಲಿ ಆರಂಭವಾಗಿದೆ. ಇನ್ನು ಪ್ರಕರಣಗಳ ತನಿಖೆಗಾಗಿ ಜಿಲ್ಲಾ ಎಸ್‌ಪಿಗಳ ನೇತೃತ್ವದಲ್ಲಿ ಎಸ್‌ಐಟಿ ಸ್ಥಾಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಮಣಿಪುರ ಡಿಜಿಪಿ ರಾಜೀವ್ ಸಿಂಗ್ ಅವರು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠದ ಮುಂದೆ ಹಾಜರಾಗಿ ಜನಾಂಗೀಯ ಹಿಂಸಾಚಾರ ಮತ್ತು ಆಡಳಿತವು ಇಲ್ಲಿಯವರೆಗೆ ತೆಗೆದುಕೊಂಡ ಕ್ರಮಗಳ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸಿದರು. ಈ ವೇಳೆ ಅವರು ಪರಿಣಾಮಕಾರಿ ತನಿಖೆಯ ಉದ್ದೇಶಗಳಿಗಾಗಿ ಪ್ರಕರಣಗಳನ್ನು ಪ್ರತ್ಯೇಕಿಸುವುದರ ಜೊತೆಗೆ ಎಸ್‌ಐಟಿ ಸ್ಥಾಪಿಸುವುದಾಗಿ ಹೇಳಿದರು. ಕೇಂದ್ರ ಮತ್ತು ರಾಜ್ಯ ಸರ್ಕಾರದ ಪರವಾಗಿ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಆಗಸ್ಟ್ ೧ರಂದು ಪ್ರಕರಣಗಳ ಪ್ರತ್ಯೇಕತೆ ಸೇರಿದಂತೆ ವಿಷಯಗಳ ಕುರಿತು ಸುಪ್ರೀಂ ಕೋರ್ಟ್ ಕೋರಿದ ವರದಿಯನ್ನು ಸಲ್ಲಿಸಿದರು. ಸರ್ಕಾರವು ಅತ್ಯಂತ ಪ್ರಬುದ್ಧ ಮಟ್ಟದಲ್ಲಿ ಪರಿಸ್ಥಿತಿಯನ್ನು ನಿಭಾಯಿಸುತ್ತಿದೆ ಎಂದು ಅಟಾರ್ನಿ ಜನರಲ್ ಅವರು ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠಕ್ಕೆ ತಿಳಿಸಿದರು.

ವೀಡಿಯೋ ಚಿತ್ರೀಕರಣ ಪ್ರಕರಣ ಸಿಐಡಿಗೆ

ಬೆಂಗಳೂರು, ಆ. ೭: ಉಡುಪಿಯ ನೇತ್ರ ಜ್ಯೋತಿ ಅರೆವೈದ್ಯಕೀಯ ಕಾಲೇಜಿನ ಶೌಚಾಲಯದಲ್ಲಿ ವೀಡಿಯೊ ಚಿತ್ರೀಕರಣ ಮಾಡಲಾಗಿದೆ ಎನ್ನುವ ಆರೋಪದ ಪ್ರಕರಣವನ್ನು ಸಿ.ಐ.ಡಿಗೆ ವಹಿಸಲಾಗಿದೆ ಎಂದು ಮುಖ್ಯಮಂತ್ರಿಗಳ ಕಚೇರಿ ತಿಳಿಸಿದೆ. ಮುಖ್ಯಮಂತ್ರಿ ಕಚೇರಿಯ ಅಧಿಕೃತ ಖಾತೆಯಿಂದ ಈ ಬಗ್ಗೆ ಜಾಲತಾಣದಲ್ಲಿ ಮಾಹಿತಿ ನೀಡಲಾಗಿದೆ. “ಉಡುಪಿಯ ಖಾಸಗಿ ಕಾಲೇಜಿನ ಶೌಚಾಲಯದಲ್ಲಿ ವೀಡಿಯೊ ಚಿತ್ರೀಕರಣ ನಡೆಸಲಾಗಿದೆ ಎಂಬ ಆರೋಪವಿದ್ದು, ಇದು ಸೂಕ್ಷö್ಮ ಪ್ರಕರಣವಾಗಿರುವುದರಿಂದ ಹೆಚ್ಚಿನ ತನಿಖೆಗಾಗಿ ಪ್ರಕರಣವನ್ನು ಸಿ.ಐ.ಡಿ ಗೆ ವಹಿಸಿ ಆದೇಶಿಸಲಾಗಿದೆ' ಎಂದು ಮುಖ್ಯಮಂತ್ರಿ ಕಚೇರಿ ಬರೆದುಕೊಂಡಿದೆ.

