ಗೋಣಿಕೊಪ್ಪಲು, ಆ. ೭: ಕಾರ್ಮಿಕರಲ್ಲಿ ಭಯ ಹುಟ್ಟಿಸಿದ ಭಾರಿ ಗಾತ್ರದ ಹೆಬ್ಬಾವೊಂದನ್ನು ಸೆರೆ ಹಿಡಿಯುವ ಮೂಲಕ ಹಾವನ್ನು ಬ್ರಹ್ಮಗಿರಿ ರಕ್ಷಿತಾರಣ್ಯಕ್ಕೆ ಸುರಕ್ಷಿತವಾಗಿ ಬಿಡಲಾಗಿದೆ. ವನ್ಯಜೀವಿ ವಿಭಾಗದ ಶ್ರೀಮಂಗಲ ವ್ಯಾಪ್ತಿಯ ಬೋಸ್ ಮಾದಪ್ಪ ಅವರು ಹಾವನ್ನು ಸೆರೆ ಹಿಡಿದು ಅರಣ್ಯಕ್ಕೆ ಬಿಡುವಲ್ಲಿ ಯಶಸ್ವಿ ಯಾಗಿದ್ದಾರೆ.

ಕಳೆದ ೨ ದಿನಗಳ ಹಿಂದೆ ದ.ಕೊಡಗಿನ ಕುಟ್ಟ ಸಮೀಪದ ಮಂಚಳ್ಳಿ ಗ್ರಾಮದ ಕಾಫಿ ಬೆಳೆಗಾರರಾದ ಅಪ್ಪಂಡೇರAಡ ಜೀವನ್ ಎಂಬವರ ಲೈನ್ ಮನೆಯ ಮುಂಭಾಗದ ಕಾಫಿ ತೋಟದಲ್ಲಿ ಭಾರಿ ಗಾತ್ರದ ಹೆಬ್ಬಾವನ್ನು ಕಂಡ ತೋಟದ ಕಾರ್ಮಿಕರು ಭಯಗೊಂಡಿದ್ದರು. ಹೆಬ್ಬಾವು ಇರುವ ಬಗ್ಗೆ ಮಾಲೀಕರಿಗೆ ಮಾಹಿತಿ ಒದಗಿಸಿದರು.

ಕಾಫಿ ತೋಟದಲ್ಲಿ ಕಾರ್ಮಿಕರು ಕೆಲಸ ನಿರ್ವಹಿಸಲು ಹಿಂದೇಟು ಹಾಕುವುದನ್ನು ಮನಗಂಡ ತೋಟದ ಮಾಲೀಕ ಜೀವನ್ ಅವರು ಹೆಬ್ಬಾವನ್ನು ಹಿಡಿಯುವಂತೆ ವನ್ಯಜೀವಿ ವಾರ್ಡನ್ ಬೋಸ್ ಮಾದಪ್ಪನವರಿಗೆ ವಿಷಯ ತಿಳಿಸಿದ್ದರು. ಕಾರ್ಯಕ್ರಮವೊಂದರಲ್ಲಿದ್ದ ಬೋಸ್ ಅವರು ತಮ್ಮ ಸ್ನೇಹಿತರಾದ ಚೇಂದAಡ ಅಯ್ಯಪ್ಪ ಅವರೊಂದಿಗೆ ಮಂಚಳ್ಳಿ ಗ್ರಾಮಕ್ಕೆ ತೆರಳಿ ಜೀವನ್ ಅವರ ಲೈನ್‌ಮನೆ ಸಮೀಪವಿರುವ ಕಾಫಿ ತೋಟದಲ್ಲಿ ಮಲಗಿದ್ದ ಭಾರಿ ಗಾತ್ರದ ಹೆಬ್ಬಾವನ್ನು ಹಿಡಿದು ಬ್ರಹ್ಮಗಿರಿ ಬೆಟ್ಟ ಸಾಲಿನ ರಕ್ಷಿತಾರಣ್ಯಕ್ಕೆ ಈ ಹೆಬ್ಬಾವನ್ನು ಬಿಟ್ಟಿದ್ದಾರೆ. -ಹೆಚ್.ಕೆ.ಜಗದೀಶ್