ಶ್ರೀಮಂಗಲ, ಆ. ೭: ಜಿಲ್ಲೆಯಲ್ಲಿ ಪ್ರಥಮವಾಗಿ ಜನತೆಗೆ ಉತ್ತಮ ಹಾಗೂ ತುರ್ತು ಚಿಕಿತ್ಸೆಯ ಕಾಳಜಿಯಿಂದ ಸುಸಜ್ಜಿತ ಮೊಬೈಲ್ ಐಸಿಯು ಆ್ಯಂಬುಲೆನ್ಸ್ ಸ್ಥಾಪನೆ ಮಾಡಲಾಗುತ್ತಿದ್ದು, ಇದೇ ಆಗಸ್ಟ್ ಅಂತ್ಯದೊಳಗೆ ಈ ಘಟಕ ಕಾರ್ಯಾರಂಭ ಮಾಡಲಿದೆ ಎಂದು ಗೋಣಿಕೊಪ್ಪ ಲೋಪಮುದ್ರಾ ಮೆಡಿಕಲ್ ಸೆಂಟರ್ ಮುಖ್ಯ ವೈದ್ಯಾಧಿಕಾರಿ ಮುಕ್ಕಾಟಿರ ಡಾ.ಅಮೃತ್ ನಾಣಯ್ಯ ಅವರು ತಿಳಿಸಿದರು.
ಅವರು ಕುಟ್ಟ ಕೊಡವ ಸಮಾಜದ ಆಶ್ರಯದಲ್ಲಿ ಕುಟ್ಟ ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ಕಕ್ಕಡ ಪದ್'ನೆಟ್ಟ್ ಕಾರ್ಯಕ್ರಮದ ವೇದಿಕೆ ಕಾರ್ಯಾಕ್ರಮ ಉದ್ಘಾಟಿಸಿ ಮಾತನಾಡಿದರು.
ವೈದ್ಯಕೀಯ ಶಿಕ್ಷಣ ಪೂರ್ಣಗೊಳಿಸಿ ೧೧ ವರ್ಷಗಳು ಆಗಿವೆ, ಗೋಣಿಕೊಪ್ಪದಲ್ಲಿ ಎಲ್.ಎಂ.ಸಿ. ಆಸ್ಪತ್ರೆ ನಿರ್ಮಿಸಿ ೮ ವರ್ಷವಾಗಿವೆ. ಕೊಡಗಿನ ಜನತೆಗೆ ಅದರಲ್ಲೂ ಗ್ರಾಮೀಣ ಭಾಗದ ಜನತೆಗೆ ತುರ್ತು ಆರೋಗ್ಯ ಸೇವೆ ತಲುಪಿಸಲು ಮತ್ತು ವಿಸ್ತರಿಸಲು ಎಲ್ಲಾ ಪ್ರಯತ್ನ ಮಾಡಲಾಗುತ್ತದೆ. ಶಾಸಕ ಅಜ್ಜಿಕುಟ್ಟಿರ. ಎಸ್. ಪೊನ್ನಣ್ಣ ಅವರೊಂದಿಗೆ ಸಮಾಲೋಚನೆ ನಡೆಸಿ ಕೊಡಗಿನಲ್ಲಿ ಮೊಬೈಲ್ ಐ.ಸಿ.ಯು.(ತೀವ್ರ ನಿಗಾ ಘಟಕ) ಘಟಕವನ್ನು ತಜ್ಞ ವೈದ್ಯರು ಹಾಗೂ ಸಿಬ್ಬಂದಿಗಳೊAದಿಗೆ ಕಾರ್ಯಾರಂಭ ಮಾಡಲು ಯೋಜನೆ ರೂಪಿಸಲಾಗಿದೆ. ಶಾಸಕ ಪೊನ್ನಣ್ಣ ಅವರು ಈ ಯೋಜನೆಗೆ ಸ್ಪಂದಿಸಿ ಅವರು ಸಹ ಬೆಂಬಲ ನೀಡಿದ್ದು ಲೋಪಮುದ್ರಾ ಹಾಗೂ ಮೈಸೂರಿನ ಅಪೋಲೋ ಆಸ್ಪತ್ರೆ ಸಹಯೋಗದಲ್ಲಿ ತುರ್ತು ಐಸಿಯು ಮೊಬೈಲ್ ಘಟಕವನ್ನು ಸ್ಥಾಪಿಸಲಾಗುತ್ತಿದೆ, ಹೆಲ್ಪ್ ಲೈನ್ ಮೂಲಕ ಸೇವೆ ಪಡೆಯಬಹುದು ಎಂದು ವಿವರಿಸಿದರು. ಇದಕ್ಕೆ ಜನತೆಯ ಬೆಂಬಲ ಸಹ ಅಗತ್ಯ ಎಂದು ಹೇಳಿದರು. ತುರ್ತು ಚಿಕಿತ್ಸೆ ಸಂದರ್ಭ ಬೆಂಗಳೂರು, ಮೈಸೂರು, ಮಂಗಳೂರಿಗೆ ತಲುಪಲು ಎರಡರಿಂದ ನಾಲ್ಕು ಗಂಟೆಗಳು ಬೇಕಾಗುತ್ತವೆ. ರೋಗಿಯ ಪ್ರಾಣ ಉಳಿಸುವಲ್ಲಿ ಪ್ರಥಮ ಚಿಕಿತ್ಸೆ ನಿರ್ಣಾಯಕವಾಗಿದೆ. ಆದ್ದರಿಂದ ಮೊಬೈಲ್ ಐಸಿಯು ಘಟಕವನ್ನು ಸ್ಥಾಪಿಸಲಾಗುತ್ತಿದೆ. ಪ್ರಥಮ ಚಿಕಿತ್ಸೆ ನೀಡಿದ ನಂತರ ರೋಗಿ ಅಥವಾ ಅವರ ಕಡೆಯವರು ಇಚ್ಛಿಸುವ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ಹೇಳಿದರು.
ಮತ್ತೋರ್ವ ಮುಖ್ಯ ಅತಿಥಿ ಮುಕ್ಕಾಟಿರ ಡಾ. ಸೌಮ್ಯ ನಾಣಯ್ಯ ಅವರು ಮಾತನಾಡಿ, ಕೊಡವ ಜನಾಂಗದಲ್ಲಿ ಹೆಣ್ಣು ಮಕ್ಕಳು ಮತ್ತು ಗಂಡು ಮಕ್ಕಳ ನಡುವೆ ಯಾವುದೇ ತಾರತಮ್ಯವನ್ನು ಮಾಡದೇ ತಂದೆ-ತಾಯAದಿರು ಸ್ವತಂತ್ರವಾಗಿ ಬೆಳೆಸುತ್ತಾರೆ. ಆದ್ದರಿಂದ ಇಂದಿನ ಕಾರ್ಯಕ್ರಮದಲ್ಲಿ ವಿವಿಧ ಮಳಿಗೆಗಳು, ಆಹಾರ ತಯಾರಿಕೆ, ಅಲಂಕಾರಿಕ ವಸ್ತುಗಳ ಮತ್ತು ಹೂ ಗಿಡಗಳ ಮಳಿಗೆಗಳಲ್ಲಿ ಯುವತಿಯರು ಹಾಗೂ ಮಹಿಳೆಯರೇ ಕಾಣುತ್ತಿದ್ದಾರೆ. ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸುವುದು ಹಾಗೂ ಸಂಭ್ರಮದಲ್ಲಿ ಮಹಿಳೆಯರ ಪಾತ್ರ ವಿಶೇಷವಾಗಿದೆ ಎಂದು ಹೇಳಿದರು.