ಊರಿಗೆ ತೆರಳಲು ನಿಂತಿದ್ದವರ ಮೇಲೆ ಹರಿದ ಕಾರು

ಹಾವೇರಿ, ಆ. ೭: ಊರಿಗೆ ತೆರಳಲು ರಸ್ತೆ ಬದಿ ನಿಂತಿದ್ದವರ ಮೇಲೆ ಕಾರು ಹರಿದು ಇಬ್ಬರು ಭೀಕರವಾಗಿ ಮೃತಪಟ್ಟ ಘಟನೆ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ನೀರಲಗಿ ಗ್ರಾಮದ ಬಳಿ ಇರುವ ಪೂನಾ-ಬೆಂಗಳೂರು ರಾಷ್ಟಿçÃಯ ಹೆದ್ದಾರಿ ೪೮ರಲ್ಲಿ ನಡೆದಿದೆ. ಮೃತರನ್ನು ವಿರುಪಾಕ್ಷಪ್ಪ ಕಾಳಿ (೬೦) ಮತ್ತು ಚಿದಾನಂದ ಕುರುಬರ (೫೩) ಎಂದು ಗುರುತಿಸಲಾಗಿದೆ. ಇಬ್ಬರೂ ನೀರಲಗಿ ಗ್ರಾಮದಿಂದ ಶಿಗ್ಗಾಂವಿ ಪಟ್ಟಣಕ್ಕೆ ಹೋಗಲು ರಾಷ್ಟಿçÃಯ ಹೆದ್ದಾರಿ ಪಕ್ಕದಲ್ಲಿ ನಿಂತಿದ್ದರು. ಆಗ ವೇಗವಾಗಿ ಬಂದ ಕಾರು ಇಬ್ಬರ ಮೇಲೆ ಹರಿದು ದುರ್ಘಟನೆ ಸಂಭವಿಸಿದೆ. ವಿರುಪಾಕ್ಷಪ್ಪ ಕಾಳಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಗಂಭೀರವಾಗಿ ಗಾಯಗೊಂಡಿದ್ದ ಚಿದಾನಂದ ಕುರುಬರ ಸಮಯಕ್ಕೆ ಸರಿಯಾಗಿ ಅಂಬುಲೆನ್ಸ್ ಬಾರದ ಕಾರಣ ಮೃತಪಟ್ಟಿದ್ದಾರೆ. ಅಪಘಾತದ ನಂತರ ಸರಿಯಾದ ಸಮಯಕ್ಕೆ ಅಂಬುಲೆನ್ಸ್ ಬಾರದ್ದರಿಂದ ಆಕ್ರೋಶಗೊಂಡ ಸ್ಥಳೀಯರು ರಾಷ್ಟಿçÃಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದಾರೆ. ಒಂದು ಗಂಟೆಗೂ ಹೆಚ್ಚು ಕಾಲ ಹೆದ್ದಾರಿ ತಡೆದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಬಳಿಕ ಅಪಘಾತ ಸಂಭವಿಸಿದ ಕಾರು ಬೆಳಗಾವಿ ಮೂಲದ್ದು ಎಂದು ಗೊತ್ತಾಗಿದ್ದು, ಚಾಲಕನನ್ನ ಅರ್ಧ ಗಂಟೆಯಲ್ಲಿ ಶಿಗ್ಗಾಂವಿ ಪೊಲೀಸ್ ಪಡೆ ಬಂಧಿಸಿದ್ದಾರೆ.

ಚೆಲುವರಾಯಸ್ವಾಮಿ ವಿರುದ್ಧ ಲಂಚದ ಆರೋಪ

ಬೆಂಗಳೂರು, ಆ. ೭: ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ ವಿರುದ್ಧ ಲಂಚದ ಆರೋಪ ಕೇಳಿಬಂದಿದೆ. ಸಚಿವರು ೬ ರಿಂದ ೮ ಲಕ್ಷ ರೂಪಾಯಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂದು ಜಿಲ್ಲೆಯ ಏಳು ಸಹಾಯಕ ಕೃಷಿ ಅಧಿಕಾರಿಗಳು ಆರೋಪಿಸಿ, ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಮಂಡ್ಯ, ಮಳ್ಳವಳ್ಳಿ, ಕೆ.ಆರ್. ಪೇಟೆ, ನಾಗಮಂಗಲ, ಮದ್ದೂರು, ಶ್ರೀರಂಗಪಟ್ಟಣ ಮತ್ತು ಪಾಂಡವರ ಕೃಷಿ ಸಹಾಯಕ ಅಧಿಕಾರಿಗಳು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದು, ಲಂಚಕ್ಕೆ ಕಡಿವಾಣ ಹಾಕದಿದ್ದರೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ದೂರಿನ ಜೊತೆಗಿನ ಪತ್ರದಲ್ಲಿ ಹೇಳಿದ್ದಾರೆ. ಸಚಿವರ ವಿರುದ್ಧದ ದೂರಿನ ಸಂಬAಧ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಪತ್ರ ಬರೆದಿರುವ ರಾಜ್ಯಪಾಲರು, ಪರಿಶೀಲಿಸುವಂತೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಈ ಮಧ್ಯೆ ದೂರಿನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಚಲುವರಾಯಸ್ವಾಮಿ, ಇಲಾಖೆ ಕಾರ್ಯದರ್ಶಿಯಿಂದ ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ.

ಗುಜರಾತ್‌ನಲ್ಲಿ ಕಾಂಗ್ರೆಸ್ ಜೊತೆ ಎ.ಎ.ಪಿ. ಮೈತ್ರಿ

ಅಹಮದಾಬಾದ್, ಆ. ೭: ಗುಜರಾತ್‌ನಲ್ಲಿ ಎಎಪಿ ಮತ್ತು ಕಾಂಗ್ರೆಸ್ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಸೀಟು ಹಂಚಿಕೆ ಸೂತ್ರದಡಿ ಸ್ಪರ್ಧಿಸಲಿವೆ ಎಂದು ಆಮ್ ಆದ್ಮಿ ಪಕ್ಷದ ಗುಜರಾತ್ ಘಟಕದ ಮುಖ್ಯಸ್ಥ ಇಸುದನ್ ಗಧ್ವಿ ಅವರು ಸೋಮವಾರ ಹೇಳಿದ್ದಾರೆ. ಎರಡು ಪಕ್ಷಗಳು ವಿರೋಧ ಪಕ್ಷಗಳ ಮೈತ್ರಿಕೂಟ IಓಆIಂದ ಸದಸ್ಯರಾಗಿದ್ದಾರೆ. ಇನ್ನು ಗಧ್ವಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಪಕ್ಷವು ಕೇಂದ್ರ ನಾಯಕರ ನಿರ್ದೇಶನಗಳನ್ನು ಪಾಲಿಸುತ್ತದೆ ಎಂದು ಹೇಳಿದೆ. ಎಎಪಿ ಮತ್ತು ಕಾಂಗ್ರೆಸ್ ನಡುವಿನ ಮೈತ್ರಿಯಿಂದ, ಆಡಳಿತ ಪಕ್ಷದ ಚುನಾವಣಾ ಭವಿಷ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಭಾರತೀಯ ಜನತಾ ಪಕ್ಷ ಹೇಳಿದೆ ಮತ್ತು ಎಎಪಿ ಕಾಂಗ್ರೆಸ್‌ನ ಬಿ ಟೀಮ್ ಎಂದು ಟೀಕಿಸಿದೆ. ಎಎಪಿ ಮತ್ತು ಕಾಂಗ್ರೆಸ್ ಎರಡೂ ಇಂಡಿಯಾ ಮೈತ್ರಿಕೂಟದ ಭಾಗವಾಗಿವೆ. ಈ ಚುನಾವಣಾ ಮೈತ್ರಿ ಗುಜರಾತ್‌ನಲ್ಲಿಯೂ ಜಾರಿಗೆ ಬರಲಿದೆ. ಮೈತ್ರಿಯ ಮಾತುಕತೆಗಳು ಪ್ರಾಥಮಿಕ ಹಂತದಲ್ಲಿದ್ದರೂ, ಮುಂಬರುವ ಲೋಕಸಭೆಯಲ್ಲಿ ಆಪ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳು ಒಟ್ಟಾಗಿ ಹೋರಾಡುವುದು ಖಚಿತ. ಸೀಟು ಹಂಚಿಕೆ ಸೂತ್ರದ ಅಡಿಯಲ್ಲಿ ಗುಜರಾತ್‌ನಲ್ಲಿ ಲೋಕಸಭೆ ಚುನಾವಣೆ ಎದುರಿಸಲಿವೆ.