ಗುಡ್ಡೆಹೊಸೂರು, ಆ. ೭: ಇಲ್ಲಿನ ಬೊಳ್ಳೂರು ಗ್ರಾಮದ ನಿವಾಸಿ ಟಿ.ಬಿ.ಸತೀಶ್ ಅವರ ಮನೆಗೆ ರಾತ್ರಿ ಸಮಯದಲ್ಲಿ ನುಗ್ಗಿದ ಕಳ್ಳರು ಚಿನ್ನ ಸೇರಿದಂತೆ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಿದ್ದಾರೆ. ಕಳೆದ ಎರಡು ದಿನಗಳಿಂದ ಸತೀಶ್ ಅವರು ಮನೆಯಲ್ಲಿ ಇಲ್ಲದ ಸಮಯದಲ್ಲಿ ಈ ಘಟನೆ ನಡೆದಿದೆ. ಮನೆಯ ಒಳಪ್ರವೇಶಿಸಿದ ಕಳ್ಳರು ಮೊದಲಿಗೆ ಸಿ.ಸಿ. ಟಿ.ವಿ.ಯ ಡಿ.ವಿ.ಆರ್ ಅನ್ನು ಬಿಚ್ಚಿದ್ದು ನಂತರ ಮನೆಯನ್ನು ಜಾಲಾಡಿದ್ದಾರೆ. ಗುತ್ತಿಗೆದಾರರಾದ ಸತೀಶ್ ತಮ್ಮ ಪುತ್ರ ಮಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಪುತ್ರನನ್ನು ಭೇಟಿಯಾಗಲು ಹೋದ ಸಂದರ್ಭ ಈ ಕಳ್ಳತನ ನಡೆದಿದೆ.

ಕುಶಾಲನಗರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಶ್ವಾನದಳ ತೆರಳಿ ಪರಿಶೀಲನೆ ನಡೆಸಿದೆ. ಕಳ್ಳರಿಗಾಗಿ ಪೋಲಿಸರು ಅಕ್ಕಪಕ್ಕದ ಸಿ.ಸಿ. ಟಿ.ವಿ.ಯನ್ನು ಪರಿಶೀಲನೆ ನಡೆಸುತ್ತಿದ್ದಾರೆ.