ತಮ್ಮ ವೃತ್ತಿ ಬಗ್ಗೆ ಮಾತನಾಡಿದ ಅವರು ಜಿಲ್ಲೆಯ ಜನತೆಗೆ ಉತ್ತಮ ಮಟ್ಟದ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಕೊಡಗಿನಲ್ಲಿ ಮಹಿಳಾ ವೈದ್ಯೆಯಾಗಿ ಸ್ಥಾಪಿಸಿರುವ ಕಣ್ಣಿನ ಆಸ್ಪತ್ರೆ ನಮ್ಮದಾಗಿದ್ದು, ಬೆಂಗಳೂರು ಮೈಸೂರು ಮತ್ತು ಮಂಗಳೂರು ಮಹಾನಗರದ ಆಸ್ಪತ್ರೆಯ ಗುಣಮಟ್ಟದಲ್ಲಿ ಆಧುನಿಕ ತಂತ್ರಜ್ಞಾನದ ಕಣ್ಣಿನ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡವ ಸಮಾಜಗಳ ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಅವರು ಜಿಲ್ಲೆಯ ಗಡಿ ಕುಟ್ಟದಲ್ಲಿ ೧೧ ವರ್ಷಗಳ ಹಿಂದೆ ಕೊಡವ ಸಮಾಜ ಸ್ಥಾಪನೆಯಾಗಿದ್ದು, ಕಳೆದ ೭ ವರ್ಷಗಳಿಂದ ನಿರಂತರವಾಗಿ ಕಕ್ಕಡ- ೧೮ ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಸಾಮೂಹಿಕವಾಗಿ ಹಬ್ಬ ಆಚರಣೆಯಿಂದ ಸಂಬAಧಗಳು ಬೆಳೆಯುತ್ತವೆ ಮತ್ತು ಹಬ್ಬಗಳ ಆಚರಣೆಯಿಂದ ಸಂಸ್ಕೃತಿ ಉಳಿಯುತ್ತದೆ ಎಂದು ಅಭಿಪ್ರಾಯಪಟ್ಟರು.
ಕೊಡಗಿನ ಬಹಳಷ್ಟು ಯುವಕರು, ಯುವತಿಯರು ಕೊಡಗಿನಲ್ಲಿ ಮತ್ತು ಹೊರಗೆ ಶಿಕ್ಷಣ ಮತ್ತು ಉನ್ನತ ಶಿಕ್ಷಣ ಪಡೆದು ಜಿಲ್ಲೆಯ ಹೊರಗೆ ಮತ್ತು ವಿದೇಶಗಳಲ್ಲಿ ದೊಡ್ಡಮಟ್ಟದ ಉದ್ಯೋಗದೊಂದಿಗೆ ನೆಲೆಸಿದ್ದಾರೆ. ನೆಲೆಸಲು ಬಯಸುತ್ತಾರೆ. ಆದರೆ ಇಂದಿನ ಕಾರ್ಯಕ್ರಮದ ಅತಿಥಿಗಳಾದ ಡಾ. ಅಮೃತ್ ನಾಣಯ್ಯ ಮತ್ತು ಡಾ.ಸೌಮ್ಯ ನಾಣಯ್ಯ ಅವರು ಹೊರಗೆ ನೆಲೆಸಿ ಹಣ ಮಾಡುವ ಹಂಬಲ ವ್ಯಕ್ತಪಡಿಸದೇ ತಾವು ಹುಟ್ಟಿ ಬೆಳೆದ ಜಿಲ್ಲೆಯ ಜನರಿಗೆ ಆರೋಗ್ಯ ಸೇವೆ ನೀಡುವ ನಿಟ್ಟಿನಲ್ಲಿ ಸುಸಜ್ಜಿತವಾದ ಆಸ್ಪತ್ರೆಯನ್ನು ತೆರೆದು ಜನಸೇವೆಗೆ ಮುಂದಾಗಿರುವುದು ಹೆಮ್ಮೆ ಮತ್ತು ಆದರ್ಶದ ವಿಷಯವಾಗಿದೆ.
ಜಿಲ್ಲೆಯ ಜನರಿಗೆ ತುರ್ತು ಮತ್ತು ತಜ್ಞ ವೈದ್ಯರ ಆರೋಗ್ಯ ಸೇವೆಗಳಿಗೆ ಬೆಂಗಳೂರು, ಮೈಸೂರು, ಮಂಗಳೂರು ಗಳನ್ನು ಅವಲಂಬಿಸಬೇಕಾಗಿತ್ತು. ಆದರೆ ಇದೀಗ ಇಂತಹ ಚಿಕಿತ್ಸೆ ಹಾಗೂ ಆರೋಗ್ಯ ಸೇವೆ ಜಿಲ್ಲೆಯಲ್ಲಿ ಇವರಿಂದ ದೊರೆಯುವಂತಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಕ್ಕಡ ಪದ್'ನೆಟ್ಟ್ ಹಬ್ಬದ ವಿಶೇಷ ಖಾದ್ಯದೊಂದಿಗೆ ಮಹಿಳೆಯರ ಕರಕುಶಲ ವಸ್ತುಗಳು, ಬುಟ್ಟಿಗಳು, ಅಲಂಕಾರಿಕ ವಸ್ತುಗಳು, ಉಡುಪುಗಳು, ಉಪ್ಪಿನಕಾಯಿ, ವಿವಿಧ ಖಾದ್ಯ, ವಿವಿಧ ವೈವಿಧ್ಯಮಯ ಅಡುಗೆ ಇತ್ಯಾದಿಗಳ ಪ್ರದರ್ಶನ ಹಾಗೂ ಮಾರಾಟಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿತು.
ವೇದಿಕೆಯಲ್ಲಿ ಕುಟ್ಟ ಕೊಡವ ಸಮಾಜದ ಉಪಾಧ್ಯಕ್ಷ ಹೊಟ್ಟೇಂಗಡ ರಮೇಶ್, ಕಾರ್ಯದರ್ಶಿ ಕೊಂಗAಡ ಸುರೇಶ್ ದೇವಯ್ಯ, ಉಪ ಕಾರ್ಯದರ್ಶಿ ತೀತಿರ ಮಂದಣ್ಣ, ಖಜಾಂಚಿ ಮಚ್ಚಮಾಡ ಸುಬ್ರಮಣಿ, ನಿರ್ದೇಶಕರುಗಳಾದ ಕೇಚಮಾಡ ವಾಸು ಉತ್ತಪ್ಪ, ಚೆಪ್ಪುಡಿರ ಪಾರ್ಥ, ಮಹಿಳಾ ಘಟಕದ ಅಧ್ಯಕ್ಷೆ ಕಳ್ಳಿಚಂಡ ಶಾಲಿನಿ ಕಾರ್ಯಪ್ಪ, ತೀತಿರ ಮೇಘನಾ ತಿಮ್ಮಯ್ಯ, ಮಚ್ಚಮಾಡ ನವ್ಯ ಪ್ರಕಾಶ್, ಕೋಳೆರ ಪ್ರಿಯ, ಕಳ್ಳಂಗಡ ಅಪ್ಪಣ್ಣ, ತೀತಿರ ಕಬೀರ್ ತಿಮ್ಮಯ್ಯ, ಮಚ್ಚಮಾಡ ಪ್ರಕಾಶ್, ಬಾಚಣಿಯಂಡ ಪ್ರಕಾಶ್, ಕೊಡವ ಸಮಾಜಕ್ಕೆ ಜಾಗ ದಾನಿಗಳಾದ ಚೆಕ್ಕೇರ ರಾಬಿನ್ ದೇವಯ್ಯ, ಮುಕ್ಕಾಟಿರ ರಾಜ ಮಂದಣ್ಣ ಹಾಜರಿದ್ದರು. ಕೇಚಮಾಡ ಬೀನಾ ಉತ್ತಪ್ಪ ಮತ್ತು ತೀತಿರ ಪುಸಿ ಅಪ್ಪಣ್ಣ ಪ್ರಾರ್ಥಿಸಿದರು.
(ಹರೀಶ್ ಮಾದಪ್ಪ